ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ ಸರ್ಕಾರದಿಂದ ಮಹದಾಯಿಗೆ ಹಿನ್ನೆಡೆ

ಶಾಸಕ ವಿನಯ ಕುಲಕರ್ಣಿ ಆರೋಪ
Published 27 ಏಪ್ರಿಲ್ 2024, 16:12 IST
Last Updated 27 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ನರಗುಂದ: ‘ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರರಾದ್ದು, ರೈತರ ಸಾಲ ಮನ್ನಾ ಮಾಡದೇ ದೇಶದ ಬೃಹತ್ ಉದ್ಯಮಿಗಳ ಸಾಲ ಮನ್ನಾ ಮಾಡಿ ಜನವಿರೋಧಿಯಾಗಿದ್ದಾರೆ. ಪರಿಸರ, ಅರಣ್ಯ ಹಾಗೂ ಹುಲಿ ಸಂರಕ್ಷಣೆಯ ಕುಂಟು ನೆಪ ಹೇಳುತ್ತಾ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಹಿನ್ನೆಡೆ ಉಂಟು ಮಾಡಿದ್ದಾರೆ’ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಆರೋಪಿಸಿದರು.

ಪಟ್ಟಣದ ಮಾರ್ಕಂಡೇಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಧಾರವಾಡ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಪಂಚಮಸಾಲಿ ಸಮಾಜದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.

‘ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಭೂಮಿಯೊಳಗೆ ಪೈಪ್ ಮೂಲಕ ನೀರು ತರಲು ಯೋಜನೆ ರೂಪಿಸಲಾಗಿದೆ. ಅದು ಸಾಧ್ಯವೂ ಇದೆ. ಇದನ್ನು ಅರಿಯದ ಬಿಜೆಪಿ ರೈತರ ಹಿತ ಕಾಯದೇ ರಾಜಕೀಯ ಮಾಡುತ್ತಿದ್ದಾರೆ. ಮಹದಾಯಿ ಬಗ್ಗೆ ಒಂದೂ ಚಕಾರವೆತ್ತದ ಪ್ರಹ್ಲಾದ ಜೋಶಿಯವರ ಸಾಧನೆ ಶೂನ್ಯ. ಇವರು ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಾರೆ ಎಂದು  ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಅವರ ವಿರುದ್ದ ಸರಳತೆಯ ವಿನೋದ ಅಸೂಟಿ ಸ್ಪರ್ಧಿಸಿದ್ದಾರೆ.  ಅವರು ಸಮರ್ಥ ಅಭ್ಯರ್ಥಿಯಾಗಿದ್ದು ಅವರ ಆಯ್ಕೆಗೆ ಎಲ್ಲರೂ ಶ್ರಮಿಸಬೇಕು. ಲಿಂಗಾಯತರು ಬಿಜೆಪಿ ಬೆಂಬಲಿಸಿ ಸಾಕಾಗಿದೆ. ಬಿಜೆಪಿಯಿಂದ ಜನರ ಏಳ್ಗೆ ಅಸಾಧ್ಯ. ಆದ್ದರಿಂದ ಬಾಗಲಕೋಟೆ ಅಭ್ಯರ್ಥಿ ಸಂಯುಕ್ತ ಪಾಟೀಲ್ ಬೆಂಬಲಿಸಿ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಅವರು ಮನವಿ ಮಾಡಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಡಾ.ಸಂಗಮೇಶ ಕೊಳ್ಳಿಯವರ ಮಾತನಾಡಿ, ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ನಿತ್ಯ ನೀರು ಬದಲಾವಣೆ ಮಾಡದಿದ್ದರೆ ಕೊಳೆ, ಹುಳುಗಳಾಗುತ್ತವೆ. ಅದರಂತೆ ಇರುವ ಬಿಜೆಪಿ ಸಂಸದ ಗದ್ದಿಗೌಡರ ಬದಲಾವಣೆ ಮಾಡಲೇಬೇಕು. ಇಲ್ಲವಾದರೆ ನೀರಿಗೆ ಹುಳು ಬೀಳುವಂತೆ ಬಾಗಲಕೋಟೆ ಕ್ಷೇತ್ರ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಆದ್ದರಿಂದ ಗದ್ದಿಗೌಡರನ್ನು ಸೋಲಿಸಿ ಸಂಯುಕ್ತಾ ಪಾಟೀಲ ಅವರನ್ನು ಆಯ್ಕೆ ಮಾಡಬೇಕು’ ಎಂದರು.

ಧಾರವಾಡ. ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮಾತನಾಡಿ, ‘ಅಭಿವೃದ್ಧಿ ತೋರದ, ಸರ್ವಾಧಿಕಾರಿ ಧೋರಣೆಯ ಬಿಜೆಪಿ ತಿರಸ್ಕರಿಸಿ. ನನ್ನನ್ನು ಆಯ್ಕೆ ಮಾಡಿ’ ಎಂದು  ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ‘ಮಹದಾಯಿ, ಕಳಸಾ ಬಂಡೂರಿಗೆ ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೂ ಯೋಜನೆ ಜಾರಿಯಾಗಿಲ್ಲ.ಇದಕ್ಕೆ ಬಿಜೆಪಿನೇ ಕಾರಣ’ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡರಾದ ಬಾಪುಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ಪಾಟೀಲ, ಪ್ರಭಣ್ಣ ಹುಣಸಿಕಟ್ಟಿ, ನೀಲಕಂಠ ಅಸೂಟಿ, ಶಿವಾನಂತ ಮುತ್ತಣ್ಣವರ, ಪ್ರವೀಣ ಯಾವಗಲ್, ಆರ್.ಎಚ್.ಕೋನರಡ್ಡಿ,ಅಪ್ಪಣ್ಣ ನಾಯ್ಕರ ಮಾತನಾಡಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.

ಸದುಗೌಡ ಪಾಟೀಲ, ಎಂ.ಬಿ.ಮೆಣಸಗಿ, ವಿಜಯ ತೋಟರ, ಶಿವಾನಂದ ಸಾತನ್ನವರ, ಜೈನ್, ಗುರುಪಾದಪ್ಪ ಕುರಹಟ್ಟಿ, ಯಲ್ಲಪ್ಪ ಕುರಹಟ್ಟಿ ,ವಿರೇಶ ಚುಳಕಿ ಹಾಗೂ ಕಾಂಗ್ರೆಸ್ ಮುಖಂಡರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT