ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ವರಮಹಾಲಕ್ಷ್ಮಿ ಹಬ್ಬ: ಮನೆ, ದೇಗುಲಗಳಲ್ಲಿ ವಿಶೇಷ ಪೂಜೆ

ಲಕ್ಷ್ಮಿ ದೇವಿಗೆ ಹೊಸ ನೋಟುಗಳ ಅಲಂಕಾರ, ಸಿಹಿ ತಿನಿಸುಗಳ ನೈವೇದ್ಯ
Published 25 ಆಗಸ್ಟ್ 2023, 16:30 IST
Last Updated 25 ಆಗಸ್ಟ್ 2023, 16:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಮುಂಜಾನೆಯೇ ಎದ್ದು ಮನೆಯನ್ನು ಅಲಂಕರಿಸಿ, ಅಂಗಳದಲ್ಲಿ ಆಕರ್ಷಕ ರಂಗೋಲಿಯ ಚಿತ್ತಾರವನ್ನು ಬಿಡಿಸಿ, ಹೊಸಬಟ್ಟೆಗಳನ್ನು ತೊಟ್ಟು ಲಕ್ಷ್ಮಿ ದೇವಿಯ ಕಳಶ ಪ್ರತಿಷ್ಠಾಪಿಸಿ, ಅರಿಸಿನ–ಕುಂಕುಮದಿಂದ ಅಲಂಕರಿಸಿ, ಚಿನ್ನಾಭರಣ, ಸೀರೆ, ಹೂವು, ಬಾಳೆಕಂಬಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿದರು.

ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿದೇವಿಯ ಪೂಜೆಯು ಮನೆಗಳಲ್ಲಿ ಮಾತ್ರ ಸೀಮಿತವಾಗಿರಲಿಲ್ಲ. ಅಂಗಡಿ–ಮುಂಗಟ್ಟುಗಳಲ್ಲಿಯೂ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿಸಿ, ಪೂಜಿಸಲಾಯಿತು. ಪೂಜೆಯ ವೇಳೆಯಲ್ಲಿ ದೇವಿಯ ನೈವೇದ್ಯಕ್ಕಾಗಿ ಐದಾರು ತರಹದ ಹಣ್ಣುಗಳು, ಹೋಳಿಗೆ, ಕಡುಬು ಸೇರಿದಂತೆ ಬಗೆ ಬಗೆಯ ಸಿಹಿ ತಿನಿಸು ತಯಾರಿಸಿ, ಪೂಜೆಗೆ ಇಡಲಾಗಿತ್ತು. ಕೆಲ ಮನೆಗಳಲ್ಲಿ ಮಹಿಳೆಯರು ಮುತ್ತೈದೆಯರನ್ನು ಮನೆಗೆ ಕರೆಯಿಸಿ ಅವರಿಗೆ ಅರಿಸಿನ– ಕುಂಕುಮ ನೀಡುವ ಶಾಸ್ತ್ರವನ್ನೂ ಮಾಡಿದ್ದು ಕಂಡುಬಂದಿತು.

ಹೊಸ ನೋಟುಗಳ ಹಾರ: ಹಬ್ಬದ ಅಂಗವಾಗಿ ಇಲ್ಲಿನ ದಾಜೀಬಾನ ಪೇಟೆಯಲ್ಲಿನ ಮಹಾಲಕ್ಷ್ಮಿ ದೇಗುಲದಲ್ಲಿ ಲಕ್ಷ್ಮಿ ದೇವಿಗೆ ವಿಶೇಷವಾಗಿ ವಿಷ್ಣುಪ್ರಿಯಾ ಅಲಂಕಾರ ಮಾಡಿ, ಹೊಸ ನೋಟುಗಳ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ತುಳಜಾ ಭವಾನಿ ದೇವಸ್ಥಾನ, ಗಾಳಿ ದುರ್ಗಮ್ಮ ದೇಗುಲ, ಜನತಾ ಬಜಾರ್‌ನಲ್ಲಿರುವ ಲಕ್ಷ್ಮಿ ದೇವಸ್ಥಾನ, ನಾಗಶೆಟ್ಟಿಕೊಪ್ಪದ ಮಹಾಲಕ್ಷ್ಮಿ ದೇವಸ್ಥಾನ, ವಿದ್ಯಾನಗರದ ಲಕ್ಷ್ಮಿ ದೇವಸ್ಥಾನ ಹೀಗೆ ನಗರದಲ್ಲಿನ ಬಹುತೇಕ ದೇವಿಯ ದೇಗುಲಗಳಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜಾ ಕೈಂಕರ್ಯ ನಡೆಸುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

’ವರಮಹಾಲಕ್ಷ್ಮಿ ಹಬ್ಬವನ್ನು ಕಳೆದ 15ವರ್ಷಗಳಿಂದ ನಾವು ಆಚರಿಸುತ್ತಾ ಬಂದಿದ್ದೇವೆ. ಮುಂಜಾನೆಯೇ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಹೂವು–ಹಣ್ಣುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಸುತ್ತಮುತ್ತಲಿನ ಮನೆಯ ಮಹಿಳೆಯರನ್ನು ಮನೆಗೆ ಆಹ್ವಾನಿಸಿ, ಅವರಿಗೆ ಅರಿಸಿನ ಕುಂಕುಮ ನೀಡುವ ನೀಡುವ ಮೂಲಕ ಉಡಿತುಂಬುವ ಶಾಸ್ತ್ರವನ್ನೂ ಮಾಡಲಾಯಿತು’ ಎಂದು ಅಕ್ಷಯ ಕಾಲೊನಿಯ ನಿವಾಸಿ ವಿಜಯಲಕ್ಷ್ಮಿ ಕಟ್ಟಿಮಠ ಹೇಳಿದರು. 

ಹುಬ್ಬಳ್ಳಿಯ ಜನತಾಬಜಾರ್‌ನಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವಿಗೆ ಹೊಸ ನೋಟುಗಳ ಅಲಂಕಾರ ಮಾಡಿ ಪೂಜಿಸಲಾಯಿತು
ಹುಬ್ಬಳ್ಳಿಯ ಜನತಾಬಜಾರ್‌ನಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವಿಗೆ ಹೊಸ ನೋಟುಗಳ ಅಲಂಕಾರ ಮಾಡಿ ಪೂಜಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT