ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಸ್ಪರ್ಧೆ: ಮೈ ನವಿರೇಳಿಸಿದ ಕುಸ್ತಿ ಪಂದ್ಯಾವಳಿ

Last Updated 18 ಮೇ 2022, 4:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಸ್ತಿ ಅಖಾಡದಲ್ಲಿ ಪೈಲ್ವಾನರು ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು. ನೆಚ್ಚಿನ ಪೈಲ್ವಾನರು ನೆಲಕ್ಕುರುಳಿದಾಗಓಹೋ... ಎಂದು ಉದ್ಗಾರ ತೆಗೆಯುತ್ತಿದ್ದರು.

ಮೈ ನವಿರೇಳಿಸುವಂತಿದ್ದ ಪುರುಷ ಹಾಗೂ ಮಹಿಳಾ ಪೈಲ್ವಾನರ ಸೆಣಸಾಟಕ್ಕೆ ಸಾಕ್ಷಿಯಾಗಿದ್ದು ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವರ ದೇವಸ್ಥಾನದ ಆವರಣ. ದೇಗುಲದ ಕಳಸಾರೋಹಣ, ಬಸವಣ್ಣ ಮಂಟಪ ಲೋಕಾರ್ಪಣೆ ಹಾಗೂ ನಂದಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ರಾಷ್ಟ್ರಮಟ್ಟದ ಜಂಗೀ ಕಾಟಾ ನಿಕಾಲಿ ಕುಸ್ತಿ ಸ್ಪರ್ಧೆಯನ್ನು ಮಂಗಳವಾರ ಆಯೋಜಿಸಲಾಗಿತ್ತು.

ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗದ ಕುಸ್ತಿಪಟುಗಳು ಸೆಣಸಾಡಿದರು. ಮಾಜಿ ಪೈಲ್ವಾನರ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ ಸ್ಪರ್ಧೆಗೆ ಚಾಲನೆ ನೀಡಿದರು.

ದಾವಣಗೆರೆಯ ಕಿರಣ್, ಹಳಿಯಾಳದ ಲಕ್ಷ್ಮಿ ಪ್ರಥಮ

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ಕಿರಣ್ ಭದ್ರಾವತಿ ಅವರಿಗೆ ₹20 ಸಾವಿರ, ದ್ವಿತೀಯ ಸ್ಥಾನ ಪಡೆದ ಮೈಸೂರಿನ ಯಶವಂತ ಅವರಿಗೆ ₹15 ಸಾವಿರ ಮತ್ತು ಬೆಳ್ಳಿ ಗದೆ (ಅತ್ಯುತ್ತಮ ಪ್ರದರ್ಶನಕ್ಕಾಗಿ) ಹಾಗೂ ತೃತೀಯ ಸ್ಥಾನ ಪಡೆದ ಬೆಳಗಾವಿಯ ಶಿವಯ್ಯ ಪೂಜಾರ ಅವರಿಗೆ ₹12 ಸಾವಿರ ಬಹುಮಾನ ನೀಡಲಾಯಿತು.

ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹಳಿಯಾಳ ಕ್ರೀಡಾ ಹಾಸ್ಟೆಲ್‌ನ ಲಕ್ಷ್ಮಿ ಪಾಟೀಲ ಅವರಿಗೆ ₹10 ಸಾವಿರ, ದ್ವಿತೀಯ ಸ್ಥಾನ ಪಡೆದ ಗದುಗಿನ ಶಾಹಿದಾ ಅವರಿಗೆ ₹5 ಸಾವಿರ ಹಾಗೂ ತೃತೀಯ ಸ್ಥಾನದ ಪಡೆದ (ಪಂದ್ಯ ಡ್ರಾ) ಹಳಿಯಾಳದ ವೈಷ್ಣವಿ ಅಣ್ಣಿಕೇರಿ ಮತ್ತು ಧಾರವಾಡ ಕ್ರೀಡಾ ಹಾಸ್ಟೆಲ್‌ನ ಪುಷ್ಪಾ ನಾಯ್ಕ ಅವರಿಗೆ ತಲಾ ₹2,500 ಬಹುಮಾನ ವಿತರಿಸಲಾಯಿತು.

ಪೈಲ್ವಾನರಾದ ಅಲ್ತಾಫ್ ಶೇಖ, ಭೀಮಸಿ ಪರಾಪುರ, ಯಲ್ಲಪ್ಪ ಡೋಣಿ, ರಾಮಣ್ಣ ಉಣಕಲ್ಲ, ರುದ್ರಪ್ಪ ರಾಯನಾಳ ತೀರ್ಪುಗಾರರಾಗಿದ್ದರು.

ಗೋಕುಲ ರಸ್ತೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ, ರಾಮಣ್ಣ ಉಣಕಲ್ಲ, ಸಂತೋಷ ಇಂಚಲ, ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಷನ್‌ ಅಧ್ಯಕ್ಷ ಅಶೋಕ ಚಿಲ್ಲಣ್ಣವರ, ರಾಯನಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೈಲ್ವಾನ್ ಸಿದ್ದಪ್ಪ ಸಂಪನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT