ಬಿಂಕದಕಟ್ಟಿ ಮೃಗಾಲಯದಲ್ಲಿ ನಡುಗಡ್ಡೆ ನಿರ್ಮಾಣ

7
ಪಕ್ಷಿಗಳಿಗೆ ನೈಸರ್ಗಿಕ ಆವಾಸ ಸ್ಥಾನ ಕಲ್ಪಿಸಲು ಯೋಜನೆ; ಎರಡು ಕೆರೆಗಳ ಅಭಿವೃದ್ಧಿ

ಬಿಂಕದಕಟ್ಟಿ ಮೃಗಾಲಯದಲ್ಲಿ ನಡುಗಡ್ಡೆ ನಿರ್ಮಾಣ

Published:
Updated:
ಗದುಗಿನ ಬಿಂಕದಕಟ್ಟಿ ಮೃಗಾಲಯದ ಆವರಣದಲ್ಲಿ ಶುಕ್ರವಾರ ನಡುಗಡ್ಡೆ ನಿರ್ಮಾಣಕ್ಕೆ ರಾಜ್ಯ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ ರವಿ ಚಾಲನೆ ನೀಡಿದರು.ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕ ಗೋಕುಲ್‌ ಎಸ್‌. ಮೃಗಾಲಯದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ಇದ್ದರು.

ಗದಗ: ಇಲ್ಲಿನ ಬಿಂಕದಕಟ್ಟಿ ಮೃಗಾಲಯದ ಆವರಣದಲ್ಲಿ ನಿರ್ಮಾಣಗೊಂಡಿರುವ ಎರಡು ಕೆರೆಗಳನ್ನು ನಡುಗಡ್ಡೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶುಕ್ರವಾರ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ ರವಿ ಚಾಲನೆ ನೀಡಿದರು.

‘ಮಳೆ ನೀರನ್ನು ಇಂಗಿಸಲು ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಎರಡು ಕೆರೆಗಳನ್ನು ನಿರ್ಮಿಸಲಾಗಿದೆ. ಕೆರೆ ನಿರ್ಮಿಸುವಾಗ ಈ ಪ್ರದೇಶದಲ್ಲಿ ಇದ್ದ ಮರಗಳನ್ನು ತೆರವುಗೊಳಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದನ್ನು ನಡುಗಡ್ಡೆ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಪಕ್ಷಿಗಳಿಗೆ ನೈಸರ್ಗಿಕ ಆವಾಸ ಸ್ಥಾನ ಕಲ್ಪಿಸುವ ಯೋಜನೆ ಹೊಂದಿದ್ದೇವೆ’ ಎಂದು ಅವರು ಹೇಳಿದರು.

‘ನಡುಗಡ್ಡೆಯಾಗಿ ಪರಿವರ್ತನೆಯಾದ ನಂತರ, ಇಲ್ಲಿ ಕರಿಹಂಸ, ಬಕ ಸೇರಿದಂತೆ ಜಲಪಕ್ಷಿಗಳನ್ನು ಬಿಡಲಾಗುವುದು. ಮೊಸಳೆ ಆವಾಸ ಕೇಂದ್ರವಾಗಿಯೂ ಅಭಿವೃದ್ಧಿಪಡಿಸುವ ಯೋಜನೆ ಇದೆ. ಮಳೆಗಾಲದಲ್ಲಿ ಈ ಕೆರೆಗಳು ಭರ್ತಿಯಾದರೆ, ಅಂತರ್ಜಲ ಮಟ್ಟ ಹೆಚ್ಚಲಿದ್ದು,ಮೃಗಾಲಯದ ಆವರಣದಲ್ಲಿರುವ 5 ಕೊಳೆಬಾವಿಗಳಲ್ಲಿ ಸದಾ ನೀರು ಲಭಿಸಲಿದೆ’ ಎಂದರು.

‘ಈ ನಡುಗಡ್ಡೆಯ ಸುತ್ತ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಬೇಸಿಗೆಯಲ್ಲಿ ನೀರು, ನೆರಳು ಅರಸಿ ಬರುವ ಪಕ್ಷಿಗಳನ್ನು ಇಲ್ಲಿಗೆ ಆಕರ್ಷಿಸಬಹುದು.ಈಗಾಗಲೇ ಮೃಗಾಲಯದ ಆವರಣವನ್ನು ಪ್ಲಾಸ್ಟಿಕ್‌ ರಕ್ಷಿತ ವಲಯ ಎಂದು ಘೋಷಿಸಲಾಗಿದ್ದು ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಮೃಗಾಲಯದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ತಿಳಿಸಿದರು. 

ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕ ಗೋಕುಲ್‌ ಎಸ್‌. ಇದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !