ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗದಲ್ಲಿ ಭಾನುವಾರದ ಲಾಕ್‌ಡೌನ್: ರಸ್ತೆಗಿಳಿದವರಿಗೆ ಪೊಲೀಸರ ಎಚ್ಚರಿಕೆ

ಅನಗತ್ಯವಾಗಿ ರಸ್ತೆಗಳಿದವರಿಗೆ ಪೊಲೀಸರಿಂದ ಖಡಕ್‌ ಎಚ್ಚರಿಕೆ
Last Updated 5 ಜುಲೈ 2020, 12:05 IST
ಅಕ್ಷರ ಗಾತ್ರ

ಗದಗ: ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದ್ವಿಶತಕದ ಗಡಿ ದಾಟಿರುವ ಜಿಲ್ಲೆಯಲ್ಲಿ ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.

ಬೆಳಿಗ್ಗೆಯಿಂದಲೇ ಜನ ಮತ್ತು ವಾಹನ ಸಂಚಾರ ವಿರಳವಾಗಿತ್ತು. ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಖಡಕ್‌ ಎಚ್ಚರಿಕೆ ನೀಡಿ ವಾಪಸ್‌ ಮನೆಗಳಿಗೆ ಕಳುಹಿಸಿದರು. ರಸ್ತೆಗಳಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಆಸ್ಪತ್ರೆ, ಔಷಧ ಅಂಗಡಿ, ಅಗತ್ಯ ವಸ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳು ಸಂಪೂರ್ಣ ಬಂದ್‌ ಆಗಿದ್ದವು.

ಗದಗ–ಬೆಟಗೇರಿ ಅವಳಿ ನಗರ ಮಾತ್ರವಲ್ಲ, ಇಡೀ ಜಿಲ್ಲೆ ಲಾಕ್‌ಡೌನ್‌ನಿಂದ ಸಂಪೂರ್ಣ ಸ್ತಬ್ಧವಾಗಿತ್ತು. ವಾಹನಗಳು ರಸ್ತೆಗಿಳಿಯಲಿಲ್ಲ. ಬೆಳಿಗ್ಗೆ ಪತ್ರಿಕೆ, ಹಾಲು, ತರಕಾರಿ ಖರೀದಿಸಲು, ವಾಯುವಿಹಾರಕ್ಕಾಗಿ ಬೆರಳೆಣಿಕೆಯ ಜನರು ಮಾತ್ರ ಮನೆಯಿಂದ ಹೊರಗೆ ಬಂದಿದ್ದರು. 10 ಗಂಟೆಯ ನಂತರ ಜನ ಸಂಚಾರ ಅಪರೂಪವಾಗಿತ್ತು.

ಭಾನುವಾರ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಹೀಗಾಗಿ ಶನಿವಾರವೇ ಮದ್ಯದಂಗಡಿಗಳಲ್ಲಿ ಪಾರ್ಸಲ್‌ ಪಡೆಯಲು ಗ್ರಾಹಕರ ದಟ್ಟಣೆ ಇತ್ತು. ಜಿಲ್ಲೆಯ ಬಹುತೇಕ ಜನರು ಶನಿವಾರವೇ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದ್ದರು.

ಗದುಗಿನ ಸ್ಟೇಶನ್ ರಸ್ತೆ, ರೋಟರಿ ವೃತ್ತ, ಭೂಮರೆಡ್ಡಿ ವೃತ್ತ, ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತ, ಮುಳಗುಂದ ನಾಕಾ, ಹುಯಿಲಗೋಳ ನಾರಾಯಣರಾವ್‌ ವೃತ್ತ, ಟಾಂಗಾ ಕೂಟ, ಪಿಬಿ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿತ್ತು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಟಂಟಂಗಳು, ಆಟೊ, ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

ಭಾನುವಾರ ಮಾಂಸ ಮತ್ತು ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು, ಆದರೆ, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಬಡಾವಣೆಗಳ ಒಳಗಿನ ಚಿಕ್ಕ ದಿನಸಿ ಅಂಗಡಿಗಳು ಬೆಳಿಗ್ಗೆ ಸ್ವಲ್ಪ ಹೊತ್ತು ತೆರೆದಿದ್ದವು. ನಂತರ ಇಡೀ ನಗರವೇ ಸ್ತಬ್ಧವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT