ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹದಗೆಟ್ಟ ರಸ್ತೆಗಳು: ಸಂಚಾರಕ್ಕೆ ಸಂಚಕಾರ

ಹಿಂದುಳಿದ ತಾಲ್ಲೂಕು ಹಣೆಪಟ್ಟೆಗೆ ರಸ್ತೆಗಳೇ ನಿದರ್ಶನ
ನಿಂಗಪ್ಪ ಹಮ್ಮಿಗಿ
Published 20 ಜೂನ್ 2024, 6:58 IST
Last Updated 20 ಜೂನ್ 2024, 6:58 IST
ಅಕ್ಷರ ಗಾತ್ರ

ಶಿರಹಟ್ಟಿ: ರಾಜ್ಯದಲ್ಲಿಯೇ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕು ಕೇಂದ್ರವು ಇಲ್ಲಗಳ ಮಧ್ಯಯೇ ಸಾಗುತ್ತಿದೆ. ಮೂಲ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕಿನ ಜನರು ಸುಗಮ ಸಂಚಾರವಿಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ.

ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದು, ಸಾರ್ವಜನಿಕರ ಶಾಪಕ್ಕೆ ಗುರಿಯಾಗಿದ್ದಾರೆ.

ಹದಗೆಟ್ಟ ಗ್ರಾಮೀಣ ರಸ್ತೆಗಳು: ತಾಲ್ಲೂಕಿನ ತಂಗೋಡ, ಕೊಗನೂರು, ತೊಳಲಿ, ಚವಡಾಳ, ಗೋವನಕೊಪ್ಪ, ಅಲಗಿಲವಾಡ, ವಡವಿ, ಸುಗನ, ಮಾಗಡಿ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶದಿಂದ ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು ಬಿದ್ದು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.

ಓವರ್ ಲೋಡ್ ವಿಥೌಟ್ ಪಾಸ್: ತಾಲ್ಲೂಕಿನಲ್ಲಿ ಹೆಚ್ಚಾಗಿರುವ ಕ್ರಷರ್‌ಗಳ ಹಾವಳಿ, ಅಕ್ರಮ ಮರಳು ದಂದೆಯಿಂದ ಓವರ್ ಲೋಡ್ ಹೊತ್ತ ಟಿಪ್ಪರ್‌ಗಳು ಹಗಲಿರುಳು ಸಂಚರಿಸುತ್ತಿವೆ. ಮಣಬಾರವನ್ನು ಹೊತ್ತು ಸಾಗುವ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಮನೆ ಮಾಡಿವೆ. ಕೊಗನೂರು ಗ್ರಾಮದ ರಸ್ತೆಯಲ್ಲಂತೂ ಮೊಣಕಾಲದವರೆಗೆ ಗುಂಡಿಗಳು ಬಿದ್ದರೂ ಯಾರೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ದುರಸ್ತಿ ಮಾಡುವ ಗೋಜಿಗೆ ಹೋಗುತ್ತಿಲ್ಲ.

ಅಭಿವೃದ್ಧಿ ಮರೀಚಿಕೆ: ತಾಲ್ಲೂಕಿನಲ್ಲಿ ಅಲ್ಪಸ್ವಲ್ಪ ಉಳಿದ ಡಾಂಬರ್ ರಸ್ತೆಗಳು ಮಳೆ ಹಾಗೂ ಟಿಪ್ಪರ್ ಸಂಚಾರದಿಂದ ಕಿತ್ತು ಹೋಗಿವೆ. ಪ್ರಸ್ತುತ ಮಳೆಗಾಲ ಇರುವುದರಿಂದ ಮಳೆ ನೀರು ರಸ್ತೆಯ ಗುಂಡಿಗಳಲ್ಲಿ ಶೇಖರಣೆಗೊಂಡು ಅದನ್ನು ಇಮ್ಮಡಿಗೊಳಿಸುತ್ತಿದೆ. ಹೀಗೆ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಕಿತ್ತು ಹೋಗಿ ಕಚ್ಚಾ ರಸ್ತೆಗಳಾಗಿ ಮಾರ್ಪಾಡಾಗಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ರಸ್ತೆಯಲ್ಲಿಯೇ ನಿತ್ಯ ಸಂಚರಿಸಿದರೂ ಜಾಣಕುರುಡುತನ ಪ್ರದರ್ಶನ ಮಾಡುತ್ತಿರುವುದು ಅವರ ಬೇಜವ್ದಾರಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ರಸ್ತೆ ಅಭಿವೃದ್ಧಿ ಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸಿಲ್ಲ. ಶೀಘ್ರದಲ್ಲಿ ದುರಸ್ತಿ ಮಾಡಿದರೆ ಅನುಕೂಲ ಎಂದು ತಂಗೋಡ ಗ್ರಾಮಸ್ಥರು ಆರೋಪಿಸಿದರು.

ಅನುದಾನ ಬೇಕು: ತಾಲ್ಲೂಕಿನಲ್ಲಿನ ರಸ್ತೆಗಳು ಗುಣಮಟ್ಟದ ರಸ್ತೆಗಳಾಗಿ ನಿರ್ಮಾಣ ಮಾಡಲು ಅನುದಾನ ಅತೀ ಅವಶ್ಯಕವಾಗಿದ್ದು, ಗ್ರಾಮ ಮಟ್ಟದಿಂದ ಮತಕ್ಷೇತ್ರದ ಜನಪ್ರತಿನಿಧಿಗಳವರೆಗೆ ರಸ್ತೆಗಳ ಅಭಿವೃದ್ದಿಗೆ ಟೊಂಕ ಕಟ್ಟಿ ನಿಲ್ಲಬೇಕು. ರಸ್ತೆ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಕೆ ಮಾಡಬೇಕು. ಅಂದಾಗ ತಾಲ್ಲೂಕಿನ ರಸ್ತೆಗಳು ಗುಣಮಟ್ಟದ ಮಾದರಿ ರಸ್ತೆಯಾಗಿ ನಿರ್ಮಾಣವಾಗಲು ಸಾಧ್ಯ ಎನ್ನುವುದು ಸಾರ್ವಜನಿಕರ ಕಳಕಳಿ.

ಚುನಾವಣೆ ಸಂದರ್ಭದಲ್ಲಿ ಮಾತ್ರ ಊರಿಗೆ ಬರುವ ಜನಪ್ರತಿನಿಧಿಗಳು ನಂತರ ಈ ಕಡೆ ತಲೆ ಹಾಕುವುದೇ ಇಲ್ಲ. ರಸ್ತೆ ಪೂರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸುವವರಿಲ್ಲ
ಬಸಪ್ಪಜ್ಜ, ಕೊಗನೂರು ಗ್ರಾಮಸ್ಥ
ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಈಗಾಗಲೇ ಬಿಡುಗಡೆಯಾದ ಅನುದಾನ ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು
ಡಾ.ಚಂದ್ರು ಲಮಾಣಿ, ಶಾಸಕ

ದೂರ ಉಳಿದ ಆರ್‌ಟಿಒ ಅಧಿಕಾರಿಗಳು

ಖನಿಜ ಸಂಪತ್ತು ಒಳಗೊಂಡಿರುವ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಓವರ್‌ಲೋಡ್ ಹೊತ್ತ ಟಿಪ್ಪರ್‌ಗಳು ರಸ್ತೆ ಮೇಲೆ ನಿತ್ಯ ಸಂಚರಿಸುತ್ತಿವೆ. ತಾಲ್ಲೂಕಿನಲ್ಲಿ ಇದುವರೆಗೆ ಆರ್‌ಟಿಒ ಅಧಿಕಾರಿಗಳು ಸಂಚರಿಸಿ ನಿಯಮ ಬಾಹಿರವಾಗಿ ಸಂಚರಿಸುವ ಯಾವೊಂದು ವಾನಹದ ಮೇಲೆ ಪ್ರಕರಣ ಇಲ್ಲವೇ ದಂಡ ಹಾಕಿದ ಉದಾಹರಣೆಗಳು ಇಲ್ಲ. ಹೆಚ್ಚು ಟನ್‌ಗಳ ಮಟಿರಿಯಲ್ (ಎಂಸ್ಯಾಂ ಜೆಲ್ಲಿ ಮರಳು ಪಿಸ್ಯಾಂಡ್ ಮಣ್ಣು) ಹೊತ್ತು ವಾಹನಗಳು ರಾಜಾರೋಷವಾಗಿ ಸಂಚರಿಸಿದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಶಿರಹಟ್ಟಿ ತಾಲ್ಲೂಕಿನಲ್ಲಿ ಆರ್‌ಟಿಒ ಮೂಲಕ ಸಂಗ್ರಹವಾಗುವ ಹಣಕ್ಕೆ ಕನ್ನ ಬಿದ್ದಂತಾಗಿದೆ. ಈ ಮೂಲಕ ಸರ್ಕಾರಕ್ಕೆ ತುಂಬಲಾರದಷ್ಟು ನಷ್ಟ ಆಗುತ್ತಿದೆ ಎಂಬುದು ಸಾರ್ವಜನಿಕರ ಅಹವಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT