ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ 469 ಮಂದಿಗೆ ಲಸಿಕೆ

ಗದಗ ಜಿಲ್ಲೆಯಲ್ಲಿ ಕೋವಿಡ್–19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ
Last Updated 17 ಜನವರಿ 2021, 1:32 IST
ಅಕ್ಷರ ಗಾತ್ರ

ಗದಗ: ಕೊರೊನಾ ವಾರಿಯರ್ಸ್‌ ಆಗಿ ದುಡಿದ ಆರೋಗ್ಯ ಇಲಾಖೆಯ ಗ್ರೂಪ್‌ ಡಿ ನೌಕರರಿಗೆ ಲಸಿಕೆ ಹಾಕುವ ಮೂಲಕ ನಗರದಲ್ಲಿ ಕೋವಿಡ್‌–19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ‌ಇಲ್ಲಿನ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು.

ಶನಿವಾರದಂದು ಆರೋಗ್ಯ ಇಲಾಖೆಯ ವೈದ್ಯರು, ನರ್ಸ್‌ಗಳು, ಅಂಗನವಾಡಿ ಮೇಲ್ವಿಚಾರಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಯಿತು.

ಜಿಲ್ಲಾಡಳಿತ ತಯಾರಿಸಿದ ಪಟ್ಟಿಯಂತೆ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಜರುಗಿಸಲಾಯಿತು. ಪ್ರಥಮದಲ್ಲಿ ನೋಂದಣಿ, ಬಳಿಕ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಅದನ್ನು ಕೋವಿನ್‌ ಆ್ಯಪ್‌ಗೆ ಅಪ್‌ಲೋಡ್‌ ಮಾಡಿ ಬಳಿಕ ಲಸಿಕೆ ನೀಡಲಾಯಿತು. ಮಾಹಿತಿ ಸಂಗ್ರಹಿಸಿ ಅದನ್ನು ಅಪ್‌ಲೋಡ್‌ ಮಾಡಲು ಸರ್ವರ್‌ ಸಮಸ್ಯೆ ಎದುರಾಗಿದ್ದರಿಂದ ಲಸಿಕೆ ನೀಡುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತು. ಲಸಿಕೆ ಪಡೆದುಕೊಂಡವರನ್ನು ಅರ್ಧ ಗಂಟೆಗಳ ಕಾಲ ವೀಕ್ಷಣೆಯಲ್ಲಿ ಇಡಲಾಗುತ್ತಿತ್ತು. ಮೊದಲ ದಿನ ಲಸಿಕೆ ಪಡೆದ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಲಿಲ್ಲ.

ಕೋವಿಡ್‌–19 ಲಸಿಕೆಯ ಪ್ರಥಮ ಡೋಸ್ ಪಡೆದವರು 28 ದಿನಗಳ ನಂತರ ಮತ್ತೆ ಎರಡನೇ ಡೋಸ್ ಲಸಿಕೆ ಪಡೆಯಬೇಕು. ಈ ಸಂದರ್ಭದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ ಎಂದು ಲಸಿಕೆ ಪಡೆದವರಿಗೆ ತಿಳಿಸಲಾಯಿತು.

ಗರ್ಭಿಣಿಯರು, ಬಾಣಂತಿಯರು ಹಾಗೂ ಒಂದು ತಿಂಗಳಿನಿಂದ ಈಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಸಿಬ್ಬಂದಿಗೆ ಲಸಿಕೆ ನೀಡದಂತೆ ಸೂಚಿಸಲಾಗಿತ್ತು.

ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಭೇಟಿ ನೀಡಿ ಲಸಿಕಾ ಕಾರ್ಯಕ್ರಮ ಸಿದ್ಧತೆ ಹಾಗೂ ಚಾಲನೆ ಪ್ರಕ್ರಿಯೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರೀಗಿಡದ, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ತಾಲ್ಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್.ನೀಲಗುಂದ ಇದ್ದರು.‌

ಶೇ 70ರಷ್ಟು ಲಸಿಕೆ ನೀಡಿಕೆ
ಕೋವಿಡ್–19 ಲಸಿಕೆ ನೀಡುವ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಗುರುತಿಸಲಾದ ಏಳು ಕೇಂದ್ರಗಳಲ್ಲಿ ಬೆಳಿಗ್ಗೆ 11ಕ್ಕೆ ಆರಂಭಿಸಿ ಸಂಜೆ 5ಕ್ಕೆ ಮುಕ್ತಾಯಗೊಳಿಸಲಾಯಿತು.

ಜಿಲ್ಲೆಯ 7 ಲಸಿಕಾ ಕೇಂದ್ರಗಳಿಗೆ ಶನಿವಾರ 664 ಮಂದಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿತ್ತು. 469 ವಾರಿಯರ್ಸ್‍ಗಳಿಗೆ ಲಸಿಕೆ ನೀಡುವ ಮೂಲಕ ಶೇ 70ರಷ್ಟು ಲಸಿಕೆ ನೀಡಿದಂತಾಗಿದೆ.

ಗದುಗಿನ ಹೆರಿಗೆ ಆಸ್ಪತ್ರೆ-69, ಗದಗ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ- 80, ಮುಂಡರಗಿ- 69, ನರಗುಂದ- 54, ರೋಣ- 66, ಶಿರಹಟ್ಟಿ- 53, ಲಕ್ಕುಂಡಿ- 78 ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT