ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಜಿಲ್ಲೆಯಾದ್ಯಂತ ಬನ್ನಿವಿನಿಮಯ ಸಂಭ್ರಮ

Last Updated 19 ಅಕ್ಟೋಬರ್ 2018, 15:31 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಾದ್ಯಂತ ಶುಕ್ರವಾರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ನವರಾತ್ರಿ ಆರಂಭದಿಂದಲೇ ಪ್ರತಿ ದಿನ ನಸುಕಿನಲ್ಲೇ ಎದ್ದು, ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ ಮಹಿಳೆಯರು, ಶುಕ್ರವಾರ ಬೆಳಿಗ್ಗೆ ಮುತ್ತೈದೆಯರಿಗೆ ಉಡಿ ತುಂಬಿದರು.

ನವರಾತ್ರಿ ಸಮಾರೋಪದ ಬೆನ್ನಲ್ಲೇ, ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿದ್ದ ದೇವಿ ಪುರಾಣ, ಪ್ರವಚನಗಳು ಮಂಗಳಗೊಂಡವು. ಶುಕ್ರವಾರ ಬೆಳಗ್ಗೆಯಿಂದಲೇ ನಗರದ ವಿವಿಧ ದೇವಸ್ಥಾನಗಳಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ನಡೆಯಿತು. ಬನ್ನಿಗಿಡ ಇರುವ ಸ್ಥಳಗಳಲ್ಲಿ ಚಿಕ್ಕ ವೇದಿಕೆ ನಿರ್ಮಿಸಿ, ಬನ್ನಿ ಮುಡಿಯುವ ಕಾರ್ಯಕ್ರಮಗಳು ನಡೆದವು. ನಗರದ ಕೆಲವೆಡೆ ಅನ್ನಸಂತರ್ಪಣೆ ನಡೆಯಿತು.

ತೋಂಟದಾರ್ಯ ಮಠದ ಆವರಣ, ಶಂಕರಲಿಂಗ ದೇವಸ್ಥಾನ, ಬನ್ನಿಮಹಾಂಕಾಳಿ ದೇವಸ್ಥಾನ, ಬೆಟಗೇರಿ ಟರ್ನಲ್ ಪೇಟೆ, ರಂಗಪ್ಪಜ್ಜನಮಠದ ಮುಂಭಾಗ, ನರಸಾಪೂರ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಸಾಮೂಹಿಕವಾಗಿ ಬನ್ನಿ ವಿನಿಮಯ ಕಾರ್ಯಕ್ರಮ ನಡೆಯಿತು. ‘ಬಂಗಾರದಂಗೆ ಜೀವನ ಸಾಗಿಸೋಣ’ಎಂದು ಪರಸ್ಪರ ಹರಸಿದರು. ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಮಂದಿರ ಹಾಗೂ ಅಕ್ಕನ ಬಳಗದಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ನಡೆಯಿತು.ಪಂಚಾಚಾರ್ಯ ಸೇವಾ ಸಂಘದಿಂದ 72ನೇ ವರ್ಷದ ದಸರಾ ಹಾಗೂ ಶಮಿಪೂಜಾ ಕಾರ್ಯಕ್ರಮ ನಡೆಯಿತು. ಒಕ್ಕಲಗೇರಿಯಲ್ಲಿರುವ ರಾಚೋಟೇಶ್ವರ ಗುಡಿಯಿಂದ ಪಲ್ಲಕ್ಕಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಆರಂಭವಾಗಿ ಬಸಪ್ಪ ಅಬ್ಬಿಗೇರಿ ಅವರ ಮಿಲ್‌ನ ಆವರಣಕ್ಕೆ ತಲುಪಿತು.

ಅವಳಿ ನಗರದ ದೇವಸ್ಥಾಗಳಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿಗಳು ಸಂಜೆ ನಗರದ ಭೀಷ್ಮ ಕೆರೆ ಆವರಣದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನ ಬಯಲಿಗೆ ಆಗಮಿಸಿದವು. ಅಲ್ಲಿನ ಬನ್ನಿ ಗಿಡಕ್ಕೆ ವೀರ ನಾರಾಯಣ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸಿದರು. ತೋಂಟದಾರ್ಯ ಮಠದ ಆವರಣದಲ್ಲಿ ಸಿದ್ಧಲಿಂಗ ಸ್ವಾಮೀಜಿ ಅವರು ಭಕ್ತರಿಗೆ ಬನ್ನಿ ನೀಡಿ, ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT