ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪ್ರಾಣಿಗಳಿಗೆ ನೀರುಣಿಸುವ ಸ್ವಯಂಸೇವಕರು

Published 9 ಮೇ 2024, 6:39 IST
Last Updated 9 ಮೇ 2024, 6:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿರು ಬಿಸಿಲಿನಿಂದ ಎಲ್ಲೆಡೆ ಜಲಮೂಲಗಳು ಬತ್ತಿದ್ದು, ಪ್ರಾಣಿ ಪಕ್ಷಿಗಳು ಹನಿ ನೀರಿಗೂ ಪರದಾಡುವಂತಾಗಿದೆ. ಧಾರವಾಡದ ವೈಲ್ಡ್‌ಲೈಫ್‌ ವೆಲ್ಫೇರ್‌ ಸೊಸೈಟಿಯ ಸದಸ್ಯರು ಸ್ವಂತ ಖರ್ಚಿನಲ್ಲಿ ಕಾಡಿನಲ್ಲಿ ನೀರಿನ ವ್ಯವಸ್ಥೆ ಮಾಡಿ, ಪ್ರಾಣಿಪಕ್ಷಿಗಳಿಗೆ ನೀರಿನ ದಾಹ ನೀಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಧಾರವಾಡ ತಾಲ್ಲೂಕಿನ ಹೊಲ್ತಿಕೋಟಿ, →ಬಣದೂರು ಚೆಕ್‌ಪೋಸ್ಟ್‌, ಮಾವಿನಕೊಪ್ಪದ ಕಾಡಿನ 5 ಕಡೆ ಒಂದೂವರೆ ತಿಂಗಳಿನಿಂದ ನೀರು ಪೂರೈಸುತ್ತಿದ್ದೇವೆ. 8 ಅಡಿ ಅಗಲ, 6 ಅಡಿ ಉದ್ದ, 2 ಅಡಿ ಆಳದ ಗುಂಡಿ ತೋಡಿ ಅದರ ಮೇಲೆ ಟಾರ್ಪಲ್ ಹಾಕಿ, ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತೇವೆ’ ಎಂದು ಸೊಸೈಟಿ ಅಧ್ಯಕ್ಷ ಎಲ್ಲಪ್ಪ ದೊಡ್ಡಹಳ್ಳಿ ತಿಳಿಸಿದರು.

‘ಹೆಚ್ಚು ಆಳದ ಗುಂಡಿ ತೋಡಿದರೆ, ಪ್ರಾಣಿಗಳು ಅದರಲ್ಲಿ ಇಳಿದು ಟಾರ್ಪಲ್ ಹರಿಯಬಹುದು. ಅದಕ್ಕೆ ಎರಡು ಅಡಿ ಆಳದ ಗುಂಡಿ ತೋಡಿದ್ದೇವೆ. ಹೆಚ್ಚು ಬಿಸಿಲು ಇರುವ ಕಾರಣ ನೀರು ಬೇಗ ಖಾಲಿಯಾಗುತ್ತದೆ’ ಎಂದು ಅವರು ತಿಳಿಸಿದರು.

‘ನಮ್ಮ ಸೊಸೈಟಿಯಲ್ಲಿ 45 ಮಂದಿ ಸದಸ್ಯರಿದ್ದು, ಬಹುತೇಕರು ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಕೂಲಿಕಾರ್ಮಿಕರು. ಎಲ್ಲರೂ ಸ್ವಯಂಪ್ರೇರಿತವಾಗಿ ಈ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ. ಎಲ್ಲಾ ವೆಚ್ಚವನ್ನೂ ನಾವೇ ಭರಿಸುತ್ತೇವೆ’ ಎಂದರು.

‘ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಕಲಘಟಗಿ, ಕುಂದಗೋಳದಲ್ಲೂ ನೀರಿನ ವ್ಯವಸ್ಥೆ ಮಾಡಲಿದ್ದೇವೆ. ಕಾಡು, ಹೆದ್ದಾರಿ ಬದಿ ನೀರಿನ ಅವಶ್ಯಕತೆ ಇದ್ದರೆ ಸಾರ್ವಜನಿಕರು ಮಾಹಿತಿ ನೀಡಬಹುದು’ ಎಂದರು.

ಪ‍್ರಾಣಿಗಳ ರಕ್ಷಣೆ: ಅಪಘಾತದಲ್ಲಿ ಗಾಯಗೊಂಡ ಪ್ರಾಣಿ, ಪಕ್ಷಿಗಳು ಮತ್ತು ಹಾವುಗಳ ರಕ್ಷಣೆಯನ್ನು ಸೊಸೈಟಿ ಮಾಡುತ್ತದೆ. ಧಾರವಾಡ –ಹಳಿಯಾಳ ರಸ್ತೆ ಸೇರಿ ವಿವಿಧೆಡೆ ವಾಹನಗಳಿಗೆ ಸಿಲುಕಿ ಗಾಯಗೊಂಡ ಮಂಗ, ಆಕಳು, ನಾಯಿ, ಹಸು, ನವಿಲು, ಜಿಂಕೆ, ಮುಂಗಸಿ, ಹದ್ದು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳನ್ನು ಸೊಸೈಟಿ ಸದಸ್ಯರು ರಕ್ಷಣೆ ಮಾಡಿ, ಚಿಕಿತ್ಸೆ ನೀಡಿದ್ದಾರೆ. ಅವರಲ್ಲೇ ಒಬ್ಬರೇ ಪಶುವೈದ್ಯರಿದ್ದು, ಅವರೇ ಚಿಕಿತ್ಸೆ ನೀಡುತ್ತಾರೆ.ಈ ರೀತಿ ಸಾವಿರಾರು ಪಕ್ಷಿಪ್ರಾಣಿಗಳನ್ನು ರಕ್ಷಿಸಲಾಗಿದೆ.

ಪಕ್ಷಿ ಪ್ರಾಣಿಗಳ ರಕ್ಷಣೆಮತ್ತು ಚಿಕಿತ್ಸೆಗೆ ಜಾಗದ ಅವಶ್ಯಕತೆ ಇದೆ. ಜಿಲ್ಲಾಧಿಕಾರಿ ಅವರು ಜಾಗ ಒದಗಿಸಿದರೆ ಅನುಕೂಲವಾಗುತ್ತದೆ
ಎಲ್ಲಪ್ಪ ದೊಡ್ಡಹಳ್ಳಿ ಅಧ್ಯಕ್ಷ ವೈಲ್ಡ್‌ಲೈಫ್‌ ವೆಲ್ಫೇರ್‌ ಸೊಸೈಟಿ
ಅರಣ್ಯ ಇಲಾಖೆ ವನ್ಯಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದು ವೈಲ್ಡ್‌ಲೈಫ್‌ ವೆಲ್ಫೇರ್ ಸೊಸೈಟಿಯವರು ಕೈಜೋಡಿಸಿದ್ದು ಅನುಕೂಲ ಆಗಿದೆ
ಪ್ರದೀಪ ಪವಾರ ವಲಯ ಅರಣ್ಯಾಧಿಕಾರಿ ಧಾರವಾಡ ಜಿಲ್ಲೆ
ವೈಲ್ಡ್‌ಲೈಫ್‌ ವೆಲ್ಫೇರ್‌ ಸೊಸೈಟಿಯ ಸದಸ್ಯರು ಕಳೆದ ನಾಲ್ಕೈದು ವರ್ಷಗಳಲ್ಲಿ ಧಾರವಾಡದ ವಿವಿಧೆಡೆ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಈಗ ಗಿಡಗಳು ಹತ್ತು ಅಡಿಗೂ ಹೆಚ್ಚು ಎತ್ತರ ಬೆಳೆದಿವೆ. ಈ ವರ್ಷದ ಮಳೆಗಾಲದಲ್ಲಿ 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT