ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ‘ಸ್ಮಾರ್ಟ್ ಸಿಟಿ’ ಯಾಕೆ ಹೀಗೆ ಕೊಳಕು?

Published 9 ಜೂನ್ 2024, 5:53 IST
Last Updated 9 ಜೂನ್ 2024, 5:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಾಣಿಜ್ಯ ನಗರಿ’ ಹುಬ್ಬಳ್ಳಿ ಇದೀಗ ‘ಸ್ಮಾರ್ಟ್‌ ಸಿಟಿ’. ಆದರೆ, ಇದೀಗ ಮಳೆಗಾಲ ಆರಂಭವಾಗಿದ್ದು, ‘ಸಾಕಪ್ಪ... ಸಾಕು ಹುಬ್ಬಳ್ಳಿ ಕೊಳಕು’ ಎನ್ನುವಂತಾಗಿದೆ!

ಮಳೆ ಆಗಾಗ ಬಿಟ್ಟು ಸುರಿಯುತ್ತಿದೆ. ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅರ್ಧ ಗಂಟೆ ಸುರಿಯುವ ಜಿಟಿಜಿಟಿ ಮಳೆಗೇ ಹುಬ್ಬಳ್ಳಿಯ ಮಾರುಕಟ್ಟೆ ಪ್ರದೇಶವಾದ ಕೋಯಿನ್‌ ರಸ್ತೆ, ದಾಜೀಬಾನ್‌ ಪೇಟೆ ಸೇರಿದಂತೆ, ಹಳೇಹುಬ್ಬಳ್ಳಿಯ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ. ಕೆಲವು ಪ್ರದೇಶಗಳ ರಸ್ತೆಗಳಂತೂ ಕೆಸರು ಗದ್ದೆಯಾಗಿ ಮಾರ್ಪಡುತ್ತವೆ. ಇನ್ನು, ‘ಜೋರಾಗಿ, ಬಿಟ್ಟುಬಿಡದೆ ಮಳೆ ಸುರಿದರೆ ‘ಸ್ಮಾರ್ಟ್ ಸಿಟಿ’ ಕಥೆಯೇನು?’ ಎನ್ನುವ ಆತಂಕ ಜನರದ್ದು.

ಹಳೇಹುಬ್ಬಳ್ಳಿಯ ನಾರಾಯಣ ಸೋಫಾ, ಸದರಸೋಫಾ ದಲ್ಲಿ ರಾಜಕಾಲುವೆಯಲ್ಲಿ ಹರಿಯುವ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ, ಗಟಾರದಲ್ಲಿ ಹರಿಯುವ ನೀರು ಮನೆಯೊಳಗೆ ನುಗ್ಗುತ್ತದೆ. ದಾಜೀಬಾನ್‌ ಪೇಟೆಯಲ್ಲಿ ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು, ಅಲ್ಲಿರುವ ವಾಣಿಜ್ಯ ಮಳಿಗೆಗಳ ಪಾರ್ಕಿಂಗ್‌ ಸ್ಥಳದಲ್ಲಿ ಸಂಗ್ರಹವಾಗುತ್ತದೆ. ಚನ್ನಪೇಟೆ, ವಿದ್ಯಾನಗರ, ಸಿಬಿಟಿಗಳಲ್ಲಿ ನಡೆಸಿರುವ ಅರ್ಧಮರ್ಧ ರಸ್ತೆ ಕಾಮಗಾರಿಯಿಂದ ಗಟಾರವೂ ಇಲ್ಲದೆ, ಒಳಚರಂಡಿಯೂ ಇಲ್ಲದೆ ಮಳೆಯ ನೀರೆಲ್ಲ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಪಾಲಿಕೆಯೇನೋ ಎಚ್ಚೆತ್ತುಕೊಂಡಿದೆ. ಆದರೆ, ಮುಂಜಾಗ್ರತಾ ಕ್ರಮದ ಕಾರ್ಯ ನಿರೀಕ್ಷಿತ ವೇಗ ಪಡೆದುಕೊಳ್ಳುತ್ತಿಲ್ಲ.

‘ಹಳೇಹುಬ್ಬಳ್ಳಿ ಚನ್ನಪೇಟೆಯ ಮುಖ್ಯ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ಅಗೆದು ಒಂದೂವರೆ ತಿಂಗಳಾಗಿದೆ. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ತೆಗ್ಗು ತೋಡಿದ್ದ ಮಣ್ಣು ಮಳೆಯಿಂದಾಗಿ ಸುತ್ತೆಲ್ಲ ವ್ಯಾಪಿಸಿ ಕೊಳಚೆ ಪ್ರದೇಶವನ್ನಾಗಿ ಮಾಡಿದೆ. ಪಾದಚಾರಿಗಳು ಓಡಾಡಲು ಪರದಾಡುತ್ತಿದ್ದಾರೆ. ಜೋರಾಗಿ ಮಳೆ ಸುರಿದರೆ, ಕೊಳಚೆ ನೀರೆಲ್ಲ ಅಂಗಡಿಗಳಿಗೆ, ಮನೆಗಳಿಗೆ ನುಗ್ಗುತ್ತದೆ’ ಎಂದು ಸ್ಥಳೀಯ ನಿವಾಸಿ ಗುರುನಾಥ ಶ್ಯಾಮಣ್ಣ ಆತಂಕ ವ್ಯಕ್ತಪಡಿಸುತ್ತಾರೆ.

ವಿದ್ಯಾನಗರದ ಅಂಬೇಶ ಹೋಟೆಲ್‌ ಪಕ್ಕದ ಅಂಚೆಕಚೇರಿ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿದೆ. ಕಾಮಗಾರಿಯೇನೋ ಮುಕ್ತಾಯವಾಗಿದೆ. ಆದರೆ, ಮಳೆ ಆರಂಭ ಆಗಿರುವುದರಿಂದ ತೆಗ್ಗು ತೋಡಿದ ಮಣ್ಣು ಕೆಸರಾಗಿ ಬದಲಾಗಿದೆ.

‘ಬೇಸಿಗೆಯಲ್ಲಿ ಮಾಡ ಬೇಕಾದ ಒಳಚರಂಡಿ ಕಾಮಗಾರಿಯನ್ನು ಮಳೆಗಾಲದಲ್ಲಿ ಕೈಗೆತ್ತಿಕೊಂಡಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಸುಮಾರು 500 ಮೀಟರ್‌ ಉದ್ದದ ರಸ್ತೆಯನ್ನು ಅಗೆದ ಪರಿಣಾಮ, ಚಿಕ್ಕ ಮಳೆ ಬಂದರೂ ಕೆಸರುಮಯವಾಗುತ್ತದೆ. ವಾಣಿಜ್ಯ ಮಳಿಗೆಗಳು, ಟ್ರಾನ್ಸ್‌ಫೋರ್ಟ್‌, ಅಂಚೆಕಚೇರಿ, ವಸತಿಗೃಹಗಳು ಇಲ್ಲಿರುವುದರಿಂದ ಪ್ರತಿದಿನ ನೂರಾರು ಮಂದಿ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಕೆಲವು ಬೈಕ್‌ ಸವಾರರು ಮತ್ತು ಪಾದಚಾರಿಗಳು ಕೆಸರಿನಲ್ಲಿ ಬಿದ್ದು ಮೈ–ಕೈ ಪೆಟ್ಟು ಮಾಡಿಕೊಂಡು, ಬಟ್ಟೆಗಳನ್ನು ಕೊಳೆ ಮಾಡಿಕೊಂಡಿದ್ದಾರೆ’ ಎಂದು ವ್ಯಾಪಾರಸ್ಥ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಹತ್ತು ನಿಮಿಷ ಮಳೆ ಸುರಿದರೂ ಸಾಕು, ಹಳೇ ಬಸ್‌ನಿಲ್ದಾಣದ ಬಳಿಯ ಅಯೋಧ್ಯಾ ಹೋಟೆಲ್‌ ಎದುರು ಒಂದು–ಎರಡು ಅಡಿ ನೀರು ನಿಲ್ಲುತ್ತದೆ. ಅಕ್ಕಪಕ್ಕ ಇರುವ ವಾಣಿಜ್ಯ ಮಳಿಗೆಗಳ ಮಾಲೀಕರು, ಗ್ರಾಹಕರಿಗೆ ಓಡಾಡಲೆಂದು ನಿಂತ ನೀರಲ್ಲಿಯೇ ಪೇವರ್ಸ್‌ ಇಟ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಕೆಲ ಮಹಿಳೆಯರು, ವೃದ್ಧರು ಅದರ ಮೇಲೆ ನಡೆಯಲಾಗದೆ ಬಿದ್ದು ಪೆಟ್ಟು ಸಹ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಆಟೊ ಚಾಲಕ ಶಂಕ್ರಪ್ಪ ನಡುವಿನಮನಿ.

ಎರಡು ದಿನದಲ್ಲಿ ಸಮಸ್ಯೆಗೆ ಪರಿಹಾರದ ಭರವಸೆ

ವಿದ್ಯಾನಗರದ ಅಂಬೇಶ ಹೋಟೆಲ್‌ ಪಕ್ಕದಲ್ಲಿರುವ ಕೆಸರು ಗದ್ದೆಯಂತಾಗಿರುವ ರಸ್ತೆಯನ್ನು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಎಂಜಿನಿಯರ್‌ ವಿಠ್ಠಲ ತುಬಾಕೆ ಹಾಗೂ ಗುತ್ತಿಗೆದಾರರೊಂದಿಗೆ ಶನಿವಾರ ಪರಿಶೀಲಿಸಿದರು. ನಂತರ ಎರಡು ದಿನಗಳಲ್ಲಿ ತಾತ್ಕಾಲಿಕ ಪರಿಹಾರ ನೀಡುವುದಾಗಿ ಸ್ಥಳೀಯ ನಿವಾಸಿಗಳಿಗೆ ಭರವಸೆ ನೀಡಿದರು.

‘ಒಳಚರಂಡಿಯಿಲ್ಲದ ಕಾರಣ ಅದರ ಕಾಮಗಾರಿ ನಡೆದಿದ್ದು, ರಸ್ತೆ ಅಗೆದಿರುವುದರಿಂದ ಮಳೆಗೆ ಕೊಳಚೆಯಾಗುತ್ತಿದೆ. ತಾತ್ಕಾಲಿಕ ಪರಿಹಾರವಾಗಿ ಅಕ್ಕಪಕ್ಕ ಹರಡಿರುವ ಮಣ್ಣನ್ನು ತೆಗೆದು, ತೆಗ್ಗು ತೋಡಿರುವ ಜಾಗದಲ್ಲಿ ಡ್ರಿಲ್‌ ಮಾಡಿ ಸಮತಟ್ಟು ಮಾಡಲಾಗುವುದು. ನಂತರ ಒಂದುವರೆ ಅಡಿ ಜಲ್ಲಿ ಹಾಗೂ ಅದರ ಪುಡಿಹಾಕಿ ಕೊಳಚೆ ಏಳದಂತೆ ಸರಿಪಡಿಸಲಾಗುವುದು’ ಎಂದರು.

ಮನೆಯೊಳಗೆ ನೀರು..

ಆರ್‌.ಎನ್‌. ಶೆಟ್ಟಿ ರಸ್ತೆ: ಸಿದ್ಧಾರೂಢಮಠದ ಬಳಿ ಇರುವ ಆರ್‌.ಎನ್‌. ಶೆಟ್ಟಿ ರಸ್ತೆ ಶಾಪಗ್ರಸ್ಥವಾಗಿದೆ. ಪ್ರತಿ ಮಳೆಗಾಲದಲ್ಲೂ ಈ ರಸ್ತೆಯ ವೃತ್ತದ ಬಳಿ ಹಾಗೂ ಅನತಿದೂರ ಮೊಳಕಾಲಿನವರೆಗೆ ನೀರು ನಿಲ್ಲುತ್ತದೆ. ಮಳೆ ನಿಂತ ನಂತರ, ಸುತ್ತಲಿನ ಕೆಸರೆಲ್ಲ ಅಲ್ಲಿಯೇ ಸಂಗ್ರಹವಾಗುತ್ತದೆ. ಶ್ರೀಮಠಕ್ಕೆ ಬರುವವರು ಹಾಗೂ ಸುತ್ತಲಿನ ನಿವಾಸಿಗಳು ಕೆಸರು ತುಂಬಿದ ರಸ್ತೆಯಲ್ಲಿ ಸಂಚರಿಸುತ್ತಾರೆ. ಸುತ್ತಮುತ್ತಲಿರುವ ಬಡಾವಣೆ, ಕಾಲೊನಿಯಲ್ಲಿ ಗಟಾರ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ, ಜೋರು ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತದೆ.

ಒಳಚರಂಡಿ ಹಾಗೂ ಗಟಾರದಲ್ಲಿನ ಹೂಳೆತ್ತುವ ಕಾಮಗಾರಿ ನಡೆದಿದೆ. ಆದ್ಯತೆ ಮೇರೆಗೆ ತುರ್ತು ಕಾಮಗಾರಿ ಕೈಗೊಂಡು ಪರಿಹಾರ ಒದಗಿಸಲಾಗುತ್ತಿದೆ.
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT