ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಬ್ಬಯ್ಯಗೆ ಅದ್ದೂರಿ ಸ್ವಾಗತ; ಧಾರ್ಮಿಕ ಕೇಂದ್ರಗಳಿಗೆ ಭೇಟಿ

Published 1 ಫೆಬ್ರುವರಿ 2024, 15:18 IST
Last Updated 1 ಫೆಬ್ರುವರಿ 2024, 15:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾದ ನಂತರ ಮೊದಲ ಬಾರಿಗೆ ಬೆಂಗಳೂರಿನಿಂದ ನಗರಕ್ಕೆ ಬಂದ ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಗುರುವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಗಬ್ಬೂರು ಕ್ರಾಸ್‌ಗೆ ಬಂದ ಶಾಸಕ ಅಬ್ಬಯ್ಯ ಅವರನ್ನು ಮಹಿಳಾ ಕಾರ್ಯಕರ್ತರು ಆರತಿ ಬೆಳಗಿ ಬರಮಾಡಿಕೊಂಡರು. 150 ಕೆ.ಜಿ. ತೂಕದ ಸೇಬುಹಣ್ಣಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಅವರನ್ನು ಮೆರವಣಿಗೆ ಮೂಲಕ ಕರೆತಂದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಾಂಜ್ ಮೇಳ ಸೇರಿದಂತೆ ಸಕಲ ಕಲಾ ತಂಡಗಳು ಭಾಗವಹಿಸಿದ್ದವು.

ಬಿಡ್ನಾಳ ಕ್ರಾಸ್ ಬಳಿಯ ದಿವಾನ್‌ ಚಾಚಾದರ್ಗಾ, ಶ್ರೀ ಸಿದ್ಧಾರೂಢ ಸ್ವಾಮಿಮಠ, ಕಾರವಾರ ರಸ್ತೆಯ ಹಜರತ್ ಸೈಯದ್ ಫತೇಶಾವಲಿ ದರ್ಗಾ, ಮೂರು ಸಾವಿರಮಠಕ್ಕೆ ಭೇಟಿ ನೀಡಿದರು. ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಬಸವೇಶ್ವರ, ಬಾಬು ಜಗಜೀವನ್‌ರಾಮ್, ವಾಲ್ಮಿಕಿ ಮಹರ್ಷಿ ಹಾಗೂ ಕೆ.ಎಚ್. ಪಾಟೀಲ ಪುತ್ಥಳಿ ಹಾಗೂ ಸ್ಟೇಷನ್‌ ರಸ್ತೆಯಲ್ಲಿನ ಡಾ. ಬಿ.ಆರ್‌. ಅಂಬೇಡ್ಕರ್ ಮೂರ್ತಿ, ಸಂಗೊಳ್ಳಿ ರಾಯಣ್ಣ ಮೂರ್ತಿ, ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ನಂತರ ಕಾರವಾರ ರಸ್ತೆಯಲ್ಲಿ ಇರುವ ಮಿಷನ್ ಕಂಪೌಂಡ್ ಬಳಿಯ ಚರ್ಚ್‌ಗೆ ಭೇಟಿ ನೀಡಿದರು.

‘ಕೊಳೆಗೇರಿ ಪ್ರದೇಶ ಅಭಿವೃದ್ಧಿಗೆ ಯೋಜನೆ’: ‘ಕಾಂಗ್ರೆಸ್ ಪಕ್ಷದಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರದ ನಾಯಕರು ನಿಗಮ ಮಂಡಳಿಯ ಜವಾಬ್ದಾರಿ ನೀಡಿದ್ದಾರೆ. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಸಾಮಾಜಿಕ ನ್ಯಾಯದಡಿ ಕರ್ತವ್ಯ ನಿರ್ವಹಿಸುತ್ತೇನೆ. ರಾಜ್ಯದಲ್ಲಿ 2,600ರಷ್ಟು ಕೊಳೆಗೇರಿ ಪ್ರದೇಶಗಳಿದ್ದು, ಅಲ್ಲೆಲ್ಲ ಭೇಟಿ ನೀಡಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎಂದು ಪ್ರಸಾದ ಅಬ್ಬಯ್ಯ ಹೇಳಿದರು.

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಅಲ್ತಾಫ್ ಕಿತ್ತೂರು, ಮೋಹನ ಅಸುಂಡಿ, ಶ್ಯಾಮ ಜಾಧವ್, ವಿಜನಗೌಡ ಪಾಟೀಲ, ಬಾಬಾಜಾನ್ ಕಾರಡಗಿ, ಸೈಯದ್ ಮುಲ್ಲಾ, ಯಲ್ಲಪ್ಪ ಮಡಿವಾಳರ, ದೊರೆರಾಜ್‌ ಮಣಿಕುಂಟ್ಲ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT