ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಮಹಿಳೆಯರಿಗೆ ಅರಿಸಿನ–ಕುಂಕುಮ ಹಚ್ಚಿ, ಬಾಗಿನ ನೀಡಿ ಆಶೀರ್ವಾದ ಪಡೆದ ವ್ರತಾಧಾರಿಣಿಯರು
Published 16 ಆಗಸ್ಟ್ 2024, 16:03 IST
Last Updated 16 ಆಗಸ್ಟ್ 2024, 16:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮಿ ವ್ರತವನ್ನು ಶುಕ್ರವಾರ ನಗರದಲ್ಲಿ ಮಹಿಳೆಯರು ಭಕ್ತಿಭಾವ, ಸಂಭ್ರಮದಿಂದ ಆಚರಿಸಿದರು.

ವರಮಹಾಲಕ್ಷ್ಮಿ ವ್ರತಾಚರಣೆಯಿಂದ ಸುಖ, ಸಂಪತ್ತು ಸಮೃದ್ಧಿಯಾಗಲಿದೆ. ಸಂಸಾರದಲ್ಲಿ ಉತ್ತಮ ಫಲ ಲಭಿಸಲಿದೆ ಎಂಬ ನಂಬಿಕೆಯಿಂದ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ. ಮಹಿಳೆಯರು ಬೆಳಿಗ್ಗೆಯಿಂದಲೇ ಉಪವಾಸವಿದ್ದು, ಕಂಕಣ ಕಟ್ಟಿಕೊಂಡು, ಬೆಳಿಗ್ಗೆ ಕಲಶ ಸ್ಥಾಪಿಸಿ, ಮಹಾಲಕ್ಷ್ಮಿಯನ್ನು ಅಲಂಕರಿಸಿದರು. ನೈವೇದ್ಯಕ್ಕಾಗಿ  ಚಕ್ಲಿ, ಕೋಡಬಳೆ, ಕರ್ಜಿಕಾಯಿ, ಪೂರಿ, ಶಂಕರಪೋಳೆ, ಉಂಡಿ, ಲಾಡು ಸಮೇತ ಬಗೆಬಗೆಯ ಹಣ್ಣುಗಳನ್ನು ಇಟ್ಟು ಪೂಜಿಸಿದರು. 

ಓಂ ಶ್ರೀಂ ಮಹಾಲಕ್ಷ್ಮಿಯೇ ನಮಃ, ಓಂ ಹ್ರೀಂ ಶ್ರೀಂ ಲಕ್ಷ್ಮೀಭಯೋ ನಮಃ, ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಮಂತ್ರಗಳನ್ನು ಪಠಿಸಿದರು. ಬಂಧುಗಳು, ಆಪ್ತರು, ಸ್ನೇಹಿತೆಯರ ಬಳಗವನ್ನು ಪೂಜೆಗೆ ಕರೆದು ಅರಿಸಿನ–ಕುಂಕುಮ ಹಚ್ಚಿ, ಬಾಗಿನ ನೀಡಿ ಆಶೀರ್ವಾದ ಪಡೆದುಕೊಂಡರು. 

ಜನತಾ ಬಜಾರ್‌ನ ದುರ್ಗಾದೇವಿ ಗುಡಿಯಲ್ಲಿ ಕೊಲ್ಲಾಪುರ ಮಹಾಲಕ್ಷ್ಮಿಯ ಅಲಂಕಾರದಲ್ಲಿ ವರಮಹಾಲಕ್ಷ್ಮಿ ಕಲಶ ಪ್ರತಿಷ್ಠಾಪಿಸಲಾಗಿತ್ತು. ಹೆಚ್ಚಿನ ಮನೆಗಳಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಪೂಜೆಯನ್ನು ತಮ್ಮತಮ್ಮ ಆಸ್ತಿ–ಅಂತಸ್ತಿಗೆ ತಕ್ಕುದಾಗಿ ಕೆಲವರು ವೈಭವದಿಂದ ಆಚರಿಸಿದರು. ಕಲಶಕ್ಕೆ ಮಹಾಲಕ್ಷ್ಮಿಯ ಬೆಳ್ಳಿ ಮುಖವಾಡವಿಟ್ಟು, ಸೀರೆಯುಡಿಸಿ, ಬಂಗಾರದ ಆಭರಣದೊಂದಿಗೆ ಸುಂದರವಾಗಿ ಅಲಂಕರಿಸಿ ಪೂಜೆಸಿದರು. ಕೆಲವರು ಸರಳವಾಗಿ ಆಚರಿಸಿದರು. 

ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್‌ನ ಮಂಜುಳಾ ಕೃಷ್ಣನ್‌ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯ ನೋಟ
ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್‌ನ ಮಂಜುಳಾ ಕೃಷ್ಣನ್‌ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯ ನೋಟ

‘ಕಳೆದ 25 ವರ್ಷಗಳಿಂದ ಒಂದು ವರ್ಷವೂ ತಪ್ಪದೆ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆರಂಭದಲ್ಲಿ 50 ಮಂದಿ  ಪೂಜೆಯಲ್ಲಿ ಪಾಲ್ಗೊಂಡು  ಉಡಿ ತುಂಬಿಸಿಕೊಂಡು ಹೋಗುತ್ತಿದ್ದರು. ವರ್ಷದಿಂದ ವರ್ಷಕ್ಕೆ ಪೂಜೆಗೆ ಬರುವವರೂ ಹೆಚ್ಚಾಗಿ, ಮನೆಯ ಹಾಲ್‌ನಲ್ಲಿ ಮಂಟಪ ಸಿದ್ಧಪಡಿಸಿ ವೈಭವದಿಂದ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈಗ 150 ಮಂದಿ ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡು ಉಡಿ ತುಂಬಿಸಿಕೊಂಡು ಹೋಗುತ್ತಾರೆ. ಸೇವಾಭಾರತಿಯ ಬಾಲ ಕಲ್ಯಾಣ ಕೇಂದ್ರದ ಮಕ್ಕಳು ಬಂದು ಭಕ್ತಿಗಾಯನ ನಡೆಸಿಕೊಟ್ಟು, ನಮ್ಮ ಆತಿಥ್ಯ ಸ್ವೀಕರಿಸಿ ಹೋಗುತ್ತಾರೆ’ ಎಂದು ಎಂದು ಸಿದ್ದೇಶ್ವರ ಪಾರ್ಕ್‌ನ ಮಂಜುಳಾ ಕೃಷ್ಣನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹುಬ್ಬಳ್ಳಿಯ ಜನತಾ ಬಜಾರ್‌ನ ದುರ್ಗಾದೇವಿ ಗುಡಿಯಲ್ಲಿ ಕೊಲ್ಲಾಪುರ ಮಹಾಲಕ್ಷ್ಮಿಯ ಅಲಂಕಾರದಲ್ಲಿರುವ ವರಮಹಾಲಕ್ಷ್ಮಿಯ ದರ್ಶನ ಪಡೆದ  ಭಕ್ತರು  ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಜನತಾ ಬಜಾರ್‌ನ ದುರ್ಗಾದೇವಿ ಗುಡಿಯಲ್ಲಿ ಕೊಲ್ಲಾಪುರ ಮಹಾಲಕ್ಷ್ಮಿಯ ಅಲಂಕಾರದಲ್ಲಿರುವ ವರಮಹಾಲಕ್ಷ್ಮಿಯ ದರ್ಶನ ಪಡೆದ  ಭಕ್ತರು  ಪ್ರಜಾವಾಣಿ ಚಿತ್ರ: ಗುರು ಹಬೀಬ

ಅಕ್ಷಯಪಾರ್ಕ್‌ನ ವಿಜಯಲಕ್ಷ್ಮಿ ಕಟ್ಟಿಮನಿ ಅವರ ಮನೆಯಲ್ಲಿ 21ವರ್ಷಗಳಿಂದ ವೈಭವದಿಂದ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಸಂಭ್ರಮ–ಸಡಗರ ಅವರ ಮನೆಯಲ್ಲಿ ಮನೆಮಾಡಿತ್ತು. ಸಂಜೆ ನಡೆದ ಭಕ್ತಿಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಸೇರಿ ಸಂಭ್ರಮಿಸಿದರು.

ಮಹಿಳೆಯರ ಸಂಭ್ರಮ: ಶ್ರಾವಣ ತಿಂಗಳಲ್ಲಿ ಬರುವ ವರಮಹಾಲಕ್ಷ್ಮಿ, ಮಂಗಳಗೌರಿ ಪೂಜೆಗಾಗಿಯೇ ಆಷಾಢದಲ್ಲಿ ಹೊಸ ಸೀರೆಗಳನ್ನು ಖರೀದಿಸುವ ಮಹಿಳೆಯರು, ಪೂಜೆಯಲ್ಲಿ ಹೊಸ ಸೀರೆಯುಟ್ಟು, ಅರಿಸಿನ–ಕುಂಕುಮ, ಬಾಗಿನ ಪಡೆದು ಸಂಭ್ರಮಿಸಿದರು. 

ಹುಬ್ಬಳ್ಳಿಯ ಗೋಕುಲರಸ್ತೆಯ ಕೋಟಿಲಿಂಗನಗರದ ಸುಭಾಸಸಿಂಗ್ ಜಮಾದಾರ ಅವರ ಮನೆಯಲ್ಲಿ ಪ್ರತಿಷ್ಠಾಪಿತ ವರಮಹಾಲಕ್ಷ್ಮಿ
ಹುಬ್ಬಳ್ಳಿಯ ಗೋಕುಲರಸ್ತೆಯ ಕೋಟಿಲಿಂಗನಗರದ ಸುಭಾಸಸಿಂಗ್ ಜಮಾದಾರ ಅವರ ಮನೆಯಲ್ಲಿ ಪ್ರತಿಷ್ಠಾಪಿತ ವರಮಹಾಲಕ್ಷ್ಮಿ

‘ಯಾಂತ್ರೀಕ ಜೀವನದಲ್ಲಿ ಒಗ್ಗೂಡಿಸುವ ಹಬ್ಬ’

‘ಪ್ರತಿ ವರ್ಷದ ಶ್ರಾವಣ ಮಾಸದ 2ನೇ ಶುಕ್ರವಾರ ಅಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಕಳೆದ 21 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಮ್ಮ ಮನೆಯ ವರಮಹಾಲಕ್ಷ್ಮಿ ಪೂಜೆಗಾಗಿ ನಮ್ಮ ಬಂಧು–ಬಾಂಧವರು ಸ್ನೇಹಿತೆಯರು ಸುತ್ತಮುತ್ತಲಿನ ಮಹಿಳೆಯರು ಕಾಯುತ್ತಿರುತ್ತಾರೆ. ವರಮಹಾಲಕ್ಷ್ಮಿ ಪೂಜೆ ನಮಗೆ ವರ್ಷದ ದೊಡ್ಡ ಹಬ್ಬ. ಇಂದಿನ ಯಾಂತ್ರಿಕ ಬದುಕಿನಲ್ಲಿ ನಮ್ಮ ಬಂಧುಗಳನ್ನು ಸ್ನೇಹಿತೆಯರನ್ನು ಒಂದೆಡೆ ಸೇರಿಸುವ ಹಬ್ಬ ಇದಾಗಿದೆ’ ಎಂದು ಅಕ್ಷಯಪಾರ್ಕ್‌ನ ವಿಜಯಲಕ್ಷ್ಮಿ ಕಟ್ಟಿಮನಿ ‘ಪ್ರಜಾವಾಣಿ’ಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT