ಮಂಗಳವಾರ, ಅಕ್ಟೋಬರ್ 19, 2021
22 °C
ಇಳುವರಿಯಲ್ಲಿ ಭಾರಿ ಕುಸಿತ ಆಗುವ ಸಾಧ್ಯತೆ

ಲಕ್ಷ್ಮೇಶ್ವರ: ಶೇಂಗಾ ಬೆಳೆಗೆ ರೋಗಬಾಧೆ

ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಮುಂಗಾರಿನಲ್ಲಿ ಬಿತ್ತನೆಗೊಂಡ ಪ್ರಮುಖ ಎಣ್ಣೆ ಬೆಳೆಗಳಲ್ಲಿ ಒಂದಾಗಿರುವ ಬಳ್ಳಿಶೇಂಗಾ ಉತ್ತಮ ಮಳೆಯಿಂದಾಗಿ ಸೊಗಸಾಗಿ ಬೆಳೆದಿದ್ದು ಇನ್ನೇನು ಹೂವು ಬಿಟ್ಟು ಕಾಯಿ ಕಟ್ಟುವ ಹಂತಕ್ಕೂ ಬಂದಿತ್ತು. ಆದರೆ ಇದೀಗ ಇಡೀ ಬೆಳೆ ಡಾಂಬರ ರೋಗಕ್ಕೆ ತುತ್ತಾಗಿದ್ದು, ಇಳುವರಿಯಲ್ಲಿ ಭಾರಿ ಕುಸಿತ ಆಗುವ ಭಯ ರೈತರನ್ನು ಕಂಗೆಡಿಸಿದೆ.

ಪ್ರಸ್ತುತ ಸಾಲಿನಲ್ಲಿ ತಾಲ್ಲೂಕಿನ ಹತ್ತು ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಆಗಿದೆ. ಮಸಾರಿ ಭೂಮಿ ಈ ಬೆಳೆಗೆ ಹೆಚ್ಚು ಸೂಕ್ತವಾಗಿದ್ದು ಗೌರಿ ಹುಣ್ಣಿಮೆ ಹೊತ್ತಿಗೆ ಫಸಲು ರೈತರ ಕೈ ಸೇರುತ್ತಿತ್ತು. ಆದರೆ ಡಾಂಬರ ರೋಗ ಬೆಳೆಯನ್ನು ಹಾಳು ಮಾಡಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ಒಂದು ಎಕರೆಯಲ್ಲಿ ಶೇಂಗಾ ಬೆಳೆಯಲು ಅಂದಾಜು ₹ 15 ಸಾವಿರ ರೈತ ಖರ್ಚು ಮಾಡಿದ್ದಾನೆ. ಆದರೆ ರೋಗಪೀಡಿತ ಬಳ್ಳಿಯಿಂದಾಗಿ ಹಾಕಿದ ಬಂಡವಾಳವೂ ಆತನಿಗೆ ದಕ್ಕುವ ಯಾವ ಭರವಸೆಗಳು ಉಳಿದಿಲ್ಲ. ಬಳ್ಳಿಶೇಂಗಾ ಹೊಟ್ಟು ದನಕರುಗಳಿಗೆ ಮುಖ್ಯ ಆಹಾರಗಳಲ್ಲಿ ಒಂದು. ಹೀಗಾಗಿ ಈ ಭಾಗದ ರೈತರು ಹಿಂದಿನಿಂದಲೂ ಇದನ್ನು ಬೆಳೆಯುತ್ತಿದ್ದಾರೆ. ಆದರೆ ಈಚಿನ ದಿನಗಳಲ್ಲಿ ವಿವಿಧ ರೋಗಗಳು ಬೆಳೆಯನ್ನು ಹಾಳು ಮಾಡುತ್ತಿದ್ದು ರೈತನ ದುಗುಡವನ್ನು ಹೆಚ್ಚಿಸುತ್ತಲೇ ಇವೆ.

‘ಡಾಂಬರ ರೋಗ ಬಂದು ಶೇಂಗಾ ಬಳ್ಳಿ ಕರ್ರಗ ಆಗೇತ್ರಿ. ಹಿಂಗಾದರ ಹೊಟ್ಟು ಕೈಗೆ ದಕ್ಕುವುದಿಲ್ಲ. ಅಲ್ಲದ ಇಳುವರಿನೂ ಕಡಿಮಿ ಬರತೈತಿ. ರೈತರ ಕಷ್ಟ ಕೇಳವರ ಯಾರ್ರೀ’ ಎಂದು ಲಕ್ಷ್ಮೇಶ್ವರದ ಶೇಂಗಾ ಬೆಳೆಗಾರ ನಿಂಗನಗೌಡ ಪಾಟೀಲರು ನೋವನ್ನು ತೋಡಿಕೊಂಡರು. ‘ಈ ವರ್ಷ ಅಕಾಲಿಕ ಮಳೆಗಾಲದಿಂದಾಗಿ ಎಲ್ಲ ಬೆಳೆಗಳಿಗೆ ಹತ್ತಾರು ರೋಗಗಳು ಬಂದು ರೈತರು ಸಂಕಷ್ಟದಲ್ಲಿದ್ದಾರೆ. ಕಾರಣ ಸರ್ಕಾರ ಕೂಡಲೇ ಅವರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಜೆಡಿಎಸ್‍ನ ಯುವ ಘಟಕದ ಮುಖಂಡ ವಿಜಯಕುಮಾರ ಆಲೂರ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.