ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ | ಪಡಿತರ ಅಕ್ಕಿ ದಂಧೆಕೋರರ ಪಾಲು

Published 11 ನವೆಂಬರ್ 2023, 4:37 IST
Last Updated 11 ನವೆಂಬರ್ 2023, 4:37 IST
ಅಕ್ಷರ ಗಾತ್ರ

ಗಜೇಂದ್ರಗಡ: ತಾಲ್ಲೂಕಿನಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಬೇರೆಡೆ ಸಾಗಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಡೆದ ನಿರಂತರ ದಾಳಿಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಸಂಪೂರ್ಣ ನಿಂತಿಲ್ಲ.

ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪೂರೈಸುವ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳು ವಿತರಣೆ ಮಾಡಿದ ಎರಡ್ಮೂರು ದಿನಗಳಲ್ಲಿ ಕಾಳಸಂತೆ ಸೇರುತ್ತದೆ. ನಗರ ಸೇರಿದಂತೆ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಕೆ.ಜಿಗೆ ₹10-₹15 ನೀಡಿ, ಸಂಗ್ರಹಿಸಲಾಗುತ್ತದೆ. ಜಮೀನುಗಳಲ್ಲಿರುವ ಶೆಡ್‌ಗಳು, ಗೋದಾಮುಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಶೇಖರಿಸಲಾಗುತ್ತದೆ. ತಿಂಗಳಿಗೆ ಎರಡ್ಮೂರು ಬಾರಿ ದೊಡ್ಡ  ಲಾರಿಗಳಲ್ಲಿ ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಿಗೆ ರವಾನಿಸಲಾಗುತ್ತದೆ.

ಇತ್ತೀಚೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿಯೊಬ್ಬರಿಗೆ 5 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, 5 ಕೆ.ಜಿ ಅಕ್ಕಿಯ ಮೊತ್ತವನ್ನು ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಬಹುತೇಕ ಜನರು ಪಡಿತರ ಅಕ್ಕಿ ಮಾರಾಟ ಮಾಡಲು ಮುಂದಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.

ಗೋದಾಮು, ಖಾಸಗಿ ಜಾಗದಲ್ಲಿ ಲೋಡ್‌ಗಟ್ಟಲೆ ಸಂಗ್ರಹಿಸುವುದು ಅಷ್ಟಾಗಿ ನಡೆಯುತ್ತಿಲ್ಲ. ಸಣ್ಣ ಪ್ರಮಾಣದಲ್ಲಿ ಅಕ್ಕಿ ಖರೀದಿಸಿದವರು ವಾರಕ್ಕೊಮ್ಮೆ ರಾತ್ರಿ ಸಮಯದಲ್ಲೇ ಪಟ್ಟಣದ ಹೊರ ವಲಯದಲ್ಲಿ ಒಂದೆಡೆ ಸಂಗ್ರಹಿಸಿ,  ಮಿನಿ ಲಾರಿಗಳಲ್ಲಿ ಸಾಗಿಸುತ್ತಿದ್ದಾರೆ.

ಬೆಳಕಿಗೆ ಬಾರದೆ ಎಷ್ಟೋ ಪ್ರಕರಣಗಳಿವೆ. ಸಣ್ಣ ಪುಟ್ಟ ದಂಧೆಕೋರರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿದ್ದು, ದೊಡ್ಡ ಕುಳಗಳ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಹಾಲಿನಪುಡಿಗೂ ಕನ್ನ

ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ವಿತರಿಸುವ ಹಾಲಿನ ಪುಡಿಗೂ ದಂಧೆಕೋರರು ಕನ್ನ ಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಸೆಪ್ಟೆಂಬರ್‌ ತಿಂಗಳಲ್ಲಿ ಎಪಿಎಂಸಿ ಆವರಣದ ಕಟ್ಟಡವೊಂದರಲ್ಲಿ ಸಂಗ್ರಹಿಸಿದ್ದ 26.50 ಕ್ವಿಂಟಲ್‌ ಅಕ್ಕಿ ₹54000 ಮೊತ್ತದ 180 ಪ್ಯಾಕೆಟ್‌ ಹಾಲಿನ ಪೌಡರ್‌ ಅನ್ನು ಆಹಾರ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡಿಸಿಕೊಂಡಿದ್ದರು. ಅಂಗನವಾಡಿ ಶಾಲೆಗಳಿಂದ ದಲ್ಲಾಳಿಗಳ ಮೂಲಕ ಅಕ್ರಮವಾಗಿ ಸಂಗ್ರಹಿಸಿ ಬೇಕರಿ ಹಾಗೂ ಬೇರೆ ಜಿಲ್ಲೆಗಳಿಗೆ ಹೆಚ್ಚಿನ ಬೆಲೆಗೆ ರವಾನಿಸಲಾಗುತ್ತಿದೆ. ಅಂಗನವಾಡಿ ಮತ್ತು ಶಾಲಾ ಮಕ್ಕಳ ಇದರಿಂದ ವಂಚಿತರಾಗುತ್ತಿದ್ದಾರೆ.

‘ಜನರು ಮಾಹಿತಿ ನೀಡಿ’

‘ಗಜೇಂದ್ರಗಡ ಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ದಾಸ್ತಾನಿನ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಈ ವರ್ಷ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆಲ. ಅಕ್ರಮ ತಡೆಯಲು ತಹಶೀಲ್ದಾರ್‌ ನೇತೃತದಲ್ಲಿ ತಂಡ ರಚಿಸಲಾಗಿದ್ದು ಸಾರ್ವಜನಿಕರು ಈ ಕುರಿತು ಮಾಹಿತಿ ನೀಡಿದರೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಗಂಗಪ್ಪ ಎಂ. ತಿಳಿಸಿದರು.

ಗಜೇಂದ್ರಗಡದ ಎಪಿಎಂಸಿ ಆವರಣದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಹಾಗೂ ಹಾಲಿನ ಪುಡಿ ಪ್ಯಾಕೇಟ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು (ಸಂಗ್ರಹ ಚಿತ್ರ)
ಗಜೇಂದ್ರಗಡದ ಎಪಿಎಂಸಿ ಆವರಣದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಹಾಗೂ ಹಾಲಿನ ಪುಡಿ ಪ್ಯಾಕೇಟ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು (ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT