ಹುಬ್ಬಳ್ಳಿ: ‘ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಖಾವಿ ಬಿಟ್ಟು, ಖಾದಿ ತೊಡಲು ಬಯಸಿದ್ದಾರೆ. ಮುಖಂಡರೊಬ್ಬರ ಜೊತೆ ಸೇರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.
‘ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ವೇಳೆ ಸ್ವಾಮೀಜಿ ಮತ್ತು ನಾಯಕರು ಪಂಚಮಸಾಲಿ ಹೋರಾಟದ ನೆಪದಲ್ಲಿ, ಗಲಾಟೆ ಮಾಡಿಸಿದರು. ತಮ್ಮ ಮೇಲೆ ತಾವೇ ಕಲ್ಲು, ಚಪ್ಪಲಿ ತೂರಿಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದರು. ಇದಕ್ಕೆ ನಮ್ಮ ಬಳಿ ವಿಡಿಯೊ ಸಾಕ್ಷಿ ಇದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘3 ವರ್ಷಗಳಿಂದ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಬೇಕೆಂದು ಹೋರಾಟ ನಡೆಸಿದ್ದೇವೆ. ಎರಡು ವರ್ಷಗಳ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರಿನಲ್ಲಿ ಹೋರಾಟ ನಡೆಸಿದಾಗ, ಸ್ವಾಮೀಜಿ ಅವರು ‘ಡೀಲ್’ ಮಾಡಿಕೊಂಡು 2ಎ ಬದಲು 2ಸಿ– 2ಡಿ ಮೀಸಲಾತಿಗೆ ಒಪ್ಪಿಗೆ ನೀಡಿದ್ದರು’ ಎಂದರು.
‘ಡೀಲ್ ನಡೆದಿರುವ ಬಗ್ಗೆ ನನಗೆ ಸಂಶಯ ಬಂದಿದ್ದರಿಂದಲೇ 2ಸಿ–2ಡಿ ಮೀಸಲಾತಿಯನ್ನು ವಿರೋಧಿಸಿದೆ. ಪಂಚಮಸಾಲಿ ಜೊತೆ ಅನಾಥ ಜಾತಿಗಳಿಗೆ 2ಸಿ– 2ಡಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹಾಗಾದರೆ, ಬಿಜೆಪಿ ಪಾಲಿಗೆ ಪಂಚಮಸಾಲಿ ಅನಾಥ ಜಾತಿಯೇ?’ ಎಂದು ಅವರು ಪ್ರಶ್ನಿಸಿದರು.
‘ಈ ಡೀಲ್ ಹಣದಿಂದ ಅವರು ದಾವಣಗೆರೆ ಸೇರಿ ಹಲವೆಡೆ ವೈಯಕ್ತಿಕವಾಗಿ ಜಾಗ ಖರೀದಿಸಿ, ಆಸ್ತಿ ಮಾಡಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಸ್ವಾಮೀಜಿಯಾದವರು ವೈಯಕ್ತಿಕ ಆಸ್ತಿ ಮಾಡಬಾರದೆಂದು ಟ್ರಸ್ಟ್ ಬೈಲಾದಲ್ಲಿ ಇದ್ದರೂ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಅವರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಹೇಳಿದರು.
‘ಟ್ರಸ್ಟ್ ನಿಬಂಧನೆಗಳಿಗೆ ಒಳಪಟ್ಟು ಸ್ವಾಮೀಜಿ ಅವರನ್ನು ಪೀಠದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಒಟ್ಟು ಸಮಾಜದ ಹಿತ ಕಾಪಾಡಬೇಕೇ ಹೊರತು, ಒಬ್ಬ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರ ಇರಬಾರದು. ಅವರು ತಮ್ಮ ನಡವಳಿಕೆ ಸುಧಾರಿಸದಿದ್ದರೆ ಒಂದು ವಾರದೊಳಗೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳು, ಪಕ್ಷಾತೀತವಾಗಿ ಸಮಾಜದ ಎಲ್ಲ ಜನಪ್ರತಿನಿಧಿಗಳು ಸಭೆ ಸೇರಿ ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡವಳಿಕೆ ಸುಧಾರಿಸದಿದ್ದರೆ ಒಂದು ವಾರದೊಳಗೆ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ನ ಸಭೆ ಕರೆದು ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.-ವಿಜಯಾನಂದ ಕಾಶಪ್ಪನವರ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.