ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐ ನಿಷೇಧಕ್ಕೆ ಒತ್ತಾಯ

ಬೆಂಗಳೂರಿನಲ್ಲಿ ಹಿಂಸಾಚಾರ: ಬಜರಂಗದಳ, ವಿಎಚ್‌ಪಿ ಪ್ರತಿಭಟನೆ
Last Updated 13 ಆಗಸ್ಟ್ 2020, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಗುರುವಾರ ನಗರದ ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆದರು.

ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು ಐಎಸ್‌ಐ ಸಂಚು ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಇಲಾಖೆ ಕೆಲ ದಿನಗಳ ಹಿಂದೆ ವರದಿ ನೀಡಿತ್ತು. ಅದು ಈಗ ಬೆಂಗಳೂರಿನ ಘಟನೆ ಮೂಲಕ ನಿಜವಾಗಿದೆ. ಪೊಲೀಸರ ಮೇಲೆ ಕಲ್ಲು ತೂರಿ, ಮಾಧ್ಯಮದವರ ಮೇಲೆ ಹಲ್ಲೆ ಮಾಡಲಾಗಿದೆ. ನೂರಾರು ವಾಹನಗಳಿಗೆ ಬೆಂಕಿ ಹಚ್ಚಿ ಭಯೋತ್ಪಾದಕರ ರೀತಿಯಲ್ಲಿ ಕೃತ್ಯ ಎಸಗಲಾಗಿದೆ. ಘಟನೆಯ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಕೈವಾಡ ಇದೆ ಎಂದು ಕಾರ್ಯಕರ್ತರು ಆರೋಪಿಸಿದರು.

ಹಲವು ವರ್ಷಗಳಿಂದ ರಾಜ್ಯದ ಹಲವು ಕಡೆ ನಡೆದ ಗಲಭೆಗಳು ಮತ್ತು ಹಿಂದೂ ಕಾರ್ಯಕರ್ತರ ಕೊಲೆಗಳ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಕೈವಾಡವಿರುವುದು ಸಾಬೀತಾಗಿದೆ. ಆದ್ದರಿಂದ ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು. ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಗೃಹ ಸಚಿವರಿಗೆ ಬರೆದ ಪತ್ರವನ್ನು ತಹಶೀಲ್ದಾರ್‌ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ಮಹಾಬಳೇಶ್ವರ ಹೆಗಡೆ, ವಿನಾಯಕ ತೆಲಗೇರಿ, ಸಂಜು ಬಡಸ್ಕರ, ಮಲ್ಲಿಕಾರ್ಜುನ ಸತ್ತಿಗೇರಿ, ಪ್ರದೀಪ ಶೆಟ್ಟರ್‌, ಬಜರಂಗದಳದ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ ಪಾಲ್ಗೊಂಡಿದ್ದರು.

ಕ್ರಿಮಿನಲ್‌ ಮೊಕದ್ದಮೆಗೆ ಆಗ್ರಹ

ಬಿಜೆಪಿ ಕಾರ್ಯಕರ್ತ ಪಿ. ನವೀನ್ ಫೇಸ್‌ಬುಕ್‌ನಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್‌ ಅವರ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿ ಲಕ್ಷಾಂತರ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಆತನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ನಗರದ ಅಂಜುಮನ್‌ ಎ ಇಸ್ಲಾಂ ಸಮಿತಿ ಆಗ್ರಹಿಸಿದೆ.

ನವೀನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಪ್ರಮುಖರು ಮಿನಿವಿಧಾನ ಸೌಧ ಎದುರು ಘೋಷಣೆ ಕೂಗಿದರು. ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

ಅಂಜುಮನ್‌ ಸಮಿತಿ ಅಧ್ಯಕ್ಷ ಎಂ.ಸಿ. ಸವಣೂರ, ಪ್ರಮುಖರಾದ ಅಲ್ತಾಫ್‌ ಕಿತ್ತೂರು, ಬಶೀರ ಹಳ್ಳೂರ, ಅಬ್ದುಲ್‌ ಮುನಾಪ್‌ ದೇವಗಿರಿ, ಪಿ. ತಾಜುದ್ದೀನ್‌ ಖಾದ್ರಿ, ಮೌಲಾನಾ ಮೊಹಮ್ಮದ್‌ ಅಲಿ ಖಾಜಿ, ಮೌಲಾನಾ ನಿಯಾಜ್ ಆಲಮ್‌ ಶೇಖ್, ಅಲ್ತಾಫ್‌ ಹಳ್ಳೂರ, ಮೊಹಮ್ಮದ್‌ ಅಬ್ದುಲ್‌ ರಜಾಕ್‌ ನಾಯಕ್‌, ಸಮೀಯುಲ್ಲಾ ಬೆಳಗಾವಿ, ದಾದಾಪೀರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT