ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇವಾಂಶದ ಕೊರತೆಯಿಂದ ಬಾಡಿದ ಬೆಳೆಗಳು: ಟ್ಯಾಂಕರ್‌ ನೀರಿನ ಮೊರೆ ಹೋದ ರೈತ

ಪ್ರಕಾಶ್‌ ಗುದ್ನೆಪ್ಪನವರ
Published 28 ಅಕ್ಟೋಬರ್ 2023, 6:46 IST
Last Updated 28 ಅಕ್ಟೋಬರ್ 2023, 6:46 IST
ಅಕ್ಷರ ಗಾತ್ರ

ರೋಣ: ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆ ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ಮಳೆ ಆಶ್ರಿತ ಬೆಳೆಗಳಿಗೂ ತಾಲ್ಲೂಕಿನ ನೀರಿನ ಕೊರತೆ ಎದುರಾಗಿದ್ದು, ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆ ಹೋಗಿದ್ದಾರೆ. 

ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ರೈತ ಬಸವರಾಜ ನವಲ ಗುಂದ ಅವರ ಹತ್ತು ಎಕರೆ ಮೆಣಸಿನ ಕಾಯಿ ಬೆಳೆಗೆ ತೇವಾಂಶದ ಕೊರತೆ ಎದುರಾಗಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿರುವ ಕಾರಣ ಕೈಗೆ ಬಂದ ತುತ್ತು ಕಳೆದುಕೊಳ್ಳುವುದು ಬೇಡವೆಂದು ಪ್ರತಿದಿನ ₹4,500 ಖರ್ಚು ಮಾಡಿ ಎಂಟು ಟ್ಯಾಂಕರ್‌ನಲ್ಲಿ ನೀರು ಹಾಯಿಸುವ ಮೂಲಕ ಬೆಳೆ ಉಳಿಸಿ ಕೊಳ್ಳುವ ಹರಸಾಹಸಕ್ಕೆ ಮುಂದಾಗಿ ದ್ದಾರೆ.

‘ಹತ್ತು ಎಕರೆ ಜಮೀನಿಗೆ ₹50 ಸಾವಿರ ಮೌಲ್ಯದ ಬೀಜಬಿತ್ತನೆ ಮಾಡಿ ಅದಕ್ಕೆ 18 ಚೀಲ ರಾಸಾಯನಿಕ ಗೊಬ್ಬರ ಹಾಕಲಾಗಿದೆ. ಅಲ್ಲದೇ ₹60 ಸಾವಿರ ಖರ್ಚು ಮಾಡಿ ಕಳೆ ತಗೆಸಲಾ ಗಿದೆ. ಆದರೆ, ವರುಣನ ಅವಕೃಪೆ ಮುಂದುವರಿದ ಕಾರಣ, ಭರ್ಜರಿ ಹೂ, ಕಾಯಿ ಬಿಡುವ ವೇಳೆಗೆ ತೇವಾಂಶದ ಕೊರತೆ ಉಂಟಾಗಿದೆ. ಬಂದಿರುವ ಬೆಳೆ ಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿ ಇನ್ನಷ್ಟು ಖರ್ಚು ಮಾಡುತ್ತಿದ್ದೇವೆ’ ಎನ್ನುತ್ತಾರೆ  ರೈತ ಬಸವರಾಜ ನವಲಗುಂದ.

ಅಂದಾಜು 400 ಟ್ಯಾಂಕರ್ ನೀರು ಹಾಯಿಸುವ ಗುರಿ ಇಟ್ಟುಕೊಂಡು 15ರಿಂದ 20 ದಿನಗಳವರೆಗೆ ಶ್ರಮ ವಹಿಸಿ ಸಂಪೂರ್ಣ ಜಮೀನಿಗೆ ನೀರನ್ನು ಉಣಿಸಿ ಬೆಳೆ ಕಾಪಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

‘ಮುಂಗಾರು ಮಳೆಯು ಆರಂಭ ದಲ್ಲಿ ಚೆನ್ನಾಗಿ ಸುರಿದು ಮಧ್ಯದಲ್ಲಿ ಕೈ ಕೊಟ್ಟ ಪರಿಣಾಮ ಬೆಳೆಗೆ ತೇವಾಂಶದ ಕೊರತೆ ಉಂಟಾಯಿತು. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ ಗೊಬ್ಬರ, ಕಳೆ ತಗೆಸುವ ಕಾರ್ಯ ಮಾಡಿ ಕೈ ಸುಟ್ಟುಕೊಂಡಿದ್ದೇನೆ. ಆದರೂ ಇನ್ನೂ ಸ್ವಲ್ಪ ಖರ್ಚು ಮಾಡಿದರೆ ಹತ್ತು ಎಕರೆಗೆ 20 ಕ್ವಿಂಟಲ್ ಮೆಣಸಿನಕಾಯಿ ಬರಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ಕೃಷಿಗೆ ಮಾಡಿದ ಖರ್ಚು ವಾಪಸ್‌ ಬಂದರೆ ಸ್ವಲ್ಪವಾದರೂ ಸುಧಾರಿಸಿಕೊಳ್ಳಬಹುದು’ ಎನ್ನುವರು ಬಸವರಾಜ.

ಮುಂಗಾರು ಹಂಗಾಮಿನಂತೆ ಹಿಂಗಾರು ಮಳೆ ಕೂಡ ಆಸೆ ತೋರಿಸಿ ಕಣ್ಮರೆಯಾಗಿರುವುದರಿಂದ ರೈತರು ಎರಡೂ ಬೆಳೆಗಳಿಂದ ವಂಚಿತರಾಗಿದ್ದಾರೆ. ಅಲ್ಲದೇ, ಇದ್ದಬದ್ದ ಹಣವನ್ನೆಲ್ಲಾ ಬೀಜ, ಗೊಬ್ಬರಕ್ಕೆ ಹಾಕಿ ಮುಗಿಲ ಕಡೆ ಮುಖ ಮಾಡಿ ಕುಳಿತುಕೊಂಡಿದ್ದಾರೆ.

ಮಳೆ ಕೊರತೆಯಿಂದ ಈರುಳ್ಳಿ, ಮೆಣಸಿನಕಾಯಿ ಬಾಡು ತ್ತಿದ್ದು, ತಾಲ್ಲೂಕಿನ ರೈತರು ಹಳ್ಳದ ನೀರನ್ನು ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ
ಗಿರೀಶ್ ಹೊಸೂರು, ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ, ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT