ಸೋಮವಾರ, ಮೇ 16, 2022
29 °C
ಆರಂಭದಲ್ಲೇ ಪತ್ತೆ ಹಚ್ಚಿದರೆ ಹಿಡಿತ ಸಾಧನೆ: ವಿಶ್ವ ಮಧುಮೇಹ ದಿನದಲ್ಲಿ ಡಿಎಚ್‌ಒ ಡಾ. ಜಗದೀಶ್‌ ನುಚ್ಚಿನ ಅನಿಸಿಕೆ

ಮಧುಮೇಹ ನಿಯಂತ್ರಣ: ತಪಾಸಣೆಯೇ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಬಹಳಷ್ಟು ಜನರಿಗೆ ಮಧುಮೇಹದ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ 30 ವರ್ಷ ದಾಟಿದವರು ವರ್ಷದಲ್ಲಿ ಕನಿಷ್ಠ ಒಂದು ಬಾರಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಮುಂದೆ ಆಗಬಹುದಾದ ತೊಂದರೆ ತಡೆಗಟ್ಟಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ ನುಚ್ಚಿನ ತಿಳಿಸಿದರು.

ವಿಶ್ವ ಮಧುಮೇಹ ದಿನದ ಅಂಗವಾಗಿ ನಗರದ ರೈಲ್ವೆ ಕಮ್ಯುನಿಟಿ ಹಾಲ್‌ನಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಮಧುಮೇಹ ಅರಿವು ಮತ್ತು ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯೋಗಾಸನದ ಮಹತ್ವ ಹಾಗೂ ಅಸಾಂಕ್ರಾಮಿಕ ರೋಗಗಳ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ವರ್ಷದಲ್ಲಿ ಸರಿಸುಮಾರು ಒಂದು ಕೋಟಿ ಜನರು ಮರಣ ಹೊಂದುತ್ತಿದ್ದು, ಇವರಲ್ಲಿ 67 ಲಕ್ಷ ಜನರು ಅಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಒಂದು ಸಾವಿರ ಜನಸಂಖ್ಯೆಯಲ್ಲಿ ಸುಮಾರು 67 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಭಾರತ ಈಗ ಮಧುಮೇಹದ ರಾಜಧಾನಿಯಾಗಿದೆ. ತಂಬಾಕು ಸೇವನೆ, ಅತಿಯಾದ ಮದ್ಯಪಾನ, ಅಹಿತಕರ ಆಹಾರ ಸೇವನೆ, ದೈಹಿಕ ಚಟುವಟಿಕೆಗಳಿಲ್ಲದಿರುವುದೇ ಅಸಾಂಕ್ರಾಮಿಕ ಕಾಯಿಲೆಗಳಿಗೆ ಮುಖ್ಯ ಕಾರಣ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯನ್ನು ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್‌ಸಿಡಿ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ, ಔಷಧ ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಲ್ಲಿಕಾರ್ಜುನ ಎಸ್. ಉಪ್ಪಿನ ಮಾತನಾಡಿ, ‘ನಿಯಮಿತ ವ್ಯಾಯಾಮ, ಯೋಗ, ಹಿತಕರ ಆಹಾರ ಸೇವನೆ ಮತ್ತು ದುಷ್ಚಟಗಳಿಂದ ದೂರವಿದ್ದರೆ ಅಸಾಂಕ್ರಾಮಿಕ ರೋಗಗಳಿಂದ ಆಗುತ್ತಿರುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು’ ಎಂದು ತಿಳಿಸಿದರು.

ರೈಲ್ವೆ ಆಸ್ಪತ್ರೆಯ ಡಾ. ಕವಿರಾಜ ಕೊಟ್ಟೂರ ಇನ್ಸುಲಿನ್‍ನ ಮಹತ್ವ ತಿಳಿಸಿ, ‘60 ವರ್ಷ ದಾಟಿದ ಪ್ರತಿಯೊಬ್ಬರೂ ವರ್ಷದಲ್ಲಿ ಕನಿಷ್ಠ 4 ಬಾರಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.

ಡಾ. ಅಶೋಕ ಜಿ. ಮತ್ತಿಗಟ್ಟಿ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯೋಗಾಸನದ ಮಹತ್ವದ ಕುರಿತು ತಿಳಿಸಿಕೊಟ್ಟರು.

ರೈಲ್ವೆ ವಿಭಾಗದ ಕುಟುಂಬದವರಿಗೆ ಮಧುಮೇಹ, ರಕ್ತದೊತ್ತಡ ತಪಾಸಣೆ ಮಾಡಲಾಯಿತು. ತಂಬಾಕು ವ್ಯಸನಿಗಳಿಗೆ ಉಚಿತ ಆಪ್ತಸಮಾಲೊಚನೆ ಮತ್ತು ಆರೋಗ್ಯ ಶಿಕ್ಷಣ ನೀಡಲಾಯಿತು.

ಸಹಾಯಕ ವಿಭಾಗೀಯ ಎಂಜಿನಿಯರ್‌ ಬಶೀರ ಅಡೇನ, ಡಾ. ರಾಜೇಂದ್ರ ಸಿ. ಬಸರೀಗಿಡದ, ಡಾ. ರವಿ ಮ. ಕಡಗಾವಿ, ರಮೇಶ ಅರಹುಣಶಿ, ವಿಠ್ಠಲ ನಾಯಕ್, ಬಸವರಾಜ ನಾಯಕ್, ಫಯಾಜ್ ಮಕಾನದಾರ ಇದ್ದರು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಮಾತನಾಡಿ, ‘ಅಸಾಂಕ್ರಾಮಿಕ ರೋಗಗಳಲ್ಲಿ ಮಧುಮೇಹ ಪ್ರಮುಖವಾಗಿದ್ದು ನಮ್ಮ ದೇಶದಲ್ಲಿ ಬಹಳಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ’ ಎಂದು ಹೇಳಿದರು.

‘ಪ್ರಸ್ತುತ ನಮ್ಮ ಜೀವನಶೈಲಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಇಲ್ಲದೇ ಇರುವುದು, ತಂಬಾಕು ಹಾಗೂ ಮದ್ಯ ಸೇವನೆಯಿಂದಾಗಿ ಮಧುಮೇಹ ಹೆಚ್ಚುತ್ತಿದ್ದು, ಇದನ್ನು ತಡೆಯುವುದು ನಮ್ಮ ಕೈಯಲ್ಲೇ ಇದೆ. ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಿಂದ ಬದುಕಬೇಕು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು