ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಲೂಟಿ ಮಾಡುತ್ತಿರುವ ರಾಜ್ಯ ಸರ್ಕಾರ: ಶಾಸಕ ಸಿ.ಸಿ.ಪಾಟೀಲ

ಬಿಜೆಪಿಯಿಂದ ಪ್ರತಿಭಟನೆ : ತೈಲ ದರ ಹೆಚ್ಚಳಕ್ಕೆ ಆಕ್ರೋಶ
Published 24 ಜೂನ್ 2024, 15:33 IST
Last Updated 24 ಜೂನ್ 2024, 15:33 IST
ಅಕ್ಷರ ಗಾತ್ರ

ನರಗುಂದ: ಪಂಚ ಗ್ಯಾರಂಟಿಗಳ ನೆಪದಲ್ಲಿ ರಾಜ್ಯದ ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಲು ಹೊರಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕೇಂದ್ರ ಹೈಕಮಾಂಡ್‌ ಅನತಿಯಂತೆ ಆಡಳಿತ ನಡೆಸುತ್ತಾ ತೈಲ ಬೆಲೆ ಹೆಚ್ಚಳ ಮಾಡಿ, ಎಲ್ಲ ದರಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದಾರೆ. ತೈಲ ದರ ಕೂಡಲೇ ಇಳಿಸಬೇಕು ಎಂದು ಶಾಸಕ ಸಿ.ಸಿ.ಪಾಟೀಲ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ತೈಲ ಬೆಲೆ, ಇತರೇ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪುರಸಭೆ ಆವರಣದಿಂದ ಎತ್ತಿನ ಗಾಡಿ ಹಾಗೂ ಇಂಧನವಿಲ್ಲದ ಕಾರನ್ನು ತಳ್ಳುತ್ತಾ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಶಿವಾಜಿ ವೃತ್ತದ ಬಳಿ ಮಾತನಾಡಿದರು.

ವಾಲ್ಮೀಕಿ ನಿಗಮ ಮಂಡಳಿಯಲ್ಲಿ ₹ 187 ಕೋಟಿ ಹಣ ಲಪಟಾಯಿಸಿ ತೆಲಂಗಾಣ ರಾಜ್ಯದ ಚುನಾವಣೆಗೆ ಬಳಸಿಕೊಂಡಿದೆ. ಇಲಾಖೆ ಭ್ರಷ್ಟಾಚಾರಕ್ಕೆ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಸಿಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿರಿಸಿದ್ದ ₹11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ನೆಪದಲ್ಲಿ ಕಾಂಗ್ರೆಸ್ ಪಕ್ಷ ಲೂಟಿ ಮಾಡುತ್ತಿದೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಸಿಗುತ್ತಿಲ್ಲ. ಬಿತ್ತನೆ ಬೀಜದ ಸಹಾಯಧನ ಬಂದಾಗಿದೆ. ಪಂಚಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಒಟ್ಟಾರೆ ರಾಜ್ಯದ ಖಜಾನೆ ಹಣ ಎಲ್ಲಿ ಹೋಗುತ್ತಿದೆ ಎಂಬುದನ್ನು ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಭೂಮಿಪೂಜೆ, ಶಂಕುಸ್ಥಾಪನೆ ಮಾಯವಾಗಿವೆ. ಕಾಂಗ್ರೆಸ್ ಶಾಸಕರುಗಳು ಅನುದಾನವಿಲ್ಲದೇ ಸಪ್ಪೆ ಆಗಿದ್ದಾರೆ. ಬಿಜೆಪಿ ಮೇಲೆ ಮಾಡಿದ ಶೇ 40 ಭ್ರಷ್ಟಾಚಾರ ಆರೋಪ ಸಾಬೀತು ಮಾಡದೇ ತಾವೇ ಈವಾಗ ಶೇ 70 ಭ್ರಷ್ಟಾಚಾರಕ್ಕೆ ಇಳಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಾರೆ ಎಂಬ ನಂಬಿಗೆಯಿತ್ತು. ಆದರೆ ಅವರ ಹೈಕಮಾಂಡ್ ಒತ್ತಾಯದ ಮೇರೆಗೆ ರಾಜ್ಯದ ಕಾಂಗ್ರೆಸ್ ಆಡಳಿತ ದಾರಿ ತಪ್ಪುತ್ತಿದೆ. ಅಧಿವೇಶನದಲ್ಲಿ ಸರ್ಕಾರವನ್ನು ನಾನು ವೈಟ್ ಪೇಪರ್‌ ಮೇಲೆ ಮಾಹಿತಿ ಕೇಳುತ್ತೇನೆ ಎಂದರು.

ರಾಜ್ಯದ ಖಜಾನೆಯಿಂದ ಕೆ.ಎಸ್.ಆರ್.ಟಿ.ಸಿ ಗೆ ಹಣ ಪಾವತಿಸಿಲ್ಲ. ಹಾಲು ಉತ್ಪಾದಕರ ಪ್ರೋತ್ಸಾಹ ಧನ 7 ತಿಂಗಳಿಂದ ಪಾವತಿಯಾಗಿಲ್ಲ. ವಿವಿಧ ಇಲಾಖೆಗಳ ಆಡಳಿತ ವೈಖರಿ ಕುಸಿದು ಭೃಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ ಎಂದು ಸಿ.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಮಠ-ಮಾನ್ಯಗಳಿಗೆ ಕೊಟ್ಟ ಅನುದಾನವನ್ನು ಈಗಿನ ರಾಜ್ಯ ಸರ್ಕಾರ ಬಂದ್ ಮಾಡಿದೆ. ಅರ್ಚಕರಿಗೆ ನೀಡುತ್ತಿದ್ದ ಗೌರವ ಧನವನ್ನು ಸ್ಥಗಿತಗೊಳಿಸಿದೆ. ಹಣಕ್ಕಾಗಿ ಸರ್ಕಾರಿ ಆಸ್ತಿ ಮಾರಾಟಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇಲಾಖಾವಾರು ಕಂದಾಯ ಹೆಚ್ಚಳ ಮಾಡಲು ಕ್ರಮಗಳನ್ನು ಸೂಚಿಸಲು ಬೂಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಎನ್ನುವ ಖಾಸಗಿ ಕಂಪನಿಗೆ ಜವಾಬ್ದಾರಿ ಕೊಟ್ಟಿದೆ ಎಂದು ಸಿ.ಸಿ.ಪಾಟೀಲ ಗಂಭೀರ ಆರೋಪ ಮಾಡಿದರು.

ಹೊಳೆಆಲೂರ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಚಂದ್ರು ದಂಡಿನ ಹಾಗೂ ವಾಸು ಜೋಗಣ್ಣವರ ಮಾತನಾಡಿದರು.

ನರಗುಂದ ಬಿಜೆಪಿ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ, ಶಿವಾನಂದ ಮುತವಾಡ, ಉಮೇಶಗೌಡ ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ಬಾಪುಗೌಡ ತಿಮ್ಮನಗೌಡ್ರ, ನೇತಾಜಿಗೌಡ ಕೆಂಪನಗೌಡ್ರ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರು ಪವಾರ, ಕೊಟ್ರೇಶ ಕೊಟ್ರಶೆಟ್ಟರ, ಶಂಕ್ರಗೌಡ ಯಲ್ಲಪ್ಪಗೌಡ್ರ, ಆರ್.ವಿ.ಮುಲ್ಕಿ ಪಾಟೀಲ, ಮಲ್ಲಪ್ಪ ಮೇಟಿ, ಮಂಜು ಮೆಣಸಗಿ, ವಿಠ್ಠಲ ಹವಾಲ್ದಾರ, ಸಿದ್ದೇಶ ಹೂಗಾರ, ಸುರೇಶ ಹುಡೇದಮನಿ, ಈರಪ್ಪ ಮ್ಯಾಗೇರಿ, ಬಿಜೆಪಿ ಪುರಸಭೆ ಸದಸ್ಯರು, ಕಾರ್ಯಕರ್ತರು ಇದ್ದರು.

ನರಗುಂದ ದಲ್ಲಿ ತೈಲ ಬೆಲೆ ಇತರೇ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನರಗುಂದ ದಲ್ಲಿ ತೈಲ ಬೆಲೆ ಇತರೇ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಂದ್ರ ಸರ್ಕಾರವು ಬರ ಪರಿಹಾರ ಕೊಟ್ಟರೂ ರಾಜ್ಯದ ಸಾವಿರಾರು ರೈತರ ಖಾತೆಗಳಿಗೆ ಪೂರ್ಣಪ್ರಮಾಣದ ಹಣ ಜಮೆ ಆಗಿಲ್ಲ. ಇದೆಲ್ಲಾ ನೋಡಿದಾಗ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ
ಸಿ.ಸಿ.ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT