ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಲಾಕ್‌ಡೌನ್‌ನಿಂದ ಮೃಗಾಲಯಕ್ಕೆ ₹10 ಲಕ್ಷ ಆದಾಯ ನಷ್ಟ

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಮತ್ತೆ ಪ್ರವಾಸಿಗರಿಗೆ ಮುಕ್ತ
Last Updated 9 ಜೂನ್ 2020, 19:30 IST
ಅಕ್ಷರ ಗಾತ್ರ

ಗದಗ: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 84 ದಿನಗಳ ಕಾಲ (ಮಾರ್ಚ್‌ 15ರಿಂದ ಜೂನ್‌ 07) ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಬಿಂಕದಕಟ್ಟಿ ಮೃಗಾಲಯವನ್ನು ಮುಚ್ಚಿದ್ದರಿಂದ ಅಂದಾಜು ₹8 ರಿಂದ ₹10ಲಕ್ಷ ಆದಾಯ ನಷ್ಟವಾಗಿದೆ.

ಮೃಗಾಲಯಕ್ಕೆ ಪ್ರತಿ ದಿನ ಸರಾಸರಿ 300ರಿಂದ 350 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 400ರಿಂದ 500ರವರೆಗೂ ಇರುತ್ತಿತ್ತು. ಪ್ರತಿ ತಿಂಗಳು, ಪ್ರವಾಸಿಗರ ಪ್ರವೇಶ ಶುಲ್ಕದ ಮೂಲಕವೇ ಮೃಗಾಲಯಕ್ಕೆ ಸರಾಸರಿ ₹3 ಲಕ್ಷದಷ್ಟು ಆದಾಯ ಬರುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿಂದ ಈ ವರಮಾನ ನಷ್ಟವಾಗಿತ್ತು.

ಜೂ.8ರಿಂದ ಮತ್ತೆ ಮೃಗಾಲಯದ ಬಾಗಿಲನ್ನು ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಮೊದಲ ದಿನವೇ 56 ಪ್ರವಾಸಿಗರು ಭೇಟಿ ನೀಡಿದ್ದಾರೆ. ‘ಲಾಕ್‌ಡೌನ್‌ ಬೆನ್ನಲ್ಲೇ ರಾಜ್ಯದ 9 ಮೃಗಾಲಯಗಳನ್ನು ಮುಚ್ಚಲಾಗಿತ್ತು. ಇದೀಗ ಪುನರಾರಂಭದ ಮೊದಲ ದಿನವೇ ಗರಿಷ್ಠ ಪ್ರವಾಸಿಗರು ಭೇಟಿ ನೀಡಿರುವ ಮೃಗಾಲಯಗಳ ಪಟ್ಟಿಯಲ್ಲಿ ಬಿಂಕದಕಟ್ಟಿ ಮೃಗಾಲಯ 4ನೇ ಸ್ಥಾನದಲ್ಲಿದೆ. ಪುನರಾರಂಭಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭಿಸಿದೆ’ಎಂದು ಮೃಗಾಲಯದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್‌ಡೌನ್‌ ಜಾರಿಯಾದ ಮೊದಲ ದಿನದಿಂದಲೇ ಮೃಗಾಲಯದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಅದರಲ್ಲೂ ಅಮೆರಿಕದ ಮೃಗಾಲಯವೊಂದರ ಹುಲಿಯೊಂದಕ್ಕೆ ಕೊರೊನಾ ಸೋಂಕು ತಗುಲಿದ ಶಂಕೆ ವ್ಯಕ್ತವಾದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿತ್ತು. ಇಡೀ ಮೃಗಾಲಯವನ್ನು ಸೋಡಿಯಂ ಹೈಪೊ ಕ್ಲೋರೈಡ್‌ ದ್ರಾವಣ ಬಳಸಿ ಸ್ವಚ್ಛಗೊಳಿಸಲಾಗಿತ್ತು. ಇದೀಗ ರಾಜ್ಯ ಮೃಗಾಲಯ ಪ್ರಾಧಿಕಾರದ ಸೂಚನೆಯಂತೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪುನರಾರಂಭ ಮಾಡಲಾಗಿದೆ.

ರಾಜ್ಯದ ಏಕೈಕ ಸಣ್ಣ ಮೃಗಾಲಯ ಎಂಬ ಹೆಗ್ಗಳಿಕೆ ಗದುಗಿನ ಬಿಂಕದಕಟ್ಟಿ ಮೃಗಾಲಯದ್ದು. ಸದ್ಯ ಇಲ್ಲಿ 37ಕ್ಕೂ ಹೆಚ್ಚು ಪ್ರಭೇದದ 400ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ. ಮೃಗಾಲಯದಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ವಿಶೇಷ ಪಂಜರ, ‘ಹಕ್ಕಿ ಕಾಪು’ (Aviary) ನಿರ್ಮಿಸಲಾಗಿದೆ. 150 ಅಡಿ ಉದ್ದ, 40 ಅಡಿ ಅಗಲ ಮತ್ತು 50 ಅಡಿ ಎತ್ತರದಲ್ಲಿ ಬೃಹತ್ ಪಕ್ಷಿ ಪಂಜರ ನಿರ್ಮಿಸಿದ್ದು, ಈ ಪಂಜರದ ನಡುವಿನಿಂದ ಪಾದಾಚಾರಿ ಸೇತುವೆ ನಿರ್ಮಿಸಲಾಗಿದೆ. ಸಾರ್ವಜನಿಕರು ಈ ‘ಹಕ್ಕಿ ಹಾದಿ’ ಮೂಲಕ ಹೆಜ್ಜೆ ಹಾಕುತ್ತಾ ಅತ್ಯಂತ ಸಮೀಪದಿಂದ ಪಕ್ಷಿಗಳನ್ನು ಕಣ್ತುಂಬಿಸಿಕೊಳ್ಳಬಹುದು. ರಾಜ್ಯದಲ್ಲಿ 9 ಮೃಗಾಲಯಗಳಿದ್ದರೂ, ಇಂಥ ಸೌಲಭ್ಯ ಹೊಂದಿರುವುದು ಬಿಂಕದಕಟ್ಟಿ ಮೃಗಾಲಯದಲ್ಲಿ ಮಾತ್ರ.

ಮೈಸೂರಿನ ಚಾಮರಾಜೇಂದ್ರ ಮೃಗಾಲಯವು 125 ವರ್ಷಗಳನ್ನು ಪೂರೈಸಿದ ಅಂಗವಾಗಿ, ಗದಗ ಮೃಗಾಲಯವನ್ನು ದತ್ತು ಪಡೆದಿದ್ದು, ಅಲ್ಲಿನ ಹೆಚ್ಚುವರಿ ವರಮಾನವನ್ನು ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT