ಭಾನುವಾರ, ಜೂನ್ 20, 2021
25 °C
ಜಿಮ್ಸ್‌ಗೆ ಹತ್ತು ವೆಂಟಿಲೇಟರ್‌, ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ: ಜಿಲ್ಲಾಧಿಕಾರಿ

Covid-19 | 100 ಹೆಚ್ಚುವರಿ ಹಾಸಿಗೆ: ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಬೆಟಗೇರಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ಅಲ್ಲಿಗೆ ದಾಖಲಿಸುವ ಮುನ್ನ ಮೂಲಸೌಲಭ್ಯಗಳ ಕುರಿತು ಪರೀಶಿಲಿಸಬೇಕು. ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆ, ಔಷಧ ನಿಯಂತ್ರಕರು, ಸಾರಿಗೆ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳ ಜತೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಟಗೇರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೋಂಕಿತರ ಚಿಕಿತ್ಸೆಗೆ ಮೇ 6ರಿಂದಲೇ ಬಳಸಿಕೊಳ್ಳಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಗುರುವಾರ 10 ವೆಂಟಿಲೇಟರ್‌ಗಳು ಬರಲಿದ್ದು, ಹೆಚ್ಚುವರಿ 30 ವೆಂಟಿಲೇಟರ್‌ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಗುರುವಾರ ಬರುವ 10 ವೆಂಟಿಲೇಟರ್‌ಗಳ ಕಾರ್ಯಾರಂಭಕ್ಕೆ ಬೇಕಿರುವ ಅಗತ್ಯದ ವ್ಯವಸ್ಥೆಯನ್ನು ತಕ್ಷಣವೇ ಮಾಡಿಟ್ಟುಕೊಳ್ಳಬೇಕು’ ಎಂದು ಸೂಚಿಸಿದರು. 

‘ಜಿಲ್ಲೆಯಲ್ಲಿ ಸದ್ಯಕ್ಕೆ ಹಾಸಿಗೆಗಳ ಕೊರತೆ ಇಲ್ಲ. ಆದರೂ ಜಿಮ್ಸ್‌ನಲ್ಲಿ ವಾರಂತ್ಯದ ವೇಳೆಗೆ ಹೆಚ್ಚುವರಿಯಾಗಿ 100 ಹಾಸಿಗೆಗಳನ್ನು ಸಿದ್ಧಗೊಳಿಸಬೇಕು. ತಾಲ್ಲೂಕು ಆಸ್ಪತ್ರೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಒಟ್ಟು 240 ಹಾಸಿಗೆಗಳು ಲಭ್ಯವಿದ್ದು, 100 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ಸೋಂಕಿತರು ಮೃತಪಟ್ಟರೆ ನಿಯಮದ ಅನುಸಾರ ಕೈಗೊಳ್ಳಬೇಕಾದ ಕ್ರಮಗಳೊಂದಿಗೆ ಮೃತದೇಹವನ್ನು ಆದಷ್ಟು ಬೇಗ ಸಂಬಂಧಿಕರಿಗೆ ಹಸ್ತಾಂತರಿಸಬೇಕು. ಶವಸಂಸ್ಕಾರಕ್ಕೆ ಮಾಡಬೇಕಾದ ಸಿದ್ಧತೆ ಹಾಗೂ ವಾಹನ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು. ಎಂಎಸಿ ಸಮಿತಿಯಿಂದ ವರದಿ ಪಡೆದು ಜಿಲ್ಲಾ ಸಮೀಕ್ಷಣಾಧಿಕಾರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿಯೂ ನಡೆಯುವಂತೆ ನಿಗಾವಹಿಸಬೇಕು’ ಎಂದು ತಿಳಿಸಿದರು.

‘ಸೋಂಕಿತರ ಚಿಕಿತ್ಸೆಗೆ ಬೇಕಾಗುವ ಔಷಧಿ ಹಾಗೂ ಇತರೆ ಸಾಮಗ್ರಿಗಳ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಅಗತ್ಯವಾಗಿ ಬೇಕಿರುವ ಸಾಮಗ್ರಿಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ನಿಗದಿತ ಸಮಯದೊಳಗೆ ಪ್ರಸ್ತಾವ ಸಲ್ಲಿಸಬೇಕು. ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವಿರ್‌ ಲಸಿಕೆಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತುರ್ತು ಚಿಕಿತ್ಸೆ ಅಗತ್ಯವಿದ್ದ ಸೋಂಕಿತರನ್ನು ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

‘ಅವಳಿ ನಗರದ ಕೈಗಾರಿಕೋದ್ಯಮಿಯೊಬ್ಬರು 60 ಸಿಲಿಂಡರ್‌ಗಳನ್ನು ಒದಗಿಸಲು ಮುಂದೆ ಬಂದಿದ್ದು, ಅದೇರೀತಿ ಜಿಲ್ಲೆಯ ಇತರ ಉದ್ಯಮಿಗಳಿಂದ ಸಿಲಿಂಡರ್‌ಗಳನ್ನು ಪಡೆಯಲು ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಡಿಎಚ್‌ಒ ಡಾ. ಸತೀಶ್‌ ಬಸರಿಗಿಡದ ಇದ್ದರು.

ಆಮ್ಲಜನಕ: ನಿಗಾ ವಹಿಸಲು ಸಲಹೆ
‘ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಆಮ್ಲಜನಕದ ಕೊರತೆ ಇಲ್ಲ. ಆದರೂ ಈ ಬಗ್ಗೆ ನಿರ್ಲಕ್ಷ್ಯ ಮಾಡದೇ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಎಂ. ಸುಂದರೇಶ್‌ ಬಾಬು ಸೂಚಿಸಿದರು.

‘ಆಮ್ಲಜನಕದ ದಾಸ್ತಾನಿನಲ್ಲಿ ಕೊರತೆ ಉಂಟಾಗದಂತೆ ಸಾಕಷ್ಟು ಮೊದಲೇ ಗಮನಹರಿಸಬೇಕು. ಆಮ್ಲಜನಕ ಟ್ಯಾಂಕ್‌ ಮೇಲುಸ್ತುವಾರಿ ನೋಡಿಕೊಳ್ಳಲು ನೋಡಲ್ ಅಧಿಕಾರಿಯನ್ನು ನೇಮಿಸಿ, ಭದ್ರತೆ ಒದಗಿಸಬೇಕು’ ಎಂದು ತಿಳಿಸಿದರು.

***

ಪ್ರಯೋಗಾಲಯಕ್ಕೆ ಅಗತ್ಯವಿರುವ ಟೆಕ್ನಿಷಿಯನ್ ಹಾಗೂ ಡೇಟಾ ಎಂಟ್ರಿ ಸಿಬ್ಬಂದಿಯನ್ನು ಒದಗಿಸಲಾಗುವುದು. ಅವರಿಂದ ಕೋವಿಡ್‌ ಪರೀಕ್ಷಾ ವರದಿಗಳನ್ನು ಶೀಘ್ರವೇ ಒದಗಿಸಬೇಕು.
-ಭರತ್‌ ಎಸ್‌., ಜಿಲ್ಲಾ ಪಂಚಾಯ್ತಿ ಸಿಇಒ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.