ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ, ನಿಯತ್ತು ಸಮ್ಮಿಲನಗೊಂಡಾಗ

Last Updated 4 ಜುಲೈ 2013, 6:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಕೆಯ ಹೆಸರು ಪುಟ್ಟಮ್ಮ. ಬಳ್ಳಾರಿ ಜಿಲ್ಲೆ ಮಹಾನಂದಿಕೊಟ್ಟಂ ಬಳಿಯ ಅಂಬೇಡ್ಕರ್ ನಗರದ ವಿದ್ಯಾರ್ಥಿನಿ. ಕಡುಬಡತನದಲ್ಲೇ ಎಸ್‌ಎಸ್‌ಎಲ್‌ಸಿ ಮುಗಿಸಿದ ಆಕೆ, ಪಾಲಿಟೆಕ್ನಿಕ್ ಕೋರ್ಸ್‌ಗೆ ಸೇರುವ ಬಯಕೆಯಿಂದ ತಾಯಿ ಜೊತೆ ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ನಡೆಯುತ್ತಿರುವ ಡಿಪ್ಲೊಮಾ ಕೌನ್ಸೆಲಿಂಗ್ ಕೇಂದ್ರಕ್ಕೆ ಸೋಮವಾರ ಬಂದಿದ್ದಳು. ಅಷ್ಟೆಲ್ಲ ಆಕೆಗೆ ತನ್ನೂರಿನಲ್ಲಿ ಸೀಟು ಕೂಡ ಖಚಿತವಾಗಿತ್ತು. ಆದರೆ ಶುಲ್ಕ ಕಟ್ಟಲು ಆಕೆಯ ಬಳಿ ಹಣ ಇರಲಿಲ್ಲ!

ಡಿಪ್ಲೊಮಾ ಓದಬೇಕೆಂಬ ತುಡಿತ, ಕೈಯಲ್ಲಿ ಹಣ ಇಲ್ಲ ಎಂಬ ಕೊರಗು... ಇನ್ನೇನು ಮತ್ತೆ ಊರ ಕಡೆಗೆ ಹೊರಡಬೇಕು ಎನ್ನುವ ಹೊತ್ತಿನಲ್ಲಿ, ಆಕೆಯ ಬಾಡಿದ ಮುಖ ಕಂಡ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಜಿ.ಎಂ. ಗೋಣಿ ಮತ್ತು ಕೌನ್ಸೆಲಿಂಗ್ ಕೇಂದ್ರದ ನೋಡಲ್ ಅಧಿಕಾರಿ, ಗಜೇಂದ್ರಗಡ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಎಸ್.ಟಿ. ಭೈರಪ್ಪನವರ ಹೃದಯ ಕರಗಿತ್ತು. ಅವರಿಬ್ಬರೂ ಆಕೆಗೆ ಶುಲ್ಕ ಪಾವತಿಸಲು ಅಗತ್ಯವಾಗಿದ್ದ ರೂ.1,310 ನೀಡಿ ನೆರವಾಗಿದ್ದರು.

ವಿಶೇಷವೆಂದರೆ, ಬುಧವಾರ ಬೆಳಿಗ್ಗೆ ತಂದೆಯ ಜೊತೆ ಬಳ್ಳಾರಿಯಿಂದ ಮತ್ತೆ ಕೌನ್ಸೆಲಿಂಗ್ ಕೇಂದ್ರಕ್ಕೆ ಬಂದಿದ್ದ ಪುಟ್ಟಮ್ಮ, ಡಿಪ್ಲೊಮಾ ಸೇರಲು ನೆರವಾದ ಆ ಇಬ್ಬರು ಅಧಿಕಾರಿಗಳ ಹಣವನ್ನು ಹಿಂದಿರುಗಿಸಿದಳು. ಆ ಕ್ಷಣ. ಆಕೆಯ ಮುಖದಲ್ಲಿ ಸಂಭ್ರಮದ ನಗು ಕಾಣಿಸಿತು; ಆ ಇಬ್ಬರು ಅಧಿಕಾರಿಗಳ ಸಹಿತ ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದುವು!

`ನಮ್ಮದು ಬಡ ಕುಟುಂಬ. ಅಪ್ಪನ ಕೂಲಿ ಕೆಲಸವೇ ಆಧಾರ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 65 ಅಂಕ ಗಳಿಸಿದ್ದ ನಾನು, ಡಿಪ್ಲೊಮಾ ಸೇರಲು ಬಂದಾಗ ಕೈಯಲ್ಲಿ ಹಣ ಇರಲಿಲ್ಲ. ಇಬ್ಬರು ಅಧಿಕಾರಿಗಳೂ ನನ್ನ ಪಾಲಿಗೆ ನೆರವಾಗಿ ಬೆಳಕು ನೀಡಿದರು. ಹಣ ಹಿಂದಿರುಗಿಸಲು ಇವತ್ತು ತಂದೆಯ ಜೊತೆ ಬಂದೆ' ಎಂದು ಪುಟ್ಟಮ್ಮ ಹೇಳಿದಳು.

`ಡಿಪ್ಲೊಮಾ ಸೇರಲು ಸೀಟು ಸಿಕ್ಕಿದರೂ ಶುಲ್ಕ ಪಾವತಿಸುವಷ್ಟು ಹಣ ಇಲ್ಲ. ಶುಲ್ಕ ಪಾವತಿಸಿದರೆ ಊರಿಗೆ ಮರಳಲು ಸಾಕಾಗಲ್ಲ ಎಂದು ಪುಟ್ಟಮ್ಮ ಮತ್ತು ತಾಯಿ ಹೇಳಿದಾಗ ಮನಸ್ಸಿಗೆ ನೋವಾಯಿತು. ಹೀಗಾಗಿ ನಾವಿಬ್ಬರೂ ನೆರವಾದೆವು. ಇವತ್ತು ಆಕೆ ತಂದೆ ಜೊತೆ ಬಂದು ಹಣ ಮರಳಿಸಿದಳು. ಆ ಕಡು ಬಡತನದಲ್ಲೂ ಆಕೆ ಮತ್ತು ಕುಟುಂಬದ ನಿಯತ್ತು ಕಂಡು ಕಣ್ಣೀರು ಬಂತು...' ಎಂದು ಜಿ.ಎಂ. ಗೋಣಿ ಆ ಕ್ಷಣವನ್ನು `ಪ್ರಜಾವಾಣಿ' ಜೊತೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT