ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಿಶಿರೂರ | ಹೊಸೂರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ

ಮೂಲಸೌಲಭ್ಯಗಳ ಕೊರತೆ : ಚರಂಡಿ ಇಲ್ಲದೆ ರಸ್ತೆ ಮೇಲೆ ಹರಿಯುವ ಕೊಳಚೆ ನೀರು
ಚಂದ್ರಶೇಖರ್ ಭಜಂತ್ರಿ
Published 6 ಡಿಸೆಂಬರ್ 2023, 4:46 IST
Last Updated 6 ಡಿಸೆಂಬರ್ 2023, 4:46 IST
ಅಕ್ಷರ ಗಾತ್ರ

ಯಲಿಶಿರೂರ(ಮುಳಗುಂದ): ಯಲಿಶಿರೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸೂರ ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಗ್ರಾಮಕ್ಕೆ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರತಿ ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಗ್ರಾಮ ಪಂಚಾಯ್ತಿ ಮಾತ್ರ ನಿರ್ಲಕ್ಷ್ಯ ವಹಿಸಿದೆ.

ಗ್ರಾಮವು 2 ವಾರ್ಡ್‌ಗಳನ್ನು ಹೊಂದಿದ್ದು, ಐವರು ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ಗ್ರಾಮದಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿದೆ. ಸರ್ಕಾರಿ ಶಾಲೆಗೆ ಹೋಗುವ ರಸ್ತೆ ಪಕ್ಕ ಕಸದ ರಾಶಿ ಬಿದ್ದಿದ್ದು, ಸ್ವಚ್ಛತೆ ಮಾಯವಾಗಿದೆ.ದುರ್ನಾತದಿಂದ ಜನರು ರೋಸಿಹೋಗಿದ್ದಾರೆ. ಮಕ್ಕಳು ಮೂಗುಮುಚ್ಚಿಕೊಂಡು ದಿನನಿತ್ಯ ಶಾಲೆ ಹೋಗಿಬರಬೇಕಾದ ಬರಿಸ್ಥಿತಿ ಎದುರಾಗಿದೆ.

ಕೊಳಚೆ ನೀರು ಸರಿಯಾಗಿ ಹರಿಯದೆ ರಸ್ತೆಯಲ್ಲಿಯೇ ನಿಂತುಕೊಂಡ ಕಾರಣ ಪಾಚಿಗಟ್ಟಿದೆ. ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಾಗ ಪಾಚಿಮೇಲೆ ಕಾಲಿಟ್ಟು ಜಾರಿಬಿದ್ದ ಉದಾಹರಣೆಗಳೂ ಇವೆ. ಹಲವು ವರ್ಷಗಳ ಹಿಂದೆ ಅಳವಡಿಸಿದ್ದ ಬೀದಿ ಸೋಲಾರ್ ದೀಪಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ.

ದನಕರುಗಳ ಅನುಕೂಲಕ್ಕಾಗಿ ಗ್ರಾಮ ಪಂಚಾಯ್ತಿಯಿಂದ ಈ ಹಿಂದೆ ಕುಡಿಯುವ ನೀರಿನ ಸಂಗ್ರಹ ತೊಟ್ಟಿ ನಿರ್ಮಾಣ ಮಾಡಲಾಗಿತ್ತು. ಆದರೆ, ಇಲ್ಲಿ ನೀರು ತುಂಬಿಸದೆ ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿದೆ. ಅಲ್ಲದೆ, ಸುತ್ತಲೂ ಮುಳ್ಳಿನ ಕಂಟಿಗಳು ಬೆಳೆದುನಿಂತಿವೆ. 

ಗ್ರಾಮದಲ್ಲಿ ಬಹುತೇಕರು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡಿಲ್ಲ. ಹೀಗಾಗಿ ಬಹಿರ್ದೆಸೆಗೆ ರಸ್ತೆ, ಜಮೀನುಗಳನ್ನೇ ಅವಲಂಬಿಸಿದ್ದಾರೆ. ಗ್ರಾಮ ಪಂಚಾಯ್ತಿಯು ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಗ್ರಾಮದಲ್ಲಿ ಈವರೆಗೂ ಸ್ಮಶಾನವಿಲ್ಲ. ಅಂತ್ಯಸಂಸ್ಕಾರಕ್ಕಾಗಿ ಪರದಾಡುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರಾದ ಈರಪ್ಪ ಹರ್ತಿ.

ಹೊಸೂರ ಗ್ರಾಮದಲ್ಲಿ ಚರಂಡಿ ಇಲ್ಲದ್ದಕ್ಕೆ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿರುವುದು
ಹೊಸೂರ ಗ್ರಾಮದಲ್ಲಿ ಚರಂಡಿ ಇಲ್ಲದ್ದಕ್ಕೆ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿರುವುದು
ಹೊಸೂರಿನಲ್ಲಿ ದನಕರುಗಳ ನೀರಿನ ತೊಟ್ಟಿ ನಿರ್ವಹಣೆ ಕೊರತೆಯಿಂದ ಹಾಳಾಗಿರುವುದು
ಹೊಸೂರಿನಲ್ಲಿ ದನಕರುಗಳ ನೀರಿನ ತೊಟ್ಟಿ ನಿರ್ವಹಣೆ ಕೊರತೆಯಿಂದ ಹಾಳಾಗಿರುವುದು

ಗ್ರಾಮದಲ್ಲಿ ಸ್ಮಶಾನ ಭೂಮಿ ಮಂಜೂರಾತಿಗೆ ಚರಂಡಿ ನಿರ್ಮಾಣ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯ್ತಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ

-ಇಮಾಮಸಾಬ ಟೆಕ್ಕೆದ ಗ್ರಾ.ಪಂ ಮಾಜಿ ಸದಸ್ಯ ಹೊಸೂರ

ಚರಂಡಿ ನಿರ್ಮಾಣ ಕಾಮಗಾರಿಗೆ ಅನುದಾನ ಕಡಿಮೆ ಇದ್ದು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು. ಸುಲಭ ಶೌಚಾಲಯ ನಿರ್ಮಾಣಕ್ಕೆ ಜಾಗ ಕೊಟ್ಟರೆ ನಿರ್ಮಾಣ ಮಾಡುತ್ತೇವೆ. ಸಾರ್ವಜನಿಕರು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು

-ಜೋಶ್ನಾ ಪಿಡಿಒ ಯಲಿಶಿರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT