ಸೋಮವಾರ, ಜೂನ್ 14, 2021
20 °C
ಸಾರ್ವಜನಿಕರ ಸೇವೆಗೆ ನಿಲ್ದಾಣ ಶೀಘ್ರ ಲಭ್ಯ

ಗದಗ: ಸುಸಜ್ಜಿತ ಬಸ್‌ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಸುಸಜ್ಜಿತವಾಗಿ ನವೀಕರಣಗೊಂಡಿರುವ ನಗರದ ಹಳೆ ಬಸ್‌ ನಿಲ್ದಾಣಕ್ಕೆ ‘ಪಂಡಿತ್‌ ಪುಟ್ಟರಾಜ ಗವಾಯಿಗಳ’ ಹೆಸರನ್ನು ಇಡಲು ಸರ್ಕಾರ ಆದೇಶ ನೀಡಿರುವುದು ಹೋರಾಟಗಾರರು ಹಾಗೂ ಭಕ್ತರಲ್ಲಿ ಹರ್ಷ ಮೂಡಿಸಿದೆ. ಅಂತೆಯೇ, ಬಸ್‌ ನಿಲ್ದಾಣ ಬೇಗ ಉದ್ಘಾಟನೆಗೊಂಡರೆ ಹೆಚ್ಚಿನ ಅನುಕೂಲ ಆಗಲಿದೆ ಎಂಬುದು ಸಾರ್ವಜನಿಕರು, ವ್ಯಾಪಾರಿಗಳ ಖುಷಿಗೆ ಕಾರಣವಾಗಿದೆ.

ನವೀಕರಣಗೊಂಡು ತುಂಬ ದಿನಗಳು ಕಳೆದಿದ್ದರೂ ಹಳೆ ಬಸ್‌ ನಿಲ್ದಾಣಕ್ಕೆ ಈವರೆಗೆ ಉದ್ಘಾಟನಾ ಭಾಗ್ಯ ಕೂಡಿ ಬಂದಿರಲಿಲ್ಲ. ಈಗ ಸರ್ಕಾರ ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಲು ಅನುಮೋದನೆ ನೀಡಿರುವುದರಿಂದ ಬಸ್‌ ನಿಲ್ದಾಣ ಶೀಘ್ರವೇ ಉದ್ಘಾಟನೆಗೊಳ್ಳಲಿದೆ ಎಂದು ಸಾರ್ವಜನಿಕರು ಆಶಾಭಾವ ವ್ಯಕ್ತಪಡಿಸಿದ್ದಾರೆ.

‘ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಅಧಿಕೃತ ಆದೇಶ ಪತ್ರ ಕೈಸೇರಿದ ತಕ್ಷಣವೇ ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಹಳೆ ಬಸ್‌ ನಿಲ್ದಾಣ ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ’ ಎಂದು ಕೆಎಸ್‌ಆರ್‌ಟಿಸಿ ಡಿಸಿ ಹಿರೇಮಠ ತಿಳಿಸಿದ್ದಾರೆ.

‘ಬಸ್‌ ನಿಲ್ದಾಣ ನವೀಕರಣಗೊಂಡು ಸಾಕಷ್ಟು ಸಮಯ ಕಳೆದಿದ್ದರೂ ರಾಜಕೀಯ ಕಾರಣಗಳಿಂದಾಗಿ ಸಾರ್ವಜನಿಕರ ಸೇವೆಗೆ ಲಭ್ಯ ಆಗಿರಲಿಲ್ಲ. ಬಸ್‌ ನಿಲ್ದಾಣಕ್ಕೆ ಯಾರ ಹೆಸರು ಇಡಬೇಕು ಎಂಬ ವಿಚಾರವಾಗಿ ಸಚಿವರು ಮತ್ತು ಶಾಸಕರ ನಡುವೆ ಉಂಟಾದ ಚರ್ಚೆಯೇ ಉದ್ಘಾಟನೆ ತಡವಾಗಲು ಕಾರಣವಾಗಿತ್ತು. ಸರ್ಕಾರ ಈಗ ಅಧಿಕೃತವಾಗಿ ಪಂಡಿತ್‌ ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಲು ಅನುಮೋದನೆ ನೀಡಿದೆ. ನಮ್ಮ ಮೂರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ’ ಎಂದು ಕ್ರಾಂತಿಸೇನಾ ಸಂಘಟನೆಯ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಹೇಳಿದರು.

‘ಬಸ್‌ ನಿಲ್ದಾಣದ ಉದ್ಘಾಟನೆಗೆ ಇದ್ದ ಅಡೆತಡೆಗಳು ಈಗ ದೂರಾಗಿದ್ದು, ಆದಷ್ಟು ಬೇಗ ನಾಮಫಲಕ ಅಳವಡಿಸಿ ಬಸ್‌ ನಿಲ್ದಾಣವನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು. ಈ ವಿಚಾರವಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಒತ್ತಾಯಿಸಲಾಗಿದೆ. ನಗರದ ಹೃದಯಭಾಗದಲ್ಲಿರುವ ಈ ಬಸ್‌ ನಿಲ್ದಾಣದಲ್ಲಿ ಚಟುವಟಿಕೆಗಳು ಆರಂಭಗೊಂಡರೆ ಸ್ಥಳೀಯ ವ್ಯಾಪಾರಿಗಳು, ಆಟೊ ಚಾಲಕರು, ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರಿಗೆ ತುಂಬ ಅನುಕೂಲ ಆಗಲಿದೆ’ ಎಂದು ಅವರು ಹೇಳಿದರು.

ಎಚ್‌.ಕೆ.ಪಾಟೀಲರು ಮಂತ್ರಿಯಾಗಿದ್ದಾಗ ಭೂಮಿಪೂಜೆ

2018ರಲ್ಲಿ ನವೀಕರಣಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿದ್ದ ಗದಗ ಶಾಸಕ ಎಚ್.ಕೆ.ಪಾಟೀಲ ಭೂಮಿಪೂಜೆ ನೆರವೇರಿಸಿದ್ದರು.

ಆಮೆಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿ ಪೂರ್ಣಗೊಂಡು ಕೆಲ ತಿಂಗಳು ಕಳೆದಿದ್ದರೂ ಬಸ್ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರಿಡುವಂತೆ ಹಲವು ಸಂಘಟನೆಗಳು ಹೋರಾಟ, ಮನವಿ, ಉಪವಾಸ ಸತ್ಯಾಗ್ರಹ ಮಾಡಿದ್ದವು. ಇದಾದ ಬಳಿಕ ಬಸ್ ನಿಲ್ದಾಣ ಲೋಕಾರ್ಪಣೆಗೆ ಸಿದ್ಧತೆ ಕೂಡ ಮಾಡಲಾಗಿತ್ತು. ಆದರೆ, ಈ ವೇಳೆ ಹೋರಾಟಗಾರರು ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡದೇ ಉದ್ಘಾಟನೆಗೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದ ಪರಿಣಾಮ ಆ ಕಾರ್ಯಕ್ರಮ ರದ್ದಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು