ಶನಿವಾರ, ಜುಲೈ 24, 2021
20 °C

ಕನಸು ಕಂಡರೆ ಪಿಎಂ, ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನದ ಕನಸು ಕಾಣಬೇಕು: ಸಿಸಿ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಗದಗ: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಕುರ್ಚಿಯ ಕನಸು ಕಾಣುತ್ತಿದ್ದಾರೆ. ಬೆಳಗಿನ ಜಾವದ ಕನಸು ಒಳ್ಳೆಯದು. ಹಗಲುಗನಸು ಅಪಾಯಕಾರಿ’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಛೇಡಿಸಿದರು.

ಗುರುವಾರ ಗದುಗಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಕನಸು ಕಾಣುವುದಿದ್ದರೆ ದೊಡ್ಡ ಕನಸು ಕಾಣಬೇಕು. ಪ್ರಧಾನಮಂತ್ರಿ ಅಥವಾ ವಿಶ್ವ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಕನಸು ಕಾಣಬೇಕು. ಅದು ಬಿಟ್ಟು, ಸಣ್ಣ ರಾಜ್ಯ ಒಂದರ ಸಿಎಂ ಕುರ್ಚಿಗಾಗಿ ಹಗಲುಗನಸು ಕಾಣುವುದು ಯಾಕೆ’ ಎಂದು ಕಾಂಗ್ರೆಸ್‌ ಮುಖಂಡರಿಗೆ ಟಾಂಗ್‌ ನೀಡಿದರು.

‘‘ಲಿಂಗೈಕ್ಯ ತೋಂಟದ ಶ್ರೀಗಳು ಹಿಂದೆ ಕಥೆಯೊಂದನ್ನ ಹೇಳುತ್ತಿದ್ದರು. ಮಠದ ಎದುರಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಏನೋ ತಿಂದಹಾಗೆ ನಟಿಸುತ್ತಿದ್ದನಂತೆ. ಅವನನ್ನು ನೋಡಿ ಶ್ರೀಗಳು ಏನು ತಿನ್ನುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ವ್ಯಕ್ತಿ, ‘ಎದುರಿನ ಅಂಗಡಿಯಲ್ಲಿ ಕರಿಯುತ್ತಿರುವ ಮಿರ್ಚಿಯನ್ನು ಸವಿಯುತ್ತಿದ್ದೇನೆ’ ಅಂದನಂತೆ. ಅದಕ್ಕೆ ಶ್ರೀಗಳು, ‘ತಿಂದಹಾಗೆ ಮಾಡುವುದಾದರೆ, ಧಾರವಾಡ ಪೇಡಾ ತಿನ್ನು, ಗೋಕಾಕ್ ಕರದಂಟು ತಿನ್ನು’ ಎಂದು ಹೇಳಿದರಂತೆ. ಅದರಂತೆ ಕನಸು ಕಾಣುವುದಿದ್ದರೆ ಕಾಂಗ್ರೆಸ್‌ನವರು ದೊಡ್ಡ ಹುದ್ದೆಯ ಕನಸು ಕಾಣಬೇಕು’ ಎಂದು ನಗೆ ಚಟಾಕಿ ಹಾರಿಸಿದರು.

‘ನಮ್ಮ ಅಧಿಕಾರದ ಅವಧಿ ಇನ್ನೂ ಎರಡು ವರ್ಷ ಇದೆ. ನಂತರ ಚುನಾವಣೆ ನಡೆದು ಕಾಂಗ್ರೆಸ್‌ಗೆ ಬಹುಮತ ಬರಬೇಕು. ಅದಕ್ಕೂ ಮುನ್ನವೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಮುಂದಿನ ಸಿಎಂ ಕ್ಯಾಂಪೇನ್‌ ಬಗ್ಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ’ ಎಂದು ಲೇವಡಿ ಮಾಡಿದರು.

‘ನಮ್ಮ ಪಕ್ಷದಲ್ಲಿ ಶಾಸಕರು ಮುಖ್ಯಮಂತ್ರಿಯನ್ನು ಆರಿಸುತ್ತೇವೆ. ಆದರೆ, ಕಾಂಗ್ರೆಸ್‌ನಲ್ಲಿ ದೆಹಲಿಯಿಂದ ಚೀಟಿ ಬರುತ್ತೆ. ಆ ಚೀಟಿಯಲ್ಲಿ ಯಾರ ಹೆಸರು ಇರುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇವರಿಬ್ಬರ ಹೆಸರು ಹೊರತು ಪಡಿಸಿ ಬೇರೆಯವರ ಹೆಸರಿದ್ದರೆ ಆಗ ಏನು ಮಾಡುತ್ತಾರೆ’ ಎಂದು ಪ್ರಶ್ನಿಸಿದರು.

ಪಂಚಮಸಾಲಿ ಸ್ವಾಮಿಗಳ ಪರ್ಯಾಯ ಒಕ್ಕೂಟ ರಚನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಿ.ಸಿ.ಪಾಟೀಲ, ‘ಸ್ವಾಮೀಜಿಗಳ ಬಗ್ಗೆ ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ. ಆದರೆ, ಖಾವಿಧಾರಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅದು ಬಿಟ್ಟು ಗುಂಪುಗಾರಿಕೆ ಮಾಡಬಾರದು. ಈ ಬಗ್ಗೆ ಅವರೇ ಯೋಚಿಸಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು