ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ-2020: ಗರಿಗೆದರಿದ ರಾಜಕೀಯ; ಜೈಲು ಸೇರಿದ ವಿನಯ, ರದ್ದಾದ ಸಾಹಿತ್ಯ ಸಂಭ್ರಮ

ಸಾಂಸ್ಕೃತಿಕ ಚುಟುವಟಿಕೆಗಳ ಮೇಲೆ ಕೊರೊನಾ ಕರಿ ನೆರಳು
Last Updated 28 ಡಿಸೆಂಬರ್ 2020, 13:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜೈಲು ಸೇರಿದ ಮಾಜಿ ಸಚಿವ ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ ಪುನರಾಯ್ಕೆ, ಸ್ಥಳೀಯ ಸಂಸ್ಥೆ ಹಾಗೂ 136 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ, ಆಡಳಿತ ಪಕ್ಷವಾದ ಬಿಜೆಪಿಯ ಸ್ಥಳೀಯ ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ... 2020ರಲ್ಲಿ ಧಾರವಾಡ ಜಿಲ್ಲೆಯ ಪ್ರಮುಖ ರಾಜಕೀಯ ಬೆಳವಣಿಗೆಗಳಿವು.

ಇಬ್ಬರು ಮುಖ್ಯಮಂತ್ರಿಗಳನ್ನು ಕಂಡಿರುವ ಧಾರವಾಡ ರಾಜಕೀಯವಾಗಿ ರಾಜ್ಯದ ಗಮನ ಸೆಳೆಯುತ್ತಿರುತ್ತದೆ. ಆದರೆ, ಕೊರೊನಾ ಸೋಂಕಿನ ಕಾರಣಕ್ಕಾಗಿ ವಿಧಿಸಲಾದ ಲಾಕ್‌ಡೌನ್ ಹಾಗೂ ಅದರ ಬಳಿಕವೂ ಹೇಳಿಕೊಳ್ಳುವಂತಹ ರಾಜಕೀಯ ಬೆಳವಣಿಗೆಗಳು ನಡೆಯಲಿಲ್ಲ.

2016ರಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ ಕುಲಕರ್ಣಿ ಅವರನ್ನು ನವೆಂಬರ್‌ನಲ್ಲಿ ಸಿಬಿಐ ಬಂಧಿಸಿದ್ದು, ಜಿಲ್ಲೆಯ ಮಟ್ಟಿಗೆ ನಡೆದ ದೊಡ್ಡ ಬೆಳವಣಿಗೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲೂ ಕೊಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ರಾಜ್ಯದ ಗಮನ ಸೆಳೆದಿದ್ದ ಈ ಪ್ರಕರಣ ಆಡಳಿತ ಮತ್ತು ವಿರೋಧ ಪಕ್ಷಗಳು ರಾಜಕೀಯ ಕೆಸರೆರಚಾಟ ಹಾಗೂ ಪ್ರತಿಭಟನೆಗಳಿಗೂ ಕಾರಣವಾಯಿತು.

ಭಾರೀ ಕುತೂಹಲ ಮೂಡಿಸಿದ್ದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ ಅವರು, ಕಾಂಗ್ರೆಸ್‌ನ ಕುಬೇರಪ್ಪ ಹಾಗೂ ಜೆಡಿಎಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಸೋಲಿಸಿ ಮರು ಆಯ್ಕೆಯಾದರು.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಧಾರವಾಡದ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಹಾಗೂ ನವಲಗುಂದದ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ನಗರ ಮೂಲಕಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಸೊರಗಿದ ಸಾಂಸ್ಕೃತಿಕ ಚಟುವಟಿಕೆ:

ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವೂ ಆಗಿರುವ ಜಿಲ್ಲೆಯಲ್ಲಿ ಕೊರೊನಾದಿಂದಾಗಿ, ಸಾಂಸ್ಕೃತಿಕ ಚಟುವಟಿಕೆಗಳು ವರ್ಷವಿಡೀ ಗೌಣವಾದವು. ಕೆಲ ಸಂಘಟನೆಗಳು ಆನ್‌ಲೈನ್‌ನಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸಿದ್ದನ್ನು ಹೊರತುಪಡಿಸಿದರೆ, ಜನಪ್ರಿಯ ‘ಸಾಹಿತ್ಯ ಸಂಭ್ರಮ’ ಸೇರಿದಂತೆ ಬಹುತೇಕ ಕಾರ್ಯಕ್ರಮಗಳು ನಿಂತವು. ಸಾಹಿತ್ಯ ಪರಿಷತ್‌ನ ಜಿಲ್ಲಾ, ತಾಲ್ಲೂಕು ಸಮ್ಮೇಳನಗಳು ಹಾಗೂ ಪ್ರಮುಖ ದೇವಸ್ಥಾನಗಳ ಜಾತ್ರೆಗಳು ರದ್ದಾದವು.

ಧಾರವಾಡದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಬೇಂದ್ರೆ ಅವರ 125ನೇ ಜಯಂತಿ ಅಂಗವಾಗಿ, ಸೆ. 3ರಿಂದ ‘ವಾರ ವಾರ ಬೇಂದ್ರೆ ವೆಬಿನಾರ್’ ಎಂಬ ಕಾರ್ಯಕ್ರಮವನ್ನು ನಿರಂತರ ಆರು ತಿಂಗಳು ಆಯೋಜಿಸಿತು. ಪ್ರತಿ ಶನಿವಾರ ಸಂಜೆ ಗಣ್ಯರೊಬ್ಬರು ಬೇಂದ್ರೆ ಅವರ ಸಾಹಿತ್ಯ ಕುರಿತು ಮಾತನಾಡುವುದು ಈ ವೆಬಿನಾರ್ ವಿಶೇಷ. ಇಲ್ಲಿ ಮಂಡನೆಯಾಗುವ ಉಪನ್ಯಾಸಗಳನ್ನು ಕ್ರೋಢಿಕರಿಸಿ, ನಾಲ್ಕು ಸಂಪುಟಗಳಲ್ಲಿ ಪ್ರಕಟಿಸುವ ಆಲೋಚನೆಯನ್ನು ಟ್ರಸ್ಟ್‌ ಹೊಂದಿದೆ.

ಪ್ರಮುಖ ರಾಜಕೀಯ ಬೆಳವಣಿಗೆಗಳು

* ಹುಬ್ಬಳ್ಳಿ –ಧಾರವಾಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ ಮುಖಂಡ ನಾಗೇಶ ಕಲಬುರ್ಗಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಪ್ತು ನಿಗಮದ ಅಧ್ಯಕ್ಷರಾಗಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿ ನಿರ್ದೇಶಕರಾಗಿ ಮಲ್ಲಿಕಾರ್ಜುನ ಸಾವಕಾರ, ಬಾಲ ವಿಕಾಸ ಅಕಾಡೆಮಿಗೆ ಈರಣ್ಣ ಜಡಿ, ಧಾರವಾಡ ರಂಗಾಯಣಕ್ಕೆ ರಮೇಶ ಪರವಿನಾಯ್ಕ, ಎಂಎಸ್‌ಐಎಲ್ ನಿರ್ದೇಶಕರಾಗಿ ತೋಟಪ್ಪ ನಿಡಗುಂದಿ, ಕೆಸ್ಆರ್‌ಟಿಸಿ ನಿರ್ದೇಶಕರಾಗಿ ರಾಜೀವ ಜರತಾರಘರ ಮತ್ತು ಸಿದ್ದು ಮಠದ ಆಯ್ಕೆ.

* 6 ತಿಂಗಳೊಳಗೆ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚನೆ. ಮೂರು ಪಕ್ಷಗಳಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ.

* ಕೋವಿಡ್‌ನಿಂದಾಗಿ ಬಿಜೆಪಿ ಮುಖಂಡ ಹಾಗೂ ಪಾಲಿಕೆ ಮಾಜಿ ಸದಸ್ಯ ರಾಘವೇಂದ್ರ ರಾಮದುರ್ಗ ಸಾವು

* ವಿಧಾನ ಪರಿಷತ್ ಸದಸ್ಯರಾಗಿ40 ವರ್ಷ ಪೂರೈಸಿದ ಬಸವರಾಜ ಹೊರಟ್ಟಿ.

* ಕುರುಬರ ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ, ಹುಬ್ಬಳ್ಳಿಯಲ್ಲಿ ಸರಣಿ ಸಭೆ.

* ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರೆದುರೇ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮಧ್ಯೆ ವೇದಿಕೆಯಲ್ಲಿ ಮಾತಿನ ಚಕಮಕಿ.

* ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಟಿಕೆಟ್‌ ಮೇಲೆ ಕಣ್ಣಿಟ್ಟು, ರಾಜಕೀಯವಾಗಿ ಸಕ್ರಿಯರಾದ ಕಾಂಗ್ರೆಸ್‌ ಮುಖಂಡರಾದ ಸಂತೋಷ್ ಲಾಡ್ ಹಾಗೂ ಛಬ್ಬಿ ನಾಗರಾಜ.

* ಅಳ್ನಾವರದಲ್ಲಿ ತಾಲ್ಲೂಕಿನಲ್ಲಿ ತಾಲ್ಲೂಕುಪಂಚಾಯ್ತಿ ಅಸ್ವಿತ್ವಕ್ಕೆ ಹಾಗೂ ನೂತನ ಜನಪ್ರತಿನಿಧಿಗಳ ಆಯ್ಕೆ.

* ನವಲಗುಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನಡೆದ ತೆರೆಮರೆಯ ರಾಜಕೀಯದಲ್ಲಿ ಬಿಜೆಪಿ ಬೆಂಬಲದಿಂದ ಕಾಂಗ್ರೆಸ್ ಪುರಸಭೆಯ ಚುಕ್ಕಾಣಿ ಹಿಡಿಯಿತು. ಇದರಿಂದ ಜೆಡಿಎಸ್‌ ಮುಖಭಂಗ ಅನುಭವಿಸಿತು.

* ಧಾರವಾಡಕ್ಕೆ ಕಾಲಿಟ್ಟ ಎಐಎಂಐಎಂ ಪಕ್ಷ. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಲತೀಫ್‌ಖಾನ್‌ ಪಠಾಣ ಹೇಳಿಕೆ.

* ಅಮರಗೋಳದ ಮಹಾತ್ಮ ಗಾಂಧಿ ನಗರದ ಹೆಸರನ್ನು ವಾಜಪೇಯಿ ನಗರ ಎಂದು ಬದಲಿಸಲು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮುಂದಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ.

* ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ ಅವರ ಪುತ್ರ ಚಂದ್ರಶೇಖರ ಜುಟ್ಟಲ ಹಾಗೂ ಸೊಸೆಲಕ್ಷ್ಮಿ ಜುಟ್ಟಲ ಸ್ಪರ್ಧೆ.

ಸಾಂಸ್ಕೃತಿಕ ಕ್ಷೇತ್ರ ಪ್ರಮುಖ ಬೆಳವಣಿಗೆಗಳು

* ಧಾರವಾಡದ ರಂಗಾಯಣದ ಹಳೇ ಕಲಾವಿದರಿಂದ ರಾಜೀನಾಮೆ, ಹೊಸಬರ ನೇಮಕ.

* ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ಸ್ಮರಣಾರ್ಥ ಸಂಗೀತ ತಜ್ಞರ ದಿನಾಚರಣೆ.

* ಧಾರವಾಡದ ಬುದ್ಧರಕ್ಕಿತ ವಸತಿ ಶಾಲೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಭೇಟಿ.

* ಧಾರವಾಡ ನಗರದ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಜನವರಿ ತಿಂಗಳಲ್ಲಿ ಭಾರತೀಯ ಜೈನ್ ಮಿಲನ್ ವತಿಯಿಂದ ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆ ಆಯೋಜನೆ.

* ಕೃಷ್ಣರಾವ್ ದೇಸಾಯಿ ಅಭಿನಂದನಾ ಸಮಿತಿಯಿಂದ ಧಾರವಾಡದಲ್ಲಿ ‘ಕಾಯಕ ಕೃಷ್ಣ’ ಗ್ರಂಥ ಬಿಡುಗಡೆ.

* ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ವರೂರಿನಲ್ಲಿ ಮಾರ್ಚ್‌ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ತಾಲ್ಲೂಕು ಸಾಹಿತ್ಯ ಸಮ್ಮೇಳನ.

* ಅವಳಿನಗರಕ್ಕೆ ಮಹಾತ್ಮ ಗಾಂಧಿ ಭೇಟಿ ನೀಡಿ ನವೆಂಬರ್‌ನಲ್ಲಿ 100 ವರ್ಷವಾದ ನೆನಪಿನಾರ್ಥವಾಗಿ, ಶತಮಾನೋತ್ಸವ ಆಚರಣೆ.

* ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯ ಸಾಮಾಜಿಕ ಕಾರ್ಯ ಗುರುತಿಸಿ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಅಕ್ಟೋಬರ್‌ನಲ್ಲಿ ಗೌರವ ಡಾಕ್ಟರೇಟ್ ಪ್ರದಾನ.

* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಿಂದ ಡಿಸೆಂಬರ್‌ನಲ್ಲಿ ‘ಅಂಬೇಡ್ಕರ್ ಓದು’ ಕಾರ್ಯಕ್ರಮ ಆಯೋಜನೆ.

* ರಂಗಾಯಣದಿಂದ ಡಿಸೆಂಬರ್‌ನಲ್ಲಿ ‘ಸಾಮ್ರಾಟ ಅಶೋಕ’ ನಾಟಕದ ಮೊದಲ ಪ್ರದರ್ಶನ.

* ಡಿಸೆಂಬರ್‌ 29 ಮತ್ತು 30ರಂದು ನಡೆಯಬೇಕಿದ್ದ ಅಣ್ಣಿಗೇರಿ ಪಟ್ಟಣದ ಆರಾಧ್ಯ ದೈವ ಹಾಗೂ ‘ದಕ್ಷಿಣದ ಕಾಶಿ’ ಎಂದೇ ಪ್ರಸಿದ್ಧಿಯಾದ ಅಮೃತೇಶ್ವರ ಜಾತ್ರೆ ರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT