ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ಚಂದ್ರಮ್ಮ ದೇವಿ ಜಾತ್ರೆ ಆರಂಭ

ದೇವಸ್ಥಾನದ ಸುತ್ತಲೂ ಬೀಡುಬಿಟ್ಟ ಭಕ್ತರು: ಅನುರಣಿಸಿದ ಉಘೇ, ಉಘೇ
Last Updated 27 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಆಲಮಟ್ಟಿ: ಸಹಸ್ರಾರು ಜನರಿಂದ ದೀಡ್‌ ನಮಸ್ಕಾರ, ಪೂಜೆ ಪುನಸ್ಕಾರ, ದರ್ಶನಕ್ಕೆ ತಾಸುಗಟ್ಟಲೇ ಸಾಲುಗಟ್ಟಿ ನಿಂತ ಭಕ್ತರು. ಭಂಡಾರ ತೂರುತ್ತಾ ದೇವಿಯ ಮಹಿಮೆ ಕೊಂಡಾಡುವ ಜೋಗಪ್ಪಗಳು, ಅನುರಣಿಸಿದ ‘ಉಘೇ..ಉಘೇ..’ ಘೋಷಣೆ

‌ಇದು ಗುರುವಾರದಿಂದ ಆರಂಭಗೊಂಡ ಕೃಷ್ಣೆಯ ತಟದ ಚಂದ್ರಮ್ಮ ದೇವಿಯ ಜಾತ್ರೆಯ ನೋಟ. ಕಳೆದ ಎರಡು ದಿನದಿಂದಲೇ ಭಕ್ತರು ನದಿಯ ತಟ, ಆಲಮಟ್ಟಿ ಸುತ್ತಮುತ್ತ ಟೆಂಟ್‌ ಹಾಕಿ ಬೀಡುಬಿಟ್ಟಿದ್ದಾರೆ.

ಗುರುವಾರ ನಸುಕಿನ ಜಾವ 4 ಗಂಟೆಯಿಂದಲೇ ನೂರಾರು ಭಕ್ತರು ಕೃಷ್ಣಾ ನದಿಯಲ್ಲಿ ಮಿಂದು ಮಡಿಯಾಗಿ ದೇವಸ್ಥಾನದ ವರೆಗೆ ದೀಡ್‌ ನಮಸ್ಕಾರ ಹಾಕಿ ಭಕ್ತಿಯನ್ನು ಮೆರೆದರು.

ಬೆಳಗಿನ ಜಾವ ದೇವಿಗೆ ಅಭಿಷೇಕ ನೆರವೇರಿದ ನಂತರ ಜಾತ್ರೆಗೆ ಚಾಲನೆ ದೊರೆಯಿತು. ಧರ್ಮಾಧಿಕಾರಿ ಸೋಮವಾರ ದೇಸಾಯಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು.

ಮಧ್ಯಾಹ್ನ ಒಂದು ಕಿ.ಮೀಟರ್‌ಗೂ ಹೆಚ್ಚು ದೂರ ಭಕ್ತರು ದೇವಿ ದರ್ಶನಕ್ಕಾಗಿ ಸಾಲುಗಟ್ಟಿದ್ದರು. ಪೊಲೀಸರು, ಕಾರ್ಯ
ಕರ್ತರು ಭಕ್ತರಿಗೆ ಸುಗಮ ದರ್ಶನ ಮಾಡಿಸಲು ಹರಸಾಹಸ ಪಟ್ಟರು.

ಆಲಮಟ್ಟಿ ಸರ್ಕಲ್‌ ಬಳಿಯೇ ವಾಹನಗಳನ್ನು ನಿಲ್ಲಿಸಲಾಗಿದ್ದರೂ, ಸಂಚಾರ ದಟ್ಟಣೆ ಮಾತ್ರ ತಗ್ಗಲಿಲ್ಲ. ಆಲಮಟ್ಟಿ, ಮರಿಮಟ್ಟಿ, ಚಿಮ್ಮಲಗಿ, ಮರಿಮಟ್ಟಿ ಗ್ರಾಮಗಳ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

ಜಾತ್ರೆಯಲ್ಲಿ ಬಹುತೇಕ ಮಹಾರಾಷ್ಟ್ರದ ಭಕ್ತರ ಸಂಖ್ಯೆಯೇ ಹೆಚ್ಚಾಗಿತ್ತು. ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದರು.

ಶುಕ್ರವಾರ, ಶನಿವಾರ ಜಿಲ್ಲೆಯ ನಾನಾ ಕಡೆಯಿಂದ ಇನ್ನಷ್ಟು ಜನರು ಬರುವ ನಿರೀಕ್ಷೆಯಿದೆ. ಜಾತ್ರೆಗೆ ಮಕ್ಕಳ ವಿವಿಧ ಮನೋರಂಜನಾ ಕ್ರೀಡೆಗಳು ಬಂದಿದ್ದು, ಸಹಸ್ರಾರು ಜನ ಅವುಗಳ ಆಡುವುದರಲ್ಲಿ ತಲ್ಲೀನರಾಗಿದ್ದರು. ಮಿಠಾಯಿ ಅಂಗಡಿ, ಬಳೆ ಅಂಗಡಿ, ವಿವಿಧ ತಿಂಡಿ ತಿನುಸುಗಳ ಅಂಗಡಿ, ಬುಟ್ಟಿ ಮಾರಾಟ, ಲಂಬಾಣಿ ಜನರ ಉಡುಗೆ ತೊಡುಗೆಗಳನ್ನು ಮಾರುವವರು ಅಧಿಕ ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT