ಶುಕ್ರವಾರ, ಆಗಸ್ಟ್ 19, 2022
25 °C
ಬೇಡಿಕೆ ಈಡೇರಿಸುವವರೆಗೆ ಅಂಕಿ– ಅಂಶಗಳನ್ನು ಸರ್ಕಾರಕ್ಕೆ ನೀಡದಿರಲು ನಿರ್ಧಾರ

ಸಮಾನ ವೇತನಕ್ಕೆ ವೈದ್ಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಕೋವಿಡ್‌–19ನಂತಹ ಕಷ್ಟದ ಪರಿಸ್ಥಿತಿಯಲ್ಲೂ ಶ್ರದ್ಧೆಯಿಂದ ಕೆಲಸ ನಿರ್ವಹಿಸುತ್ತಿರುವ ವೈದ್ಯರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಒಂದು ವಾರದೊಳಗೆ ಈಡೇರಿಸದಿದ್ದರೆ, ಚಿಕಿತ್ಸೆ ನಿಲ್ಲಿಸಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಗದಗ ಶಾಖೆ ಅಧ್ಯಕ್ಷ ಡಾ. ಎಚ್‌.ಎಲ್.ಗಿರಡ್ಡಿ ಹೇಳಿದರು.

‘ವೈದ್ಯರ ವೇತನ ಪರಿಷ್ಕರಣೆ ಆಗುವವರೆಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸುತ್ತೇವೆ. ಕೋವಿಡ್‌ ರೋಗಿಗಳಿಗೂ ಚಿಕಿತ್ಸೆ ನೀಡುತ್ತೇವೆ. ಆದರೆ, ಈ ವೇಳೆ ಕೋವಿಡ್‌ ಪರೀಕ್ಷೆ ನಡೆಸಿದ ವರದಿಗಳ ಅಂಕಿ ಅಂಶಗಳನ್ನು ಸರ್ಕಾರಕ್ಕೆ ನೀಡುವುದಿಲ್ಲ. ಅದೇ ರೀತಿ, ಸರ್ಕಾರ ನಡೆಸುವ ಆನ್‌ಲೈನ್‌ ಅಥವಾ ಆಫ್‌ಲೈನ್‌ ಸಭೆಗಳಲ್ಲಿ ಭಾಗವಹಿಸುವುದಿಲ್ಲ. ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದ್ದು, ಅಷ್ಟರೊಳಗೆ ಸ್ಪಂದಿಸದಿದ್ದರೆ ವೈದ್ಯರೆಲ್ಲರೂ ಹೋರಾಟಕ್ಕೆ ಸಜ್ಜುಗೊಳ್ಳಲಿದ್ದಾರೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

‘ಕೋವಿಡ್‌ನಿಂದಾಗಿ ಈವರೆಗೆ 15 ಮಂದಿ ವೈದ್ಯರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ ಅನೇಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಕಷ್ಟ ಹಾಗೂ ಒತ್ತಡಗಳನ್ನು ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಸಂಘದ ಕಾರ್ಯದರ್ಶಿ ಡಾ. ಪ್ರಕಾಶ ಹೊಸಮನಿ ಮಾತನಾಡಿ, ‘ಮೆಡಿಕಲ್‌ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೂ ಸಮಾನ ವೇತನ ನೀಡಬೇಕು ಎಂಬುದು ನಮ್ಮ ಆಗ್ರಹ. ಈ ಬಗೆಯ ವೇತನ ತಾರತಮ್ಯ ನೀಗಿಸುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೆ ನಮ್ಮ ಬೇಡಿಕೆ ಈಡೇರಿಸಿಲ್ಲ’ ಎಂದು ಹೇಳಿದರು.

‘ಆರೋಗ್ಯ ಸೇವೆಯಲ್ಲಿ ದೇಶದ ಅಗ್ರ ಐದು ರಾಜ್ಯಗಳಲ್ಲಿ ಕರ್ನಾಟಕ ಒಂದು ಎಂಬ ಹೆಗ್ಗಳಿಕೆ ಹೊಂದಿದೆ. ಇಂತಹ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸಿಜಿಎಚ್‌ಎಸ್‌ ವೇತನ ನೀಡಬೇಕು. ಇದನ್ನು ನಾವೇನೂ ಹೊಸದಾಗಿ ಕೇಳುತ್ತಿಲ್ಲ. ಈಗಾಗಲೇ ದೇಶದ 18 ರಾಜ್ಯಗಳಲ್ಲಿ ವೈದ್ಯರಿಗೆ ಸಿಜಿಎಚ್‌ಎಸ್‌ ವೇತನ ನೀಡಲಾಗುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು; ಇಲ್ಲವಾದರೆ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

‘ಕೊರೊನಾ ವಾರಿಯರ್ಸ್‌ ಆಗಿ ದುಡಿಯುತ್ತಲೇ ಕೋವಿಡ್‌ನಿಂದ ಮೃತಪಟ್ಟ ವೈದ್ಯರ ಕುಟುಂಬಕ್ಕೆ ಈವರೆಗೆ ಪರಿಹಾರಧನ ನೀಡಿಲ್ಲ. ಈ ನೋವು ಕೂಡ ವೈದ್ಯ ಸಮುದಾಯವನ್ನು ಬಾಧಿಸುತ್ತಿದೆ’ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಸತೀಶ್‌ ಬಸರಿಗಿಡದ, ಖಜಾಂಚಿ ಡಾ. ಅನ್ವರ್‌ ಸಾಮುದ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು