ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ: ಮಕ್ಕಳ ರಂಜಿಸುವ ಸರ್ಕಸ್‌ ಕಲಾವಿದರು

ಗದುಗಿನ ಮೈದಾನದಲ್ಲಿ ರ‍್ಯಾಂಬೋ ಸರ್ಕಸ್‌; ಮೈನವಿರೇಳಿಸುವ ಸಾಹಸ ಪ್ರದರ್ಶನಗಳು
Published 9 ಜೂನ್ 2024, 5:41 IST
Last Updated 9 ಜೂನ್ 2024, 5:41 IST
ಅಕ್ಷರ ಗಾತ್ರ

ಗದಗ: ಗಾಳಿಯಲ್ಲಿ ಹಾರಾಡುತ್ತಲೇ ಅದ್ಭುತ ಸಾಹಸಗಳನ್ನು ಪ್ರದರ್ಶಿಸುವ ಸರ್ಕಸ್‌ ಕಲಾವಿದರು ನೋಡಗರ ಉಸಿರು ಬಿಗಿಹಿಡಿಯುವಂತೆ ಮಾಡುತ್ತಾರೆ. ಮಧ್ಯೆ ಮಧ್ಯೆ ಬರುವ ಚಾರ್ಲಿ, ಮಕ್ಕಳ ಮನಸ್ಸಿಗೆ ಕಚಗುಳಿ ಇಡುತ್ತಾನೆ. ಕಿಲಾಡಿ ಕುಳ್ಳರು ಮಾಡುವ ಕಿತಾಪತಿಗಳು ದೊಡ್ಡವರನ್ನೂ ನಗಿಸುತ್ತವೆ. ಗೋಲಾಕಾರದ ಕಬ್ಬಿಣದ ರಿಂಗ್‌ನೊಳಗೆ ಬೈಕ್‌ ಓಡಿಸುವ ಹೈದರಾಬಾದಿ ಯುವಕರ ಸಾಹಸ ಪ್ರದರ್ಶನ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ.

ನಗರದ ಆಂಗ್ಲೋ ಉರ್ದು ಶಾಲಾ ಮೈದಾನದಲ್ಲಿ ಬೀಡುಬಿಟ್ಟಿರುವ ರ‍್ಯಾಂಬೋ ಸರ್ಕಸ್‌ನಲ್ಲಿ ಇಂತಹ ಹಲವಾರು ಮೈನವಿರೇಳಿಸುವ ಪ್ರದರ್ಶನಗಳು ಎಲ್ಲ ವಯೋಮಾನದವರನ್ನೂ ರಂಜಿಸುತ್ತವೆ.

‘ರ‍್ಯಾಂಬೋ ಸರ್ಕಸ್‌ ಹಲವಾರು ವರ್ಷಗಳಿಂದ ಜನರನ್ನು ರಂಜಿಸುತ್ತ ಬಂದಿದೆ. ಆದರೆ, ರಿಂಗ್‌ನೊಳಗೆ ಅದ್ಭುತ ಸ್ಟಂಟ್‌ಗಳನ್ನು ಪ್ರದರ್ಶಿಸುವ ಕಲಾವಿದರ ತೆರೆಯ ಹಿಂದಿನ ಬದುಕು ಅಷ್ಟು ರಂಜನೀಯವಾಗಿಲ್ಲ. ಅಪಾಯದ ತೂಗುಕತ್ತಿಯಲ್ಲೇ ಸಾಹಸ ಪ್ರದರ್ಶನ ಮಾಡುತ್ತಾರೆ. ಸರ್ಕಸ್‌ ಕಲಾವಿದರಿಗೆ ಸರ್ಕಸ್‌ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಹಾಗಾಗಿ, ಅವರೆಲ್ಲರೂ ರಂಜಿಸುವ ಕೆಲಸವನ್ನು ನಿರಂತರ ಮಾಡಿಕೊಂಡು ಬಂದಿದ್ದಾರೆ’ ಎನ್ನುತ್ತಾರೆ ಕಂಪನಿಯ ವ್ಯವಸ್ಥಾಪಕ ರಾಜು.

ರ‍್ಯಾಂಬೋ ಸರ್ಕಸ್‌ನಲ್ಲಿ ನೇಪಾಳ, ಇಥಿಯೋಪಿಯಾ, ಅಸ್ಸಾಂ, ಮಹಾರಾಷ್ಟ್ರ, ಹೈದರಾಬಾದ್‌ ಸೇರಿದಂತೆ ವಿವಿಧ ರಾಜ್ಯಗಳ 65 ಮಂದಿ ಕಲಾವಿದರು ಇದ್ದಾರೆ. ಹ್ಯೂಮನ್‌ ಸ್ಲಿಂಕಿ, ವೀಲ್‌ ಆಫ್‌ ಡೆತ್‌, ಆ್ಯಕ್ರೋಬ್ಯಾಟಿಕ್ಸ್‌ ಜತೆಗೆ ಅಸ್ಸಾಮಿ ಹುಡುಗಿಯರಿಬ್ಬರು ನೀಡುವ ಏರಿಯಲ್‌ ಸಾಹಸಗಳು ಮೈನವಿರೇಳಿಸುವ ಪ್ರದರ್ಶನಗಳಾಗಿವೆ.

ಸಮಯಪ್ರಜ್ಞೆ, ಕಲಾವಿದರ ನಡುವಿನ ಹೊಂದಾಣಿಕೆ ಸ್ವಲ್ಪ ಆಚೀಚೆ ಆದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ಹಲವು ವರ್ಷಗಳಿಂದ ಅದೇ ವೃತ್ತಿಯಲ್ಲಿ ಪಳಗಿರುವ ಕಲಾವಿದರು ತಮ್ಮ ಅದ್ಭುತ ಸ್ಟಂಟ್‌ಗಳ ಮೂಲಕ ಪ್ರೇಕ್ಷ ಕರ ಎದೆಗಿಳಿ ಯುತ್ತಾರೆ. ಇದೇ ಕಾರಣಕ್ಕೆ ಶೋ ಮುಗಿದ ನಂತರವೂ ಅವರ ಸರ್ಕಸ್‌ ಪ್ರದರ್ಶನ ಗಳು ಪ್ರೇಕ್ಷಕರ ಮನದ ಒಳಗೆ ತಿರುಗುತ್ತಿರುತ್ತವೆ!

‘ಪ್ರೇಕ್ಷಕರು ಮಳೆಗಾಲ ಅಂತ ಭಯಪಡುವ ಅವಶ್ಯಕತೆ ಇಲ್ಲ. ನೀರು ಸೋರಿಕೆರಹಿತ ಟೆಂಟ್‌ ಅಳವಡಿಸಲಾಗಿದ್ದು, ಮಳೆಯ ಭಯವಿಲ್ಲದೇ ಶೋ ವೀಕ್ಷಣೆ ಮಾಡಬಹುದು. ಸರ್ಕಸ್‌ ಕಲಾವಿದರನ್ನು ಪ್ರೋತ್ಸಾಹಿಸಲು ಹಾಗೂ ಈ ಪರಂಪರೆಯನ್ನು ಉಳಿಸುವ ಸಲುವಾಗಿಯಾದರೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸರ್ಕಸ್‌ ವೀಕ್ಷಣೆ ಮಾಡಬೇಕು’ ಎಂದು ಮನವಿ ಮಾಡುತ್ತಾರೆ ವ್ಯವಸ್ಥಾಪಕ ರಾಜು.

ಸಮಯ, ಟಿಕೆಟ್‌ ದರ

ರ‍್ಯಾಂಬೋ ಸರ್ಕಸ್‌ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 4.30 ಮತ್ತು 7.30 ಎರಡು ಶೋ ಇರುತ್ತದೆ. ವಾರಾಂತ್ಯದಲ್ಲಿ ಮೂರು ಶೋಗಳಿದ್ದು ಮಧ್ಯಾಹ್ನ 1.30, ಸಂಜೆ 4.30 ಮತ್ತು 7.30ಕ್ಕೆ ಶೋಗಳಿರುತ್ತವೆ. ಪ್ರತಿ ಶೋ ಒಂದು ಗಂಟೆ ನವಲತ್ತೈದು ನಿಮಿಷಗಳ ಅವಧಿಯದ್ದಾಗಿದೆ.

ಟಿಕೆಟ್‌ ದರ: ₹150, ₹250, ₹350, 500.

ಮುಂಗಡ ಬುಕ್ಕಿಂಗ್‌ಗಾಗಿ: www.rambocircus.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT