ಭಾನುವಾರ, ಆಗಸ್ಟ್ 14, 2022
28 °C
ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚನೆ

ಬೆಳೆ ವಿಮೆ; ರೈತರಿಗೆ ತಿಳಿವಳಿಕೆ ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಕೃಷಿ ಅಭಿಯಾನ-2021ರ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರು ಬೆಳೆ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಬಂದಾಗ ಅಧಿಕಾರಿಗಳು ಬೆಳೆ ವಿಮೆ ಮಾಡಿಸುವಂತೆ ತಿಳಿವಳಿಕೆ ನೀಡಬೇಕು. ಬೆಳೆದ ಬೆಳೆಗಳಿಗೆ ಮಾತ್ರ ಬೆಳೆ ವಿಮೆ ಕಂತು ಪಾವತಿಸುವಂತೆ ತಿಳಿಸಬೇಕು. ಬೆಳೆಯು ಮಳೆ ಆಶ್ರಿತವೋ ಅಥವಾ ನೀರಾವರಿಯೋ ಎಂಬುದನ್ನು ಪರಿಶೀಲಿಸಿಕೊಂಡು ನೋಂದಾಯಿಸುವಂತೆ ತಿಳಿಸಬೇಕು’ ಎಂದು ತಿಳಿಸಿದರು.

‘ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈತರ ಬೆಳೆ ವಿಮೆ ವಿವರಗಳನ್ನು ಸಮರ್ಪಕವಾಗಿ ದಾಖಲಿಸುವಂತೆ ನಿಗಾ ವಹಿಸಬೇಕು. ಕೃಷಿ ಅಭಿಯಾನದಡಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಪ್ರಚಾರ ವಾಹನದ ಮೂಲಕ ರೈತರಿಗೆ ತಿಳಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದೆ. ಇವುಗಳ ಖರೀದಿಗಾಗಿ ರೈತರಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಖರೀದಿ ಸಂದರ್ಭದಲ್ಲಿ ಜನದಟ್ಟಣೆ ಆಗದಂತೆ ನಿಗಾವಹಿಸಬೇಕು. ವಿಚಕ್ಷಣಾ ತಂಡಗಳು ನಿರಂತರವಾಗಿ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ, ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ನಿಗದಿಪಡಿಸಲಾದ ದರಗಳನ್ನು ಪ್ರದರ್ಶಿಸುವಂತೆ ಸೂಚಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರೆ ಪರವಾನಗಿ ರದ್ದುಪಡಿಸಬೇಕು’ ಎಂದು ಸೂಚಿಸಿದರು.

ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಮನಗೂಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಧರ ಕೋಟಿಮನಿ, ಕೃಷಿ ಇಲಾಖೆ ಉಪ ನಿರ್ದೇಶಕ ವೀರೇಶ ಹುನಗುಂದ, ರೇಷ್ಮೆ ಇಲಾಖೆ ಉಪನಿರ್ದೇಶಕ ಮಹಾದೇವಯ್ಯ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಫಿ, ತಾಲ್ಲೂಕು ಕೃಷಿ ಅಧಿಕಾರಿಗಳು, ಬ್ಯಾಂಕ್‌ ವ್ಯವಸ್ಥಾಪಕರು ಇದ್ದರು.

ಬೆಳೆ ವಿಮೆ: ಯಾವುದಕ್ಕೆ ಎಷ್ಟು?

‘ಪ್ರಸಕ್ತ ಸಾಲಿನಲ್ಲಿ ಮುಂಗಾರು ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮಳೆ ಆಶ್ರಿತ ಬೆಳೆಗಳಾದ ಹತ್ತಿ ಪ್ರತಿ ಎಕರೆಗೆ ₹870, ಮೆಕ್ಕೆಜೋಳ ₹405, ಈರುಳ್ಳಿ ₹1,417, ಶೇಂಗಾ ₹373, ಹೆಸರು ₹235, ಸೂರ್ಯಕಾಂತಿ ಪ್ರತಿ ಎಕರೆಗೆ ₹284 ಬೆಳೆ ವಿಮೆ ನಿಗದಿಪಡಿಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ತಿಳಿಸಿದರು.

‘ನೀರಾವರಿ ಬೆಳೆಗಳಾದ ಹತ್ತಿ ಪ್ರತಿ ಎಕರೆಗೆ ₹1,356, ಮೆಕ್ಕೆಜೋಳ ₹405, ಈರುಳ್ಳಿ ₹1,518, ಶೇಂಗಾ ₹462, ಮೆಣಸಿನಕಾಯಿ ₹1,437 ಹಾಗೂ ಟೊಮೊಟೊ ಪ್ರತಿ ಎಕರೆಗೆ ₹2,388 ಬೆಳೆ ವಿಮೆ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವಿವಿಧ ಬೆಳೆಗಳಿಗೆ ನಿಗದಿ ಅನುಸಾರ ರೈತರಿಗೆ ಸಾಲ ನೀಡಬೇಕು. ಬೆಳೆ ವಿಮೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಬ್ಯಾಂಕ್‌ ಅಧಿಕಾರಿಗಳು ಕ್ರಮ ವಹಿಸಬೇಕು.
ಭರತ್‌ ಎಸ್‌. ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.