ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: 172 ಮಂದಿಗೆ ಪಾಸ್‌, 400 ಅರ್ಜಿ ತಿರಸ್ಕೃತ, ನಿಯಮ ಬಿಗಿಗೊಳಿಸಿದ ಜಿಲ್ಲಾಡಳಿತ

ಪರಿಶೀಲನೆಗೆ ಪ್ರತ್ಯೇಕ ತಂಡ ರಚನೆ
Last Updated 14 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಗದಗ: ಮಾರ್ಚ್‌ 24ರಿಂದ ಏಪ್ರಿಲ್‌ 14ರವರೆಗಿನ ಮೊದಲ ಹಂತದ ಲಾಕ್‌ಡೌನ್‌ ಅವಧಿಯಲ್ಲಿ, ವೈದ್ಯಕೀಯ ತುರ್ತು, ಮೃತರ ಅಂತ್ಯಕ್ರಿಯೆ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟು ‌ಜಿಲ್ಲೆಯಿಂದ ಹೊರಗೆ ಹೋಗಲು ಪಾಸ್‌ಗಾಗಿ ಒಟ್ಟು 600ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಜಿಲ್ಲಾಡಳಿತ ಪಾಸ್‌ ನೀಡಿದ್ದು ಕೇವಲ 172 ಜನರಿಗೆ ಮಾತ್ರ.

ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ಕುಮಾರ ಎಂ. ನೇತೃತ್ವದಲ್ಲಿ ಲಾಕ್‌ಡೌನ್‌ ಪಾಸ್‌ ಅರ್ಜಿಗಳನ್ನು ವಿಲೇವಾರಿ ಮಾಡಲು ಹಿರಿಯ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಲಾಗಿದೆ. ಬಂದ ಪ್ರತಿಯೊಂದು ಅರ್ಜಿಯನ್ನೂ ಪರಿಶೀಲಿಸಿ, ಸಮರ್ಪಕ ಕಾರಣ ಇದ್ದರೆ ಮಾತ್ರ ಪಾಸ್‌ ನೀಡಲಾಗುತ್ತಿದೆ. ಇದುವರೆಗೆ 400 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಪತ್ನಿ ಗರ್ಭಿಣಿಯಾಗಿದ್ದು ತವರು ಮನೆಗೆ ಕಳುಹಿಸಬೇಕು, ಬೇರೆ ಜಿಲ್ಲೆಗೆ ವರ್ಗಾವಣೆಯಾಗಿದೆ ಅಲ್ಲಿಗೆ ಹೋಗಿ ಕೆಲಸಕ್ಕೆ ವರದಿ ಮಾಡಿಕೊಳ್ಳಬೇಕು, ಮಗಳನ್ನು ಗಂಡನ ಮನೆಗೆ ಕಳುಹಿಸಬೇಕು, ಅಳಿಯನನ್ನು ಕರೆದುಕೊಂಡು ಬರಬೇಕು, ಬೇಸಿಗೆ ರಜೆ ಇದ್ದು ಮಕ್ಕಳನ್ನು ಅಜ್ಜ–ಅಜ್ಜಿಯ ಊರಿಗೆ ಕಳುಹಿಸಬೇಕು ಹೀಗೆ ಪಾಸ್‌ಗಾಗಿ ಅರ್ಜಿ ಸಲ್ಲಿಸಿದವರು ತರಹೇವಾರಿ ಕಾರಣಗಳನ್ನು ನೀಡಿದ್ದಾರೆ.

ಕೆಲವರು ಜಿಲ್ಲೆಯ ಒಳಗೆ ಮುಕ್ತವಾಗಿ ಸಂಚರಿಸಲು, ರಸಗೊಬ್ಬರ ಖರೀದಿಸಲು ಜಿಲ್ಲಾ ಕೇಂದ್ರಕ್ಕೆ ಬರಲು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು, ಬೇರೆ ಊರಿನಲ್ಲಿರುವ ಜಮೀನಿಗೆ ತೆರಳಲು ಹೀಗೆ ಹಲವು ಕಾರಣಗಳನ್ನು ಮುಂದಿಟ್ಟು ಅರ್ಜಿ ಸಲ್ಲಿಸಿದ್ದಾರೆ.

ಆರೋಗ್ಯ ಸಿಬ್ಬಂದಿ, ಪತ್ರಿಕಾ ವಿತರಕರು, ಹಾಲು ಮಾರಾಟಗಾರರು, ಬೀಜ–ರಸಗೊಬ್ಬರ ಸೇರಿ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ಪಾಸ್‌ನಿಂದ ವಿನಾಯ್ತಿ ನೀಡಲಾಗಿದೆ. ಹೆರಿಗೆ, ಕ್ಯಾನ್ಸರ್‌, ಡಯಾಲಿಸೀಸ್‌, ಹತ್ತಿರದ ಸಂಬಂಧಿಕರು ಮರಣ ಹೊಂದಿದರೆ ಅಂತ್ಯಕ್ರಿಯೆಗೆ ತೆರಳಲು ಮಾತ್ರ ಇದುವರೆಗೆ ಪಾಸ್‌ ನೀಡಲಾಗಿದೆ. ಏಪ್ರಿಲ್‌ 15ರಿಂದ ಎರಡನೆಯ ಹಂತದ ಲಾಕ್‌ಡೌನ್‌ ಆರಂಭವಾಗಲಿದ್ದು, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ತೆರಳಲು ಪಾಸ್‌ ನೀಡುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ಇದುವರೆಗೆ ಕ್ಯಾನ್ಸರ್‌ ಚಿಕಿತ್ಸೆಗಾಗಿ 3, ಡಯಾಲಿಸಿಸ್‌ಗೆ 4, ಹೆರಿಗೆ ಪ್ರಕರಣಗಳಿಗೆ 100, ಪವನ ಹಾಗೂ ಸೌರವಿದ್ಯುತ್‌ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕೆಲಸದ ನಿಮಿತ್ತ ನಿಗದಿತ ಸ್ಥಳಕ್ಕೆ ತೆರಳಲು ಪಾಸ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT