ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಧ್ವನಿಗೆ ಬಲ ತುಂಬಿದ ಕ್ರಿಕೆಟಿಗ ಸುನೀಲ್‌ ಜೋಶಿ ‘ಟಿಪ್ಪಣಿ’

Published : 21 ಆಗಸ್ಟ್ 2024, 4:19 IST
Last Updated : 21 ಆಗಸ್ಟ್ 2024, 4:19 IST
ಫಾಲೋ ಮಾಡಿ
Comments

ಗದಗ: ಗದುಗಿನಿಂದ ಬೆಂಗಳೂರಿಗೆ ತೆರಳಲು ವೋಲ್ವೊ ಹಾಗೂ ಸ್ಲೀಪರ್‌ ಬಸ್‌ಗಳನ್ನು ಆರಂಭಿಸುವಂತೆ ಪ್ರಯಾಣಿಕರು ಹಲವು ದಿನಗಳಿಂದ ಬೇಡಿಕೆ ಇಡುತ್ತಾ ಬಂದಿದ್ದರೂ ಸಾರಿಗೆ ಇಲಾಖೆ ಸ್ಪಂದಿಸಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆ ಆಗಿದ್ದು, ಬೆಂಗಳೂರಿಗೆ ತೆರಳಲು ಖಾಸಗಿ ಬಸ್‌ಗಳನ್ನೇ ಅವಲಂಬಿಸುವಂತಾಗಿದೆ.

ಇದರ ನಡುವೆ ಆಗಸ್ಟ್‌ 19ರಂದು ಕ್ರಿಕೆಟಿಗ, ಗದುಗಿನವರೇ ಆಗಿರುವ ಸುನೀಲ್‌ ಜೋಶಿ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಒಂದು ಟಿಪ್ಪಣಿ ಗಮನ ಸೆಳೆದಿದೆ. ಜತೆಗೆ ಹಲವು ದಿನಗಳಿಂದ ಬಸ್‌ಗಾಗಿ ಬೇಡಿಕೆ ಇಡುತ್ತಿದ್ದ ಜನರ ಧ್ವನಿಗೆ ಇದು ಬಲತಂದಿದೆ.

‘ಬೆಂಗಳೂರು– ಗದಗ ನಡುವೆ ಸಂಚರಿಸುತ್ತಿದ್ದ ವೋಲ್ವೊ ಬಸ್‌ ಅನ್ನು ಯಾವುದೇ ಕಾರಣವಿಲ್ಲದೇ ರದ್ದುಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನಹರಿಸಿ ಈ ಮಾರ್ಗದ ವೋಲ್ವೊ ಬಸ್‌ ಪುನರಾರಂಭಿಸಲು ಕ್ರಮವಹಿಸಬೇಕು. ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸುನೀಲ್‌ ಜೋಶಿ ‘ಎಕ್ಸ್‌’ ಖಾತೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜತೆಗೆ ಅದನ್ನು ಮುಖ್ಯಮಂತ್ರಿ, ಸಾರಿಗೆ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಟ್ಯಾಗ್‌ ಮಾಡಿದ್ದಾರೆ. ಇವರ ಟಿಪ್ಪಣಿ ಓದಿ ಸಾವಿರಾರು ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ. ಮರು ಹಂಚಿಕೊಂಡಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಕೂಡ ಸುನೀಲ್‌ ಜೋಶಿ ಅವರು ಬೆಂಗಳೂರಿನಿಂದ ಗದಗಕ್ಕೆ ವೋಲ್ವೊ ಬಸ್‌ ಆರಂಭಿಸುವಂತೆ ‘ಎಕ್ಸ್‌’ನಲ್ಲಿ ಒತ್ತಾಯಿಸಿದ್ದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ್ದ ಅಂದಿನ ಸಾರಿಗೆ ಸಚಿವ ಬಿ. ಶ್ರೀರಾಮುಲು, ಮಾರನೇ ದಿನದಿಂದಲೇ ವೋಲ್ವೊ ಬಸ್‌ ಬಿಡಿಸಿದ್ದರು. ಇದರಿಂದ ಜನರು ಖುಷಿಗೊಂಡಿದ್ದರು. ಆದರೆ, ತದನಂತದಲ್ಲಿ ಕೆಲವು ತಿಂಗಳ ಕಾಲ ಸಂಚರಿಸಿದ ವೋಲ್ವೊ ಬಸ್‌ ಅನ್ನು ಪ್ರಯಾಣಿಕರು ಇಲ್ಲ ಎಂಬ ಕಾರಣ ನೀಡಿ ರದ್ದುಗೊಳಿಸಿದ್ದರು. ಈಗ ಸುನೀಲ್‌ ಜೋಶಿ ಅವರು ಮತ್ತೇ ಮನವಿ ಮಾಡಿದ್ದು, ಕಾಂಗ್ರೆಸ್‌ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಸ್ಪಂದಿಸಿ, ಬಸ್‌ ಸೇವೆ ಆರಂಭಿಸಬೇಕು ಎಂಬುದು ಗದಗ ಜನರ ಆಗ್ರಹವಾಗಿದೆ.

ವರ್ಕ್‌ಶಾಪ್‌ಗೆ ಹೋದ ಬಸ್‌ ಹಿಂತಿರುಗಿ ಬರಲೇ ಇಲ್ಲ: ತುಂಬ ವರ್ಷಗಳ ಹಿಂದೆ ಗದಗ– ಬೆಂಗಳೂರು ನಡುವೆ ‘ಕೊರೊನಾ’ ಎಂಬ ನಾನ್‌ ಎಸಿ ಸ್ಲೀಪರ್‌ ಬಸ್‌ ಸಂಚರಿಸುತ್ತಿತ್ತು. ಮಳೆಗಾಲದಲ್ಲಿ ಈ ಬಸ್‌ನ ಚಾವಣಿ ಸೋರುತ್ತಿದ್ದ ಕಾರಣಕ್ಕೆ ಪ್ರಯಾಣಿಕರಿಂದ ದೂರುಗಳು ಬಂದವು. ಆ ಬಳಿಕ ರಿಪೇರಿಗೆಂದು ಬಸ್‌ ಅನ್ನು ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಅವು ದುರಸ್ತಿಯಾಗಿ ಅಲ್ಲಿಂದ ಬರಲೇ ಇಲ್ಲ.

‘ಕೊರೊನಾ’ ಸ್ಲೀಪರ್‌ ಬಸ್‌ ಸದ್ಯದಲ್ಲೇ ದುರಸ್ತಿ ಆಗಿ ಬರಲಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಗದಗ–ಬೆಂಗಳೂರು ರೂಟ್‌ ಪುನರಾರಂಭಿಸಲಾಗುವುದು’ ಎಂದು ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೊರೊನಾ’ ನಾನ್‌ ಎಸಿ ಸ್ಲೀಪರ್‌ ಬಸ್‌ಗಳು 10 ಲಕ್ಷ ಕಿ.ಮೀ.ಗಿಂತಲೂ ಹೆಚ್ಚು ಓಡಿವೆ. ಆದಕಾರಣ, ನಮ್ಮ ವಿಭಾಗಕ್ಕೆ ಈಗ ಹೊಸದಾಗಿ ಬಂದಿರುವ ಪಲ್ಲಕ್ಕಿ ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ನೀಡುವಂತೆ ಕೇಂದ್ರ ಕಚೇರಿಗೆ ಮನವಿ ಮಾಡಲಾಗಿದೆ. ಎರಡು ಪಲ್ಲಕ್ಕಿ ಬಸ್‌ಗಳು ಬರುವ ನಿರೀಕ್ಷೆ ಇದ್ದು, ಅವುಗಳು ಕಾರ್ಯಾಚರಣೆ ಆರಂಭಿಸಿದರೆ ಗದಗ– ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಈ ಹಿಂದೆ ಕಾರ್ಯಾಚರಣೆ ಮಾಡುತ್ತಿದ್ದ ‘ಕೊರೊನಾ’ ಬಸ್‌ ಮುಂಡರಗಿ, ದಾವಣಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಈಗ ಮತ್ತೇ ಸ್ಲೀಪರ್‌ ಬಸ್‌ ಆರಂಭಿಸಿದರೆ ಯಾವ ಮಾರ್ಗದಲ್ಲಿ ಓಡಿಸಬೇಕು ಎಂಬುದರ ಕುರಿತು ಪ್ರಯಾಣಿಕರು, ಅಧಿಕಾರಿಗಳ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು. ಹುಬ್ಬಳ್ಳಿ, ಹಾವೇರಿ, ಹೊಸಪೇಟೆ ಈ ಮೂರು ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಹೆಚ್ಚು ಯಾವುದು ಅನುಕೂಲ ಎಂಬುದನ್ನು ನಿರ್ಧರಿಸಿ ರೂಟ್‌ ವಿನ್ಯಾಸಗೊಳಿಸಲಾಗುವುದು’ ಎಂದು ಅವರು ಹೇಳಿದರು.

ಹೊಸ ಬಸ್‌ಗಳ ಖರೀದಿಗೆ ಕೆಎಸ್‌ಆರ್‌ಟಿಸಿಯಿಂದ ಟೆಂಡರ್‌ ಕರೆಯಲಾಗಿದೆ. ಅದರಲ್ಲೇ ನಮ್ಮ ವಿಭಾಗದ ಬೇಡಿಕೆಗಳನ್ನೂ ಸೇರಿಸಲಾಗಿದೆ. ಹೊಸದಾಗಿ ಪಲ್ಲಕ್ಕಿ ಬಸ್‌ಗಳು ಬಂದ ತಕ್ಷಣ ಗದಗ ವಿಭಾಗಕ್ಕೂ ಒದಗಿಸಲಾಗುವುದು
- ಪ್ರಿಯಾಂಗಾ ಎಂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂ.ಡಿ.
ಗದಗ ವಿಭಾಗದಲ್ಲಿ ವೋಲ್ವೊ ಬಸ್‌ ಇಲ್ಲ. ಈ ಹಿಂದೆ ಸಂಚರಿಸುತ್ತಿದ್ದ ವೋಲ್ವೊ ಬಸ್‌ ಅನ್ನು ಬೆಂಗಳೂರಿನಿಂದಲೇ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ನಿಲ್ಲಿಸಲಾಗಿದೆ
ದೇವರಾಜ ಗದಗ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ
ಸುನೀಲ್‌ ಜೋಶಿ ಅವರ ಆಗ್ರಹಕ್ಕೆ ನಮ್ಮ ಬೆಂಬಲ ಇದೆ. ಗದುಗಿನಿಂದ ಬೆಂಗಳೂರಿಗೆ ತೆರಳಲು ವೋಲ್ವೊ ಹಾಗೂ ಸ್ಲೀಪರ್‌ ಬಸ್‌ಗಳ ಅವಶ್ಯಕತೆ ತುಂಬ ಇದ್ದು ಇಲಾಖೆ ತಕ್ಷಣವೇ ಸೇವೆ ಆರಂಭಿಸಬೇಕು
- ಸಂಗಮೇಶ ಕುರಿ ಗದಗ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT