ಗುಬ್ಬಿ: ಅರಣ್ಯ ಭೂಮಿ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಚೇಳೂರು ಹೋಬಳಿ ಗಂಗಯ್ಯನಪಾಳ್ಯ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುರುವಾರ ಜಟಾಪಟಿ ನಡೆದಿದೆ.
ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಲಾಠಿ ಪ್ರಹಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು
ಘಟಕದ ಅಧ್ಯಕ್ಷ ದೊಡ್ಡನಂಜಯ್ಯ ಹಾಗೂ ಹಲವು ರೈತರು ಗಾಯಗೊಂಡಿದ್ದಾರೆ.
ಈ ವಿವಾದಿತ ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ಆಗಿದ್ದ ತೀರ್ಮಾನ ಉಲ್ಲಂಘಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ರೈತರ ಬಗರ್ ಹುಕುಂ ಭೂಮಿಯಲ್ಲಿ ಅಕ್ರಮವಾಗಿ ಕಂದಕ ತೆಗೆಯಲು ಪ್ರಾರಂಭಿಸಿದ್ದರು. ಇದನ್ನು ವಿರೋಧಿಸಿ ಸುತ್ತಮುತ್ತಲಿನ ರೈತರು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡನಂಜಯ್ಯ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಈ ಕಾರ್ಯವೈಖರಿಯನ್ನು ಪ್ರಶ್ನಿಸಿದರು.
ತಾಳ್ಮೆಯಿಂದ ಸ್ಪಂದಿಸುವ ಬದಲಾಗಿ ಅರಣ್ಯ ಇಲಾಖೆ ಸಿಬ್ಬಂದಿ ರೈತರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ ಎಂದು ಮುಖಂಡರು ದೂರಿದರು. ಅರಣ್ಯ ಇಲಾಖೆಗೆ ಲಾಠಿ ಚಾರ್ಜ್ ಮಾಡುವ ಅಧಿಕಾರ ಕೊಟ್ಟವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಿಬ್ಬಂದಿ ನಡೆಸಿದ ಲಾಠಿ ಪ್ರಹಾರದಲ್ಲಿ ನಾಲ್ವರು ರೈತರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಮಹಿಳೆ
ಯರು ಸೇರಿದಂತೆ ಹತ್ತಾರು ರೈತರಿಗೆ ಪೆಟ್ಟಾಗಿದೆ. ತೀವ್ರ ಗಾಯಗೊಂಡಿರುವ ದೊಡ್ಡ ನಂಜಯ್ಯ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಜಟಾಪಟಿಯಲ್ಲಿ ಅರಣ್ಯ ಇಲಾಖೆಯ ಗಸ್ತು ವನಪಾಲಕ ವಿಜಯ ದೇವೇಂದ್ರ ಹಟ್ಟಿ ಎಂಬುವರ ತಲೆಗೂ ಪೆಟ್ಟು ಬಿದ್ದಿದ್ದು, ಆಸ್ಪತ್ರೆ
ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.