ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾನೋ ಯೂರಿಯಾ ಬಳಸಲು ರೈತರಿಗೆ ಸಲಹೆ

Published 31 ಜುಲೈ 2023, 15:28 IST
Last Updated 31 ಜುಲೈ 2023, 15:28 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಜುಲೈನಲ್ಲಿ ಸಾಕಷ್ಟು ಮಳೆಯಾಗಿರುವ ಕಾರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಗೋವಿನಜೋಳ, ಸೂರ್ಯಕಾಂತಿ, ತೊಗರಿ, ಶೇಂಗಾ, ಹತ್ತಿ ಹಾಗೂ ಇತರೆ ಬೆಳೆಗಳಿಗೆ ರೈತರು ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಬಳಸುತ್ತಿದ್ದಾರೆ. ಆದರೆ, ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಒಂದು ಎಕರೆ ಬೆಳೆಗೆ ಸುಮಾರು 500 ಮಿ.ಲೀ. ನ್ಯಾನೋ ಯೂರಿಯಾ ಬಳಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ತಿಳಿಸಿದ್ದಾರೆ.

ಬೆಳೆಗಳಿಗೆ ಹರಳು ರೂಪದ ಯೂರಿಯಾ ಬಳಸುವುದರಿಂದ ಬೇಕಾದ ಪೋಷಕಾಂಶಗಳು ಕೇವಲ ಶೇ 50ರಷ್ಟು ಮಾತ್ರ ದೊರೆಯುವ ಸಾಧ್ಯತೆ ಇರುತ್ತದೆ. ಉಳಿದ ಪೋಷಕಾಂಶಗಳು ನೀರಿನ ಹರಿವಿಕೆಯಿಂದ ಪೋಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ ಬಳಸುವುದರಿಂದ ಬೆಳೆಗಳಿಂದ ಶೇ 80ರಷ್ಟು ಪೋಷಕಾಂಶಗಳು ಉಪಯುಕ್ತವಾಗುತ್ತದೆ ಎಂದು ತಿಳಿಸಿದ್ದಾರೆ.

ನ್ಯಾನೋ ಯೂರಿಯಾ ಪ್ರಧಾನ ಪೋಷಕಾಂಶವಾದ ಸಾರಜನಕದ ಮೂಲ ದ್ರವರೂಪ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಲ್ಲಿ ಕಳೆ ನಿರ್ವಹಣೆಯಾಗುವುದರ ಜೊತೆಗೆ ಉತ್ತಮ ಬೆಳವಣಿಗೆಗೆ ಅನುಕೂಲ ಮಾಡುತ್ತದೆ. ಬೆಳೆಗಳಿಗೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇತರೆ ಪೋಷಕಾಂಶವನ್ನು ತೆಗೆದುಕೊಳ್ಳುವ ಸಂಯೋಜಿತ ಮಾರ್ಗವನ್ನು ಪ್ರಚೋದಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಬೆಳೆಗಳ ಉತ್ಪಾದಕತೆ ಹೆಚ್ಚಿಸಿ ವೆಚ್ಚ ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಒಂದು ಬಾಟಲ್ ನ್ಯಾನೋ ಯೂರಿಯಾ (500 ಮಿ.ಲೀ) ಒಂದು ಚೀಲ ಹರಳು ರೂಪದ ಯೂರಿಯಾಗೆ ಸಮವಾಗಿರುತ್ತದೆ. ಒಂದು ಬಾಟಲ್ ನ್ಯಾನೋ ಯೂರಿಯಾದ ದರ ₹225 ಇದ್ದು, ಸಬ್ಸಿಡಿ ರಹಿತವಾಗಿರುತ್ತದೆ. ಹರಳು ರೂಪದ ಯೂರಿಯಾದ ದರ ಸಬ್ಸಿಡಿ ಒಳಗೊಂಡಂತೆ ₹266 ಇದೆ. ಹರಳು ರೂಪದ ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾದ ಬಳಕೆಯು ಸಬ್ಸಿಡಿ ಹೊರೆಯನ್ನು ತಗ್ಗಿಸುವುದರ ಜೊತೆಗೆ ವಿದೇಶಿ ವಿನಿಮಯದ ಉಳಿಕೆಗೆ ಸಹ ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.

ಮಾಹಿತಿಗೆ: ಗದಗ ಜಿಲ್ಲೆಯ ಇಫ್ಕೋ ಸಂಸ್ಥೆಯ ಪ್ರತಿನಿಧಿ ಗಣೇಶ ಮೊಬೈಲ್ ಸಂಖ್ಯೆ: 9448090423 ಇವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT