ಗುರುವಾರ , ಸೆಪ್ಟೆಂಬರ್ 19, 2019
22 °C
ಟೈರ್‌ಗೆ ಬೆಂಕಿ, ಕಪ್ಪು ಬಟ್ಟೆ ಪ್ರದರ್ಶನ; ಮೋದಿ, ಅಮಿತ್‌ ಶಾ ವಿರುದ್ಧ ಆಕ್ರೋಶ

ಡಿಕೆಶಿ ಬಂಧನ; ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

Published:
Updated:
Prajavani

ಗದಗ: ಶಾಸಕ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಜಿಲ್ಲೆಯಾದ್ಯಂತ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌. ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

‘ಡಿ.ಕೆ.ಶಿವಕುಮಾರ ಅವರ ಬಂಧನ ದುರದೃಷ್ಟಕರ. ಬಿಜೆಪಿ ಸೇಡಿನ ರಾಜಕಾರಣ ನಡೆಸಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ವಿರುದ್ಧ ಧಿಕ್ಕಾರ ಕೂಗಿದರು.

ಗದುಗಿನಲ್ಲಿ ಯುವ ಕಾಂಗ್ರೆಸ್‌ ಸದಸ್ಯರು ಕಾಟನ್ ಸೇಲ್ ಸೊಸೈಟಿ ಆವರಣದಿಂದ ಹಳೆಯ ಜಿಲ್ಲಾಧಿಕಾರಿ ವೃತ್ತ, ಭೂಮರಡ್ಡಿ ವೃತ್ತ, ರೋಟರಿ ವೃತ್ತದ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಯಡಿಯೂರಪ್ಪ, ಅಮಿತ್‌ ಶಾ ಮತ್ತು ಮೋದಿ ಅವರ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಡಿ.ಕೆ. ಶಿವಕುಮಾರ ಅವರನ್ನು ಬಂಧಿಸಿದ್ದಾರೆ. ತನಿಖೆಗೆ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದರೂ ಅವರನ್ನು ವಿನಾಕಾರಣ ಬಂಧಿಸಲಾಗಿದೆ. ರಾಜಕೀಯ ದ್ವೇಷದಿಂದ ಈ ರೀತಿ ಮಾಡುತ್ತಿರುವುದು ಸರಿಯಲ್ಲ’ ಎಂದು ಜಿ.ಎಸ್‌.ಪಾಟೀಲ ಹೇಳಿದರು.

‘ಡಿ.ಕೆ. ಶಿವಕುಮಾರ ಅವರು ಕಾಂಗ್ರೆಸ್‍ಗೆ ದೊಡ್ಡ ಶಕ್ತಿಯಾಗಿದ್ದರು. ಕೇಂದ್ರ ಸರ್ಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಹಣಿಯುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಸ್.ಎಸ್. ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ಮೇಟಿ, ಸಿದ್ದು ಪಾಟೀಲ, ಮೋಹನ ದುರಗಣ್ಣವರ, ಗುರಣ್ಣ ಬಳಗಾನೂರ, ಬಸವರಾಜ ಕಡೆಮನಿ, ವಿದ್ಯಾಧರ ದೊಡ್ಡಮನಿ, ವಿ.ಬಿ. ಸೋಮನಕಟ್ಟಿಮಠ, ಅಶೋಕ ಮಂದಾಲಿ, ಉಮರ ಫಾರೂಖ್ ಹುಬ್ಬಳ್ಳಿ, ನವೀನ ಭಂಡಾರಿ, ಸಂಗಮೇಶ ಕೆರಕಲಮಟ್ಟಿ ಇದ್ದರು.

ರೋಣದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

ರೋಣ: ಡಿ.ಕೆ. ಶಿವಕುಮಾರ ಬಂಧನ ಖಂಡಿಸಿ ರೋಣ ಬ್ಲಾಕ್ ಕಾಂಗ್ರೆಸ್ ಹಾಗೂ ಯೂಥ್‌ ಕಾಂಗ್ರೆಸ್ ವತಿಯಿಂದ ಬುಧವಾರ ಪಟ್ಟಣದ ಸೂಡಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ಕಪ್ಪು ಬಟ್ಟೆ ಪ್ರದರ್ಶಿಸಿ  ಪ್ರತಿಭಟನೆ ನಡೆಸಲಾಯಿತು.

‘ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ. ಮೋದಿ ಮತ್ತು ಅಮಿತ್‌ ಶಾ ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಮಿಥುನ್.ಜಿ.ಪಾಟೀಲ ದೂರಿದರು.

ಪ್ರಭು ಮೇಟಿ, ಲಕ್ಷ್ಮಣ ಗೌಡಣ್ಣವರ, ಸಂಗು ನವಲಗುಂದ, ಮಂಜುನಾಥ ಹಾಳಕೇರಿ, ಮೌನೇಶ ಹಾದಿಮನಿ, ಅಪ್ಪು ಗಿರಡ್ಡಿ, ಅಜೀಜ್ ಯಲಿಗಾರ, ಶಫೀಕ್ ಮೂಗನೂರ ಇಸ್ಲಾಲ್ ಇಟಗಿ, ಅಸ್ಲಾಂ ಕೊಪ್ಪಳ ಸೇರಿದಂತೆ ಮತ್ತಿತರರು ಇದ್ದರು.

ಅಮಿತ್‌ ಶಾ ವಿರುದ್ಧ ಆಕ್ರೋಶ
ಗಜೇಂದ್ರಗಡ: ‘ಶಾಸಕ ಡಿ.ಕೆ.ಶಿವಕುಮಾರ ಅವರ ಬಂಧನವು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಗದರ್ಶನದಲ್ಲಿ ನಡೆದಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಪಾಟೀಲ ದೂರಿದರು.

ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ನರೇಗಲ್ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಘಟಕದ ವತಿಯಿಂದ ಡಿ.ಕೆ ಶಿವಕುಮಾರ್‌ ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

‘ಬಿಜೆಪಿಯವರು ಜನ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಹಣ ಬಲದಿಂದ ಅಧಿಕಾರಕ್ಕೆ ಬಂದಿದ್ದಾರೆ. ಕೇಂದ್ರ ಸರ್ಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ನ ಪ್ರಭಾವಿ ಮುಖಂಡರನ್ನು ಹಣಿಯಲು ಮುಂದಾಗಿದೆ’ ಎಂದರು.

‘ಸದ್ಯ ದೇಶವು ತೀವ್ರ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ನೂರಾರು ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ತಲುಪಿವೆ.  ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ. ದೇಶದ ಆರ್ಥಿಕತೆ ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳದ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ದುರ್ಗಾ ವೃತ್ತದಿಂದ ಆರಂಭವಾದ ಪ್ರತಿಭಟನೆಯು, ಜೋಡು ರಸ್ತೆ ಮೂಲಕ ಕಾಲಕಾಲೇಶ್ವರ ವೃತ್ತಕ್ಕೆ ಬಂದು, ಅಲ್ಲಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು.ಮೋದಿ, ಅಮಿತ್‌ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಅವರ ಮೂಲಕ ಮನವಿ ಸಲ್ಲಿಸಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಶಶಿಧರ ಹೂಗಾರ, ವೀರಣ್ಣ ಸೊನ್ನದ, ಚಂಬಣ್ಣ ಚವಡಿ, ಎಚ್.ಎಸ್.ಸೋಂಪುರ, ಶರಣಪ್ಪ ಬೆಟಗೇರಿ, ಶ್ರೀಕಾಂತ ಅವಧೂತ, ಅಪ್ಪು ಮತ್ತಿಕಟ್ಟಿ, ರಾಜು ಸಾಂಗ್ಲೀಕರ, ವಿ.ಎಸ್.ಸೋಮನಕಟ್ಟಿಮಠ, ಉಮೇಶ ರಾಠೋಡ, ದಾದು ಹಣಗಿ, ಹಸನ ತಟಗಾರ, ಮುತ್ತಣ್ಣ ಮ್ಯಾಗೇರಿ, ಪ್ರಶಾಂತ ರಾಠೋಡ, ಶ್ರೀಧರ ಗಂಜಿಗೌಡ್ರ, ಶ್ರೀಧರ ಬಿದರಳ್ಳಿ, ಶರಣಪ್ಪ ಪೂಜಾರ, ಅಂದಪ್ಪ ಬಿಚ್ಚೂರ, ಬಸವರಾಜ ಚನ್ನಿ, ಸುರೇಶಗೌಡ ಪಾಟೀಲ, ಅನಿಲ ಕರ್ಣೇ ಇದ್ದರು.

ಪ್ರಜಾಪ್ರಭುತ್ವ ವಿರೋಧಿ ಕ್ರಮ
ಲಕ್ಷ್ಮೇಶ್ವರ: ಡಿ.ಕೆ. ಶಿವಕುಮಾರ ಅವರ ಬಂಧನ ಖಂಡಿಸಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟರ ಅವರ ಮೂಲಕ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು. ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಪಿ. ಬಳಿಗಾರ, ಚೆನ್ನಪ್ಪ ಜಗಲಿ, ಜಯಕ್ಕ ಕಳ್ಳಿ, ನೀಲಪ್ಪ ಶೆರಸೂರಿ, ಎಸ್.ಕೆ. ಹವಾಲ್ದಾರ ಮಾತನಾಡಿ ‘ಡಿ.ಕೆ. ಶಿವಕುಮಾರ ಅವರು ಇ.ಡಿ ವಿಚಾರಣೆಯನ್ನು ಎದುರಿಸಲು ಸಿದ್ಧರಿದ್ದರೂ ಅವರನ್ನು ಬಂಧಿಸಿರುವುದು ಕಾನೂನುಬಾಹಿರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ಕ್ರಮವಲ್ಲ’ ಎಂದು ಆರೋಪಿಸಿದರು.
ಅಮರೇಶ ತೆಂಬದಮನಿ, ನೀಲಪ್ಪ ಪಡಗೇರಿ, ಕೆ.ಓ. ಹೂಲಿಕಟ್ಟಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಅಶೋಕಯ್ಯ ಮುಳಗುಂದಮಠ, ಅನ್ವರ್‍ಸಾಬ್ ಹವಾಲ್ದಾರ, ಶರಣು ಗೋಡಿ, ಸಿಕಂದರಭಾಷಾ ಕಣಕೆ, ವಿಜಯ ಕರಡಿ, ಪ್ರಕಾಶ ಕೊಂಚಿಗೇರಿಮಠ, ಬಸವರೆಡ್ಡಿ ಹನಮರೆಡ್ಡಿ, ಫಕ್ಕೀರೇಶ ಮ್ಯಾಟಣ್ಣವರ, ಮಂಜುನಾಥ ಸೀತಮ್ಮನವರ, ಮಹಾದೇವಪ್ಪ ಅಣ್ಣಿಗೇರಿ, ವೀರಣ್ಣ ನೂಲ್ವಿ, ಮನೋಹರ ಕರ್ಜಗಿ, ಯಲ್ಲಪ್ಪ ತಳವಾರ, ರಮೇಶ ಬಾರ್ಕಿ, ಸುರೇಶ ಬೀರಣ್ಣವರ, ಶಿವರಾಜಗೌಡ ಪಾಟೀಲ, ರಾಜು ವಾಲಿಕಾರ, ಬಿ.ವೈ. ಮಲ್ಲರೆಡ್ಡಿ ಇದ್ದರು.
 

ಟೈರ್‌ಗೆ ಬೆಂಕಿ; ಪ್ರತಿಭಟನೆ
ಮುಳಗುಂದ: ಡಿ.ಕೆ.ಶಿವಕುಮಾರ ಅವರ ಬಂಧನ ಖಂಡಿಸಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣ ಪಂಚಾಯ್ತಿ ಹತ್ತಿರ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

‘ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ’ ಎಂದು ಮುಳಗುಂದ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಸವರಾಜ ಸುಂಕಾಪೂರ ಆರೋಪಿಸಿದರು. ಯೂಥ್‌ ಕಾಂಗ್ರೆಸ್ ಸಮಿತಿಯ ಮಂಜು ಶಿರಹಟ್ಟಿ, ಉಪಾಧ್ಯಕ್ಷ ಖಲಂದರ ಗಾಡಿ, ವಿಜಯ ನೀಲಗುಂದ, ಎನ್.ಆರ್.ದೇಶಪಾಂಡೆ, ಇಮಾಮಸಾಬ ಶೇಖ, ಬಸವರಾಜ ಹಾರೋಗೇರಿ, ಎಸ್.ಸಿ.ಬಡ್ನಿ, ಮಹಾಂತೇಶ ನೀಲಗುಂದ, ದಾವುದ ಜಮಾಲಸಾಬನವರ, ವಿರೇಂದ್ರ ಹೂಲಿ, ಹನಮಂತ ಮ್ಯಾಗೇರಿ, ಅಲ್ಲಾಭಕ್ಷ ಹೊಂಬಳ, ಖಾನಸಾಬ ಲಾಡಮ್ಮನವರ ಇದ್ದರು.

ಶಿರಹಟ್ಟಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಶಿರಹಟ್ಟಿ:‘ದ್ವೇಷದ ರಾಜಕೀಯ ಮಾಡುತ್ತಿರುವ ರಾಜ್ಯ ಹಾಗೂ ಕೇಂದ್ರದ  ಬಿಜೆಪಿ ಮುಖಂಡರ ಧೋರಣೆ ಖಂಡನೀಯ. ಅಧಿಕಾರಿಗಳ ಮೂಲಕ ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಬಗ್ಗುಬಡಿಯಲು ಹವಣಿಸುತ್ತಿರುವ ಅವರ ಪ್ರಯತ್ನ ಫಲಿಸದು’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಮಂಜು ಗಂಟಿ ಹೇಳಿದರು.

ಡಿ.ಕೆ ಶಿವಕುಮಾರ ಬಂಧನ ವಿರೋಧಿಸಿ ಬುಧವಾರ ಇಲ್ಲಿನ ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ‘ಬಿಜೆಪಿ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದು, ಇದು ಆ ಪಕ್ಷದ ಮುಖಂಡರ ಹತಾಶೆ ತೋರಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ನಡೆದಿದೆ’ ಎಂದರು.

ವೈ.ಎಸ್‌ ಪಾಟೀಲ, ಮಂಜು ಗಂಟಿ, ಪರಮೇಶ ಪರಬ, ಹಮೀದ ಸನದಿ, ಬುಡನಶಾ ಮಕಾಂದರ, ಅಪ್ಪಣ್ಣ ಪಾಟೀಲ, ಅಜಮತಅಲಿ ಮಕಾಂದರ, ಮಾಬುಸಾಬ ಲಕ್ಷ್ಮೇಶ್ವರ, ಇಸಾಕ್‌ ಆದ್ರಳ್ಳಿ, ಅಶ್ರಫ್‌ಅಲಿ ಡಾಲಾಯತ, ಹೊನ್ನಪ್ಪ ಶಿರಹಟ್ಟಿ, ಮುಸ್ತಾಕ ಚೋರಗಸ್ತಿ, ಮಹಾಂತೇಶ ದಶಮನಿ, ದೇವಪ್ಪ ಬಟ್ಟೂರ, ಸಿಕಂದರ ಟಪಾಲ, ದೇವಪ್ಪ ಆಡೂರ, ಪ್ರಕಾಶ ರಡ್ಡೇರ, ಕುರುಮೂರ್ತಿ ಬಾರಬರ, ಬಾಬು ಮಾಚೇನಹಳ್ಳಿ, ಮುರುಗೇಶ ಆಲೂರ, ಮಂಜುನಾಥ ಹುಬ್ಬಳ್ಳಿ, ನಾರಾಯಣ ಚವ್ಹಾಣ ಇದ್ದರು.

‘ಸೇಡಿನ ರಾಜಕಾರಣಕ್ಕೆ ಡಿಕೆಶಿ ಬಲಿ‘
ಮುಂಡರಗಿ: ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕೊಪ್ಪಳ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
'ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇಲ್ಲ ಸಲ್ಲದ ಕಾರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮುಖಂಡರನ್ನು ವಿನಾಕಾರಣ ಬಂಧಿಸುತ್ತಿವೆ' ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆರೋಪಿಸಿದರು.

'ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ ಶಾ ಸರ್ಕಾರದ ಅಧೀನದಲ್ಲಿರುವ ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

'ದೇಶವು ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತವನ್ನು ಈಗ ಎದುರಿಸುತ್ತಿದೆ. ನೋಟು ರದ್ಧತಿ, ಜಿಎಸ್‌ಟಿ ಹೇರಿಕೆ ಮೊದಲಾದ ಅವೈಜ್ಞಾನಿಕ ಕ್ರಮಗಳಿಂದ ದೇಶನ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ದೇಶದ ಕೈಗಾರಿಕಾ ವಲಯ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಅದನ್ನು ಸುಧಾರಿಸುವ ಬದಲಾಗಿ ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ’  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಈರಣ್ಣ ನಾಡಗೌಡರ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮು ಕಲಾಲ, ಎ.ವೈ.ನವಲಗುಂದ, ರಾಜಾಭಕ್ಷಿ ಬೆಟಗೇರಿ, ಬಸವಂತಪ್ಪ ಹೊಸಮನಿ, ಮುಲ್ಲಾ, ಕೊಟ್ರೆಶ ಅಂಗಡಿ, ಎಸ್.ಡಿ.ಮಕಾಂದಾರ, ದೇವೇಂದ್ರಪ್ಪ ರಾಮೇನಹಳ್ಳಿ, ಮಾರುತಿ ಕವಲೂರ, ಅಶೋಕ ಹುಬ್ಬಳ್ಳಿ, ಮಾರುತಿ ಹೊಸಮನಿ, ವೀರೇಶ ಬೆಟಗೇರಿ, ಶರಣಪ್ಪ ಕುಬಸದ, ಎ.ಪಿ.ದಂಡಿ, ಮಾರುತಿ ಹೊಸಮನಿ ಇದ್ದರು.

Post Comments (+)