ಶನಿವಾರ, ಜೂನ್ 19, 2021
22 °C
ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ

ಪಶ್ಚಿಮ ಬಂಗಾಳದಲ್ಲಿ ದೌರ್ಜನ್ಯ ಆರೋಪ: ಗದಗ ಜಿಲ್ಲಾ ಬಿಜೆಪಿ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಪರೋಕ್ಷವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರಣರಾಗಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಗದಗ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

‘2021ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ತೃಣಮೂಲ ಕಾಂಗ್ರೆಸ್‌ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿ ಮಾಡಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಸಾಕಷ್ಟು ದಂಗೆಗಳನ್ನು ಮಾಡಿಸುವುದರ ಮೂಲಕ ಪಕ್ಷದ ಕಾರ್ಯಕರ್ತರ ಮನೆಗಳು ಹಾಗೂ ಪಕ್ಷದ ಕಾರ್ಯಾಲಯಗಳನ್ನು ಧ್ವಂಸಗೊಳಿಸಿದ್ದಾರೆ’ ಎಂದು ಬಿಜೆಪಿ ಮನವಿಯಲ್ಲಿ ಆರೋಪ ಮಾಡಿದೆ.

‘ಮೇ 2ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಘೋಷಣೆಯ ನಂತರ 6 ಜನ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಅಲ್ಲದೇ ನೂರಾರು ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಭಯಭೀತ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಐದು ವರ್ಷಗಳ ಅವಧಿಯಲ್ಲಿ 140ಕ್ಕಿಂತ ಹೆಚ್ಚು ಜನ ಬಿಜೆಪಿ ಕಾರ್ಯಕರ್ತರು ಟಿಎಂಸಿ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ’ ಎಂದು ದೂರಿದ್ದಾರೆ. 

‘ಈ ಎಲ್ಲ ಅಹಿತಕರ ಘಟನೆಗಳನ್ನು ತಡೆದು ದಂಗೆಕೊರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಿಯೋಗದಲ್ಲಿ ಗದಗ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ದ್ರಾಕ್ಷಾರಸ ನಿಗಮದ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜು ಕುರಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್.ಕರೀಗೌಡ್ರ, ಪ್ರಮುಖರಾದ ಶ್ರೀಕಾಂತ ಖಟವಟೆ, ಮಾಂತೇಶ ನಾಲ್ವಾಡ, ಸುಧೀರ ಕಾಟೀಗರ, ಶಿವು ಹಿರೇಮನಿಪಾಟೀಲ, ಜಗನ್ನಾಥಸಾ ಭಾಂಡಗೆ, ಸುರೇಶ ಚಿತ್ತರಗಿ, ಅಮರನಾಥ ಗಡಗಿ, ಮೋಹನ ಮಾಳಗಿಮನಿ, ಸುರೇಶ ಮರಳಪ್ಪನವರ, ಮಾಧುಸಾ ಮೇರವಾಡೆ, ವಿನಾಯಕ ಹಬೀಬ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು