ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ಕೃಷಿಹೊಂಡವೇ ಜೀವನಕ್ಕೆ ಆಧಾರ, ಬಹುಹಂತದ ಕೃಷಿಯಿಂದ ಲಕ್ಷಾಂತರ ಆದಾಯ

Published 29 ಮಾರ್ಚ್ 2024, 5:14 IST
Last Updated 29 ಮಾರ್ಚ್ 2024, 5:14 IST
ಅಕ್ಷರ ಗಾತ್ರ

ನರಗುಂದ: ಬರದ ನೆಪ ಒಡ್ಡಿ ಕೈ ಕಟ್ಟಿ ಕುಳಿತರೆ ಕೃಷಿ ಸಾಗಿಸಲಾಗದು. ಮನಸ್ಸಿಟ್ಟು ಕಾಯಕ ಮಾಡಿದರೆ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯ ಪಡೆಯಲು ಸಾಧ್ಯ ಎಂದು ಕೃಷಿಯಲ್ಲಿ ಖುಷಿ ಕಾಣುತ್ತಿರುವ ತಾಲ್ಲೂಕಿನ ಹದ್ಲಿಯ ರೈತ ಯಲ್ಲಪ್ಪ ಸೋನಕೊಪ್ಪ ತಮ್ಮ ಅನುಭವದ ಮಾತುಗಳನ್ನು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ತಾಲ್ಲೂಕಿನ ಮಾದರಿ ರೈತನಾಗಿ, ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ ಅವರು. ಪದವೀಧರನಾದರೂ ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಇರುವ ಕೃಷಿ ಹೊಂಡದಲ್ಲಿನ ಅಲ್ಪ ನೀರಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ಕೃಷಿಯಲ್ಲಿ ಲಾಭ ಇದೆ ಎಂದು ತೋರಿಸಿ ಕೊಟ್ಟಿದ್ದಾರೆ.

ಆರು ಎಕರೆ ಜಮೀನು ಹೊಂದಿರುವ ಯಲ್ಲಪ್ಪ ತಾಯಿಯ ಸಹಾಯದಿಂದ ಎರಡು ಎಕರೆ ಭೂಮಿಯನ್ನು ಬಹುಹಂತದ ಕೃಷಿಗೆ ಅಳವಡಿಸಿ ಆದಾಯ ತರುವ ಅಲ್ಪಾವಧಿ, ದೀರ್ಘಾವಧಿ ಬೆಳೆ, ತರಕಾರಿ ಬೆಳೆದು ನಿರಂತರ ಆದಾಯ ತರುವಲ್ಲಿ ತಮ್ಮದೇ ಸಾವಯವ ಕೃಷಿ ಮೂಲಕ ಮುಂದಾಗಿದ್ದಾರೆ.

ತರಕಾರಿ ಲಾಭ: ಅರ್ಧ ಎಕರೆ ಭೂಮಿಯಲ್ಲಿ ತರಕಾರಿಗಳಾದ ಈರುಳ್ಳಿ, ಬದನೆ, ಬೆಂಡೆ, ಸೌತಿ, ಹೀರೆ, ಟೊಮೆಟೊ ಹೀಗೆ ತರಹೇವಾರಿ  ತರಕಾರಿ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಈ ಮೂಲಕ ಯಲ್ಲಪ್ಪ ಸೋನಕೊಪ್ಪ ಹಾಗೂ ಅವರ ತಾಯಿ ಮಾಯವ್ವ ಸೋನಕೊಪ್ಪ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.

ಕರಿಬೇವು, ಬಾಳೆ, ನಿಂಬೆ, ನೇರಲಹಣ್ಣು, ತೆಂಗಿನಗಿಡ, ವಿವಿಧ ಹೂವಿನ, ಮೇಕೆ, ಮೇವು ಸೊಗತಿಯನ್ನು ಬೆಳೆಯುವ ಮೂಲಕ ಬಹು ಹಂತದ ಕೃಷಿಗೆ ತಮ್ಮದೇ ಪ್ರಯತ್ನ ನಡೆಸಿದ್ದಾರೆ. ಅರ್ಧ ಎಕರೆಯಲ್ಲಿ ಈರುಳ್ಳಿ ಬೀಜ ಬೆಳೆದಿದ್ದು ಸುಮಾರು ₹ 2 ಲಕ್ಷ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ.

ಜಾನುವಾರು ಸಾಕಣೆ: ನಾಲ್ಕು ಆಕಳುಗಳನ್ನು ಸಾಕಣೆ ಮಾಡಿದ್ದು, ನಿತ್ಯ ₹ 200 ಹಾಲು ಮಾರಿ ತಿಂಗಳಿಗೆ ₹ 6 ಸಾವಿರ ಹಾಲಿನ ಲಾಭ ಪಡೆಯುತ್ತಿದ್ದಾರೆ. ಹೊಲದಲ್ಲಿಯೇ ಶೆಡ್ ಹಾಕಿ 30 ಮರಿಗಳನ್ನು ಬೆಳೆಸಿ ಅವುಗಳನ್ನು ಮಾರಿ ಸುಮಾರು ₹ 70ಸಾವಿರದಷ್ಟು ಲಾಭ ಪಡೆಯುತ್ತಿದ್ದಾರೆ.

ಇದರ ಜೊತೆಗೆ ಹಿಂಗಾರು ಬೆಳೆಗಳಾದ ಜೋಳ, ಹತ್ತಿ ಬೆಳೆದು ಅದರಿಂದಲೇ ಸುಮಾರು ಎರಡು ಲಕ್ಷ ಆದಾಯ ಪಡೆದಿದ್ದಾರೆ. ಎರಡು ಎಕರೆಯಲ್ಲಿನ ಬೆಳೆ ಹಾಗೂ ಉಪಕಸಬುಗಳಾದ ಹೈನುಗಾರಿಕೆ, ಮೇಕೆ, ಟಗರು ಸಾಗಾಣಿಕೆಯಿಂದ ಒಟ್ಟು ₹ 6 ಲಕ್ಷ ಆದಾಯ ಪಡೆದಿದ್ದು, ನಿವ್ವಳ ₹3 ಲಕ್ಷ ಲಾಭ ಬಂದಿದೆ. ಬರದಲ್ಲೂ ಕೃಷಿ ಹೊಂಡ ಹಾಗೂ ನೆರೆ ಹೊಲದಿಂದ ಕೊಳವೆಬಾವಿ ಮೂಲಕ ನೀರು ಪಡೆದು ಬರದಲ್ಲೂ ಉತ್ತಮ ಬೆಳೆ ತೆಗೆದಿರುವುದು ಎಲ್ಲ ರೈತರಿಗೂ ಮಾದರಿ.

ಕೃಷಿ ಹೊಂಡಗಳೇ ನನಗೆ ಆಧಾರ. ನಿತ್ಯ ದುಡಿಮೆ ಮಾಡಬೇಕು. ಸರ್ಕಾರದ ಯೋಜನೆಯ ಸಹಾಯ ಪಡೆದಿರುವೆ. ಸಾವಯವ ಕೃಷಿಯಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಕೃಷಿ ಬಗ್ಗೆ ನಿರ್ಲಕ್ಷ್ಯ ತೋರದೆ ಯುವಕರು ಇದರಲ್ಲಿ ತೊಡಗಬೇಕು. ಹೆಚ್ಚಿನ ಆದಾಯ ಪಡೆದು. ಮಾದರಿ ರೈತರಾಗಲು ಸಾಧ್ಯ.
-ಯಲ್ಲಪ್ಪ, ಸೋನಕೊಪ್ಪ ಹದ್ಲಿ
ನರಗುಂದ ತಾಲ್ಲೂಕಿನ ಹದ್ಲಿಯ ರೈತ ಯಲ್ಲಪ್ಪ ಸೋನಕೊಪ್ಪ ಬೆಳೆದ ಬದನೆ
ನರಗುಂದ ತಾಲ್ಲೂಕಿನ ಹದ್ಲಿಯ ರೈತ ಯಲ್ಲಪ್ಪ ಸೋನಕೊಪ್ಪ ಬೆಳೆದ ಬದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT