ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: 14 ದಿನ, 6 ಮರಣ, 154 ಪಾಸಿಟಿವ್‌, ಹಳ್ಳಿಗಳಲ್ಲೂ ವ್ಯಾಪಿಸಿದ ಸೋಂಕು

ಮುನ್ನೆಚ್ಚರಿಕೆ ವಹಿಸಿದ ಜನರು
Last Updated 15 ಜುಲೈ 2020, 15:59 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಜುಲೈ1ರಿಂದ ಜುಲೈ 14ರವರೆಗೆ ಕೇವಲ ಎರಡು ವಾರಗಳಲ್ಲಿ ಒಟ್ಟು 154 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಕೋವಿಡ್‌ನಿಂದಾಗಿ 6 ಜನರು ಮೃತಪಟ್ಟಿದ್ದಾರೆ.

ಕಳೆದ 14 ದಿನಗಳಿಂದ ಪ್ರತಿದಿನವೂ ಪಾಸಿಟಿವ್‌ ವರದಿಗಳು ಬರುತ್ತಲೇ ಇರುವುದು, ಮರಣ ಸಂಖ್ಯೆ ಏರುತ್ತಲೇ ಇರುವುದು ಜಿಲ್ಲಾಡಳಿತವನ್ನು ಮಾತ್ರವಲ್ಲ, ಸಾರ್ವಜನಿಕರನ್ನೂ ಬೆಚ್ಚಿ ಬೀಳಿಸಿದೆ. ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಜಿಲ್ಲಾ ಕೇಂದ್ರವಾದ ಗದುಗಿನಲ್ಲಿ ಮಾತ್ರ ಗರಿಷ್ಠ ಪ್ರಕರಣಗಳು ವರದಿಯಾಗಿದ್ದವು. ಆದರೆ, ಜೂನ್‌, ಜುಲೈ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಿಂದಲೇ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ ವರದಿಯಾಗಿರುವ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ, ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹಳ್ಳಿಗಳಿಂದ ಜ್ವರ, ಕೆಮ್ಮಿನ ಲಕ್ಷಣಗಳಿಂದ ಬಳಲುತ್ತಿದ್ದವರು ಚಿಕಿತ್ಸೆಗಾಗಿ ಆಸ್ಪತ್ರೆ ಬಂದಾಗ, ಅವರ ಗಂಟಲು ದ್ರವದ ಪರೀಕ್ಷೆ ವೇಳೆ ಸೋಂಕು ಇರುವುದು ತಿಳಿಯುತ್ತಿದೆ.

ಇತ್ತೀಚೆಗೆ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದ ಬೆನ್ನಲ್ಲೇ ಸಮುದಾಯಕ್ಕೆ ಸೋಂಕು ಹರಡಿದೆಯಾ ಎನ್ನವುದನ್ನು ಖಾತ್ರಿಪಡಿಸಲು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ, ಪೌರಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ 50ಕ್ಕೂ ಹೆಚ್ಚು ವ್ಯಕ್ತಿಗಳ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ವರದಿ ಬಂದಾಗ ಇದರಲ್ಲಿ ಸಾಕಷ್ಟು ಜನರಿಗೆ ಸೋಂಕು ಇರುವುದು ದೃಢಪಟ್ಟಿತ್ತು.

‘ಸಂಪರ್ಕದಿಂದಲೇ ಸಾಕಷ್ಟು ಜನರಿಗೆ ಸೋಂಕು ಹರಡುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿರುವ ಶೇ 90ರಷ್ಟು ಜನರಲ್ಲಿ ಸೋಂಕಿನ ಯಾವ ಲಕ್ಷಣಗಳೂ ಕಾಣಿಸಿಕೊಂಡಿಲ್ಲ’ ಎನ್ನುತ್ತಾರೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್‌) ನಿರ್ದೇಶಕ ಪಿ.ಎಸ್‌. ಭೂಸರೆಡ್ಡಿ.

‘ಜಿಲ್ಲೆಯಲ್ಲಿ ಮರಣ ಸಂಭವಿಸಿದ ಪ್ರಕರಣಗಳಲ್ಲಿ ಸೋಂಕಿತರಿಗೆ, ಕೊರೊನಾ ಜತೆಗೆ ಇತರೆ ಆರೋಗ್ಯ ಸಮಸ್ಯೆಗಳೂ ಇದ್ದವು. ಇಂತಹ ಪ್ರಕರಣಗಳಲ್ಲಿ ಸೋಂಕಿತರನ್ನು ತೀವ್ರ ನಿಗಾದಲ್ಲಿ ನೋಡಿಕೊಳ್ಳಬೇಕಾಗುತ್ತದೆ’ಎನ್ನುತ್ತಾರೆ ಅವರು.

ಪಟ್ಟಿ

ಜುಲೈ ತಿಂಗಳ ಗರಿಷ್ಠ ಪ್ರಕರಣಗಳು

ಜುಲೈ 3: 19

ಜುಲೈ 6: 18

ಜುಲೈ 10: 19

ಜುಲೈ 11: 40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT