ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಾಪೂರ: 45 ವರ್ಷಗಳ ನಂತರ ಜಾತ್ರಾ ಸಂಭ್ರಮ

Last Updated 22 ಏಪ್ರಿಲ್ 2022, 4:57 IST
ಅಕ್ಷರ ಗಾತ್ರ

ಅಳ್ನಾವರ: ಸಮೀಪದ ವೀರಾಪೂರ ಗ್ರಾಮದ ಆರಾಧ್ಯ ದೇವಿಯರಾದ ಗ್ರಾಮದೇವಿ ಹಾಗೂ ದುರ್ಗಾದೇವಿಯರ ಜಾತ್ರಾ ಮಹೋತ್ಸವ 45 ವರ್ಷಗಳ ನಂತರ ಈಗ ನಡೆಯುತ್ತಿದ್ದು, ಇದೇ 29ರವರೆಗೆ ನಡೆಯಲಿದೆ. ಗ್ರಾಮಸ್ಥರು ದೇವಿಯರ ಆರಾಧನೆಯಲ್ಲಿ ಮಿಂದೆದ್ದು, ಐತಿಹಾಸಿಕ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.

11 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಬುಧವಾರದಿಂದ ಆರಂಭವಾದ ಹೊನ್ನಾಟ ಮೂರು ದಿನ ನಡೆಯಲಿದೆ. ಹೊನ್ನಾಟಕ್ಕೆ ಭಂಡಾರವೆ ಪ್ರಧಾನ . ದೂರದ ಮಹಾರಾಷ್ಟ್ರದಿಂದ ಐದು ಕ್ವಿಂಟಲ್ ಭಂಡಾರವನ್ನು ಜಾತ್ರಾ ಸಮಿತಿ ತಂದಿದೆ. ಇನ್ನೂ ಹಲವರು ಸ್ವಂತಕ್ಕಾಗಿ ಬೇರೆ ಭಂಡಾರ ತಂದಿದ್ದಾರೆ ಎಂದು ಗ್ರಾಮದ ಈರಣ್ಣ ಮುರಗೋಡ ತಿಳಿಸಿದ್ದಾರೆ.

ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಏ.23 ರಿಂದ ಏ.27 ರವರೆಗೆ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಡಿವಾಳೇಶ್ವರ ದೇವಸ್ಥಾನದ ಪಾದಗಟ್ಟೆಯಲ್ಲಿ ದೇವಿಯರನ್ನು ಕೂಡಿಸಲಾಗುವುದು, ನವ ಚಂಡಿಕಾ ಹೋಮ, ಹವನ, ದೇವಿಯರ ಮಾಂಗಲ್ಯ ಧಾರಣೆ, ದೇವಿಯರ ವಿಶೇಷ ಪೂಜಾ ಕಾಯಕ್ರಮ ನಡೆಯಲಿವೆ.

ದೇವಿಯರಿಗೆ ಕಿತ್ತೂರ ಭಾಗದ ಕಲಾವಿದರು ಬಣ್ಣ ಹಚ್ಚಿ ಜೀವಕಳೆ ತುಂಬಿದ್ದಾರೆ. ಕಲ್ಲಾಪೂರದ ದುಂಡಪ್ಪ ಬಾಗೋಡಿ ಪ್ರತಿ ದಿನ ಸಂಜೆ ಪ್ರವಚನ ನಡೆಸಿಕೊಡುತ್ತಿದ್ದಾರೆ.

ಹೊನ್ನಾಟದಲ್ಲಿ ಗ್ರಾಮಸ್ಥರು ಭಂಡಾರ ಹಚ್ಚಿಕೊಂಡು ದೇವಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ಗ್ರಾಮದ ಬೀದಿಗಳು ಭಂಡಾರದ ಹಳದಿ ಬಣ್ಣದಿಂದ ಕೂಡಿವೆ. ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬಹಳ ವರ್ಷದ ನಂತರ ನಡೆಯುತ್ತಿರುವ ಜಾತ್ರೆಗೆ ಸಮೀಪದ ಮತ್ತು ದೂರದ ಊರಿನಿಂದ ಬೀಗರು ಆಗಮಿಸಿದ್ದಾರೆ.

ಭಕ್ತರಿಗೆ ಪ್ರತಿ ದಿನ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಕನ್ಯಾ ಬಡಿಗೇರ ಹಾಗೂ ಕಲ್ಮೇಶ ಬಣ್ಣದೂರಮಠ ಅವರಿಂದ ಪ್ರತಿ ದಿನ ಸಂಜೆ ಸಂಗೀತ ಸೇವೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT