ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ: ಯಮನೂರು ಚಾಂಗದೇವರ ಜಾತ್ರೆ ಇಂದಿನಿಂದ 

ಭಾವೈಕ್ಯದ ಉರುಸ್: ರಾಜ್ಯ, ಹೊರ ರಾಜ್ಯದ ಸಾವಿರಾರು ಜನ ಭಾಗಿ
ಅಬ್ದುಲ್ ರಝಾಕ್ ನದಾಫ್
Published 28 ಮಾರ್ಚ್ 2024, 6:14 IST
Last Updated 28 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ನವಲಗುಂದ: ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಯಮನೂರು ಗ್ರಾಮದ ರಾಜಾಭಾಗ ಸವಾರ ಊರ್ಫ್ ಚಾಂಗದೇವರ ಜಾತ್ರೆ ಮಾರ್ಚ್ 28ರಿಂದ ಏ. 1ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಮಾರ್ಚ್‌ 29ರಂದು ಗಂಧಾಭಿಷೇಕ (ಸಂದಲ್), ಮಾರ್ಚ್ 30ರಂದು ಉರುಸ್ ಜರುಗಲಿದೆ. ಅಭಿಷೇಕದ ದಿನ ಸಂತರು ನಂದಾದೀಪ ಬೆಳಗಿಸಲು ಬೆಣ್ಣೆಹಳ್ಳದ ನೀರು ತೆಗೆದುಕೊಂಡು ಹೋಗುತ್ತಾರೆ. ನಂತರ ಚಾಂಗದೇವರ ದೇವಸ್ಥಾನದಲ್ಲಿ ದೀಪ ಬೆಳಗಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ.

ಹಿಂದೂ ಪದ್ಧತಿಯ ಪ್ರಕಾರ ಪೂಜೆ, ಅಭಿಷೇಕ ನಡೆದರೆ, ಮುಸ್ಲಿಂ ಸಂಪ್ರದಾಯದಂತೆ ಫಾತಿಹಾ ಒಂದೇ ಸಮಯಕ್ಕೆ ಎರಡೂ ಪ್ರಾರ್ಥನೆಗಳು ನಡೆಯುವುದು ಕ್ಷೇತ್ರದ ಭಾವೈಕಕ್ಕೆ ಸಾಕ್ಷಿಯಾಗಿದೆ.

ಇಲ್ಲಿ ನೆಲೆ ಊರಿರುವ ಜಾಂಗದೇವರ ಇತಿಹಾಸವೂ ಆಸಕ್ತಿ ಮೂಡಿಸುವಂತದ್ದು. ಈ ಕ್ಷೇತ್ರದ ಆದಿದೈವ ಮಹಾರಾಷ್ಟದ ಸಂತ ಪರಂಪರೆಯ ಮಹಾತಪಸ್ವಿ ಮಹಾರಾಜರು 1400 ವರ್ಷಗಳ ಕಾಲ ಬದುಕಿದ್ದರು ಎನ್ನುವ ನಂಬಿಕೆಯಿದೆ. ಆಗ ವಿಠೋಬಾ ದೇವರು ಸ್ವಪ್ನದಲ್ಲಿ ಬಂದು ‘ಕಾಲಹರಣಕ್ಕೆ ಯಾಕೆ ಮಾರು ಹೋಗಿದ್ದೀಯಾ’ ಎಂದು ಕೇಳಿ ಸಂದೇಶ ನೀಡಿದ್ದರಂತೆ. ಆಗ ಸಂತ ದೇವರ ದೀಕ್ಷೆ ಪಡೆದು ಧರ್ಮ ಪರಿಪಾಲನೆಗೆ ಮುಂದಾಗಿದ್ದರು ಎನ್ನುವ ಪ್ರತೀತಿ ಇದೆ.

ಚಾಂಗದೇವರು ಶಿಷ್ಯರೊಂದಿಗೆ ಯಮನೂರ ಗ್ರಾಮಕ್ಕೆ ಆಗಮಿಸಿ ಅಲ್ಲಿ ನರಸಿಂಹ ಸಾಲಿಗ್ರಾಮ ಪ್ರತಿಷ್ಠಾಪಿಸಿದ್ದರು. ಗುರುವಿನ ಆಜ್ಞೆಯಂತೆ ಅವರ ಶಿಷ್ಯ ಕ್ಷೇತ್ರೋಜಿರಾವ ಭರ್ಗೆ ಸಾಲಿಗ್ರಾಮಕ್ಕೆ ತನ್ನ ಬೆರಳಿನ ಐದು ಹನಿ ರಕ್ತದಿಂದ ಪೂಜೆಸುತ್ತಿದ್ದ ಸಾಲಿಗ್ರಾಮಕ್ಕೆ ಮುಂದಿನ ಪೀಳಿಗೆ ರಕ್ತದಿಂದ ಪೂಜೆ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಸಾಲಿಗ್ರಾಮವನ್ನು ಮುಚ್ಚಿಸಿ ಗದ್ದುಗೆ ರೂಪ ನೀಡಿದ್ದರು ಎನ್ನುವ ಚರಿತ್ರೆಯಿದೆ. ‌ಅಂದಿನಿಂದ ಇಂದಿನವರೆಗೂ ಬರ್ಗೆ ಮನೆತನದವರೆ ಈ ಕ್ಷೇತ್ರದ ಅರ್ಚಕರು ಎಂದು ಹೇಳಲಾಗುತ್ತಿದೆ.

ಚಾಂಗದೇವ ಮಹಾರಾಜರ ದೇವಸ್ಥಾನದಿಂದ 2 ಕಿಮೀ ದೂರವಿರುವ ಬೆಣ್ಣಿ ಹಳ್ಳದಲ್ಲಿ ಸ್ನಾನ ಮಾಡಿದರೆ ಮೈಮೇಲೆ ಇರುವ ಯಾವುದೇ ಚರ್ಮರೋಗವಾದರು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ದೇವರ ದರ್ಶನಕ್ಕೇ ಹೋಗುವ ಪೂರ್ವದಲ್ಲಿ ಭಕ್ತರು ಈ ಬೆಣ್ಣೆ ಹಳ್ಳದಲ್ಲಿ ಸ್ನಾನ ಮಾಡುತ್ತಾರೆ.

ಹಳ್ಳಕ್ಕೆ ಬಂದ ಭಕ್ತರು ಬಾಟಲ್‌ಗಳಲ್ಲಿ ಹಳ್ಳದ ನೀರನ್ನು ತುಂಬಿಕೊಂಡು ಹೋಗುತ್ತಾರೆ. ಭಕ್ತರು ಹಸ್ತ, ಕುದುರೆ, ಸರಗಿ ಕಾಣಿಕೆ, ಸಕ್ಕರೆ ಇತ್ಯಾದಿಗಳನ್ನು ಚಾಂಗದೇವರ ಗದ್ದುಗೆಯ ಮೇಲೆ ಇಟ್ಟು ಹರಕೆ ತೀರಿಸುತ್ತಾರೆ.

ಇನ್ನೂ ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರ, ತೆಲಂಗಾಣ ಹಾಗೂ ಹೈದರಾಬಾದಿನಿಂದಲೂ ಭಕ್ತರು ಆಗಮಿಸಿ ವಾರಗಟ್ಟಲೆ ಇಲ್ಲಿಯೇ ಉಳಿಯುತ್ತಾರೆ. ಚಾಂಗದೇವರ ದರ್ಶನ ಪಡೆಯಲು ಕಿಮೀ ಗಟ್ಟಲೆ ಲಕ್ಷಾಂತರ ಭಕ್ತರು ಸರದಿ ಸಾಲಿನಲ್ಲಿ ನಿಂತಿರುತ್ತಾರೆ.ಜಾತ್ರೆಗೆ ಬರುವ ಭಕ್ತರಿಗೆ ಗ್ರಾಮ ಪಂಚಾಯಿತಿಯಿಂದ ಎಲ್ಲ ಸೌಲಭ್ಯ ಕಲ್ಪಿಸಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಬೆಣ್ಣೆಹಳ್ಳದಿಂದ ಬರುವ ಮಾರ್ಗ ಮಧ್ಯೆ ಕುಡಿಯುವ ನೀರು ಹಾಗೂ ಪೊಲೀಸ್ ಚೌಕಿ ವ್ಯವಸ್ಥೆ ಕಲ್ಪಿಸಲಾಗಿದೆ ವಿರೇಶ ಗುಡುದೂರಮಠ ಪಿಡಿಒ

ನವಲಗುಂದ ತಾಲ್ಲೂಕಿನ ಯಮನೂರಿನ ಚಾಂಗದೇವ ದೇವರ ದೇವಸ್ಥಾನ
ನವಲಗುಂದ ತಾಲ್ಲೂಕಿನ ಯಮನೂರಿನ ಚಾಂಗದೇವ ದೇವರ ದೇವಸ್ಥಾನ
ಮಾ.29ಕ್ಕೆ ಗಂಧಾಭಿಷೇಕ, 30ಕ್ಕೆ ಉರುಸ್ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ಪೂಜೆ-ಪ್ರಾರ್ಥನೆ ಬೆಣ್ಣಿಹಳ್ಳದ ಸ್ನಾನ: ಸರ್ವರೋಗಕ್ಕೂ ಮದ್ದು ನಂಬಿಕೆ
ಜಾತ್ರೆಗೆ ಬರುವ ಭಕ್ತರಿಗೆ ಗ್ರಾಮ ಪಂಚಾಯಿತಿಯಿಂದ ಎಲ್ಲ ಸೌಲಭ್ಯ ಕಲ್ಪಿಸಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಬೆಣ್ಣೆಹಳ್ಳದಿಂದ ಬರುವ ಮಾರ್ಗ ಮಧ್ಯೆ ಕುಡಿಯುವ ನೀರು ಹಾಗೂ ಪೊಲೀಸ್ ಚೌಕಿ ವ್ಯವಸ್ಥೆ ಕಲ್ಪಿಸಲಾಗಿದೆ
ವಿರೇಶ ಗುಡುದೂರಮಠ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT