ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕಾರಣಕ್ಕಾಗಿ ಅಸಭ್ಯ ಭಾಷೆ ಬಳಕೆ: ಪ್ರಲ್ಹಾದ ಜೋಶಿ ಟೀಕೆ

Published 5 ಏಪ್ರಿಲ್ 2024, 7:22 IST
Last Updated 5 ಏಪ್ರಿಲ್ 2024, 7:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಕಾಂಗ್ರೆಸ್‌ನವರು ರಾಜಕಾರಣಕ್ಕಾಗಿ ಕೀಳುಮಟ್ಟದ, ಅಸಭ್ಯ ಭಾಷೆ ಬಳಸುತ್ತಿದ್ದಾರೆ. ನಾವೆಂದೂ ಇಂತಹ ಭಾಷೆ ಬಳಸಿಲ್ಲ' ಎಂದು ಧಾರವಾಡ‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಕಿಡಿಕಾರಿದರು.

ನಗರದ ಇಂದಿರಾ ಗಾಜಿನಮನೆ ಆವರಣದಲ್ಲಿರುವ ಬಾಬು ಜಗಜೀವನ್ ರಾಮ್ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಿದ‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

'ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿ ಇದ್ದಾಗ ಸೋನಿಯಾ ಗಾಂಧಿ ಬಗ್ಗೆ ಏನೆಲ್ಲ ಮಾತನಾಡಿದ್ದರು ಎಂದು ಗೊತ್ತಿದೆ. ಇದೀಗ ಅಪ್ರಬುದ್ಧ ರಾಹುಲ್ ಗಾಂಧಿ ಅವರನ್ನು ಓಲೈಸಲು, ಅವರ ಮುಂದೆ ಸೊಂಟ ಬಗ್ಗಿಸಿ ನಿಲ್ಲುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಲು ವಿರೋಧ ವ್ಯಕ್ತಪಡಿಸಿದ ಇವರಿಗೆ ದಲಿತರ ಬಗ್ಗೆ‌ ಪ್ರೀತಿ ಇದೆಯೇ' ಎಂದು ಪ್ರಶ್ನಿಸಿದರು.

'ಬಿಜೆಪಿಯಲ್ಲಿ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಕುಟುಂಬ ಆಧರಿಸಿ ನಡೆಯುವುದಿಲ್ಲ. ಪ್ರತಿಯೊಂದು ವಿಷಯವನ್ನೂ ಸುದೀರ್ಘವಾಗಿ ಚರ್ಚಿಸುತ್ತೇವೆ. ನಾಮಕಾವಸ್ತೆಗೆ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ ಕಾಂಗ್ರೆಸ್ ನವರು ನಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ' ಎಂದು ಛೇಡಿಸಿದರು.

'ಶ್ರೀರಾಮನ ಬಗ್ಗೆ ಭಯ ಇರುವ ಕಾರಣದಿಂದಲೇ ಜೈಶ್ರೀರಾಮ್ ಎಂದು ಘೋಷಣೆ ಕೂಗಿದರು. ಈಗ ಇದರಿಂದ ಹೊಟ್ಟೆ ತುಂಬುದಿಲ್ಲ ಎನ್ನುತ್ತಾರೆ' ಎಂದು ಟೀಕಿಸಿದರು.

'ನಾವು ಮಾಡಿದ ಕೆಲಸವನ್ನು ಜನರ ಮುಂದೆ ಹೇಳೋದು ಬೇಡವೇ? ಕಾಂಗ್ರೆಸ್ ನವರು ಏಕೆ ಉಚಿತ ಭಾಗ್ಯಗಳ ಬಗ್ಗೆ ಪ್ರಚಾರ ಮಾಡುತ್ತಾರೆ? ಒಂದು ಕಾಳು ಅಕ್ಕಿಯನ್ನೂ ಕೊಡದೆ ಅನ್ನಭಾಗ್ಯದ ಪ್ರಚಾರ ಮಾಡುತ್ತಾರೆ. ನಾವು ಕೊಟ್ಟ ಅಕ್ಕಿಯನ್ನು ಅವರೇ ಕೊಟ್ಟಿದ್ದಾಗಿ ಹೇಳಿಕೊಳ್ಳುತ್ತಾರೆ. 200 ಯುನಿಟ್ ಉಚಿತ ವಿದ್ಯುತ್ ಯಾರಿಗೆ ಸಿಕ್ಕಿದೆ, ಉದಾಹರಣೆ ನೀಡಲಿ. ಗ್ಯಾರಂಟಿ ಯೋಜನೆಗಳು ಎಲ್ಲರನ್ನೂ ತಲುಪಿವೆ ಎಂದು ಲೆಕ್ಕ ನೀಡುತ್ತಾರೆ. ಪ್ರಚಾರ ಸಹಜ ಪ್ರಕ್ರಿಯೆ. ಸಚಿವ ಸಂತೋಷ‌ಲಾಡ್ ಅವರು ಒತ್ತಡದಿಂದಲೋ, ವಿಶ್ವಾಸ ಕಳೆದುಕೊಂಡೋ‌ ಬಿಜೆಪಿ ಟೀಕಿಸುತ್ತಿದ್ದಾರೆ' ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT