ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನವೂ ಸಿಗದು: ಬಸವರಾಜ ಬೊಮ್ಮಾಯಿ

Last Updated 15 ಏಪ್ರಿಲ್ 2022, 14:04 IST
ಅಕ್ಷರ ಗಾತ್ರ

ಗದಗ: ‘ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ, ಲೂಟಿ ನಡೆದಿದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿವೇಕಾನಂದ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಕಾಂಗ್ರೆಸ್‌ ತನ್ನ ಸುದೀರ್ಘ ಆಡಳಿತದ ಅವಧಿಯಲ್ಲಿ ದೇಶ ಆರ್ಥಿಕವಾಗಿ ಹಿಂದುಳಿಯುವಂತೆ ಮಾಡಿತು. ಅಲ್ಲದೇ ಸಾಮಾಜಿಕವಾಗಿ ಒಡೆದು ಆಳುವುದು, ತುಷ್ಟೀಕರಣ ನೀತಿ ಪ್ರಾರಂಭಿಸಿತು. ಭ್ರಷ್ಟಾಚಾರ ಪರಂಪರೆಯನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್‌’ ಎಂದು ಆರೋಪ ಮಾಡಿದರು.

‘ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ ನಾಯಕರು ಇಂದು ಹತಾಶರಾಗಿ ಬಿಜೆಪಿ ಮತ್ತು ನಮ್ಮ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಶುಭ್ರರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾನು ಗಮನಿಸಿದಂತೆ ರಾಜ್ಯದ ವಿರೋಧ ಪಕ್ಷದಲ್ಲಿ ಇಂದು ತೊಳಲಾಟ ಪ್ರಾರಂಭವಾಗಿದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್‌ನವರು ನಾಟಕ ಪ್ರಾರಂಭ ಮಾಡಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಹತ್ತಾರು ಹಗರಣಗಳನ್ನು ಮಾಡಿತು. ಜತೆಗೆ ಭ್ರಷ್ಟಾಚಾರವನ್ನು ಎಲ್ಲ ರಂಗಕ್ಕೂ ಹಬ್ಬಿಸಿತು. ಈ ಕಾರಣಕ್ಕಾಗಿಯೇ ಜನರು ಅವರನ್ನು ಇಂದು ಮನೆಗೆ ಕಳಿಸಿದ್ದಾರೆ. ಕಾಂಗ್ರೆಸ್‌ ನಾಯಕರು ನಾವು ಆ ಭಾಗ್ಯ, ಈ ಭಾಗ್ಯ ಕೊಟ್ಟೆವು ಎಂದರು. ಆದರೆ, ಅವೆಲ್ಲವೂ ಭಾಷಣದ ಭಾಗ್ಯಗಳಾಗಿ; ರಾಜ್ಯದ ದೌರ್ಭಾಗ್ಯ ಆಯಿತು. ಅವರ ಯಾವ ಯೋಜನೆಗಳೂ ಜನರಿಗೆ ಮುಟ್ಟಲಿಲ್ಲ. ಬದಲಾಗಿ, ನಾಯಕರ ಮನೆಗಳಿಗೆ ಹಣ ತಲುಪಿತು’ ಎಂದು ಆರೋಪ ಮಾಡಿದರು.

‘ಕಾಂಗ್ರೆಸ್‌ ನಾಯಕರು ಈಗಲಾದರೂ ಬುದ್ಧಿ ಕಲಿಯಬೇಕು. ಒಂದೊಮ್ಮೆ ಈಗ ವಿರೋಧ ಪಕ್ಷವಾಗಿ ವಿಫಲವಾದರೆ, ಮುಂದೆ ಜನ ಅವರಿಗೆ ಆ ಸ್ಥಾನವನ್ನೂ ಕೊಡುವುದಿಲ್ಲ. ಲೋಕಸಭೆಯಲ್ಲಿ ಆದಂತೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದೆ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT