ಭಾನುವಾರ, ಮೇ 22, 2022
21 °C
ಚಿರತೆ ನೋಡಿದ್ದಾಗಿ ಹೇಳುವ ಸ್ಥಳೀಯರು; ಭಯಭೀತರಾದ ಜನತೆ

ಡ್ರೋಣ್‌ ಕ್ಯಾಮೆರಾ ಕಣ್ಣಿಗೂ ಕಾಣಿಸದ ಚಿರತೆ ಜಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ನಗರದ ಹೊಸ ಹುಡ್ಕೊ ಕಾಲೊನಿ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳು ಇಡೀ ದಿನ ಕಾರ್ಯಾಚರಣೆ ನಡೆಸಿದರು. ಡ್ರೋಣ್‌ ಬಳಸಿ ಚಿರತೆಯ ಜಾಡು ಪತ್ತೆ ಹಚ್ಚಲು ಪ್ರಯತ್ನಿಸಿದರಾದರೂ ಸಿಬ್ಬಂದಿಗೆ ಒಂದು ಸಣ್ಣ ಕುರುಹು ಕೂಡ ಸಿಗಲಿಲ್ಲ. ‌

‘ಸ್ಥಳೀಯರು ಚಿರತೆ ನೋಡಿದ್ದಾಗಿ ಹೇಳಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಇಡೀ ದಿನ ಹುಡುಕಾಟ ನಡೆಸಿದ್ದೇವೆ. ಚಿರತೆಯ ಹೆಜ್ಜೆಗುರುತು, ಅದರ ಚಲನವಲನದ ಬಗ್ಗೆ ಸ್ವಲ್ಪ ಕೂಡ ಮಾಹಿತಿ ಸಿಕ್ಕಿಲ್ಲ. ಸಿಬ್ಬಂದಿಯಿಂದ ಪ್ಯಾಟ್ರೋಲಿಂಗ್‌ ನಡೆಯುತ್ತಿದೆ. ಬುಧವಾರವೂ ಕಾರ್ಯಾಚರಣೆ ಇರಲಿದೆ’ ಎಂದು ಆರ್‌ಎಫ್‌ಒ ಚೈತ್ರಾ ಮೆಣಸಿನಕಾಯಿ ತಿಳಿಸಿದರು.

‘ಮನೆಯ ಸಮೀಪ ಚಿರತೆ ಕಾಣಿಸಿಕೊಂಡಿತ್ತು. ನಂತರ, ಅದು ಯಾವ ಕಡೆ ಹೋಯಿತು ಎಂಬುದು ತಿಳಿದಿಲ್ಲ. ತುಂಬಾ ಭಯವಾಗುತ್ತಿದೆ’ ಎಂದು ಸ್ಥಳೀಯರಾದ ಕರುಣಾ ಆತಂಕ ವ್ಯಕ್ತಪಡಿಸಿದ್ದಾರೆ.

‘ಕಾಲೊನಿ ಆಸುಪಾಸಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ.  ಈ ಭಾಗದ ನಿವಾಸಿಗಳು ಭೀತಿಯಿಂದ ಮನೆ ಒಳಗೆ ಇದ್ದಾರೆ. ಇಲ್ಲಿ ನೂರಾರು ಮನೆಗಳು ನಿರ್ಮಾಣವಾಗಿದ್ದರೂ, ಖಾಲಿ ನಿವೇಶನಗಳಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ. ಇದರಿಂದಾಗಿ ಇಲ್ಲಿ ಚಿರತೆ ಕಂಡಿ ರಬಹುದು’ ಎಂದು ಹೊಸ ಹುಡ್ಕೋ ಕಾಲೊನಿ ನಿವಾಸಿಗಳು ತಿಳಿಸಿದ್ದಾರೆ.

ಕಪ್ಪತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಚಿರತೆ ಇತ್ತ ಬಂದಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಆರ್‌ಎಫ್‌ಒ ಚೈತ್ರಾ ಪ್ರತಿಕ್ರಿಯಿಸುವುದು ಹೀಗೆ: ‘ಈ ಸಾಧ್ಯತೆ ಶೇ 90ರಷ್ಟು ಕಡಿಮೆ ಇದೆ. ಅಲ್ಲಿಂದ ಇಲ್ಲೀವರೆಗೆ ಬರಬೇಕು ಅಂದರೆ ಇದರ ಮಧ್ಯೆ ಯಾರಿಗಾದರೂ ಚಿರತೆ ಕಾಣಿಸಿಕೊಳ್ಳಬೇಕಿತ್ತು. ಯಾರಿಗೂ ಕಾಣಿಸದ ರೀತಿ ಯಲ್ಲಿ ಅಲ್ಲಿಂದ ಇಲ್ಲೀವರೆಗೆ ಬಂದಿರುವ ಸಾಧ್ಯತೆಗಳು ಇಲ್ಲವೆನ್ನಬಹುದು’.

ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಫ್‌ ಎ.ವಿ.ಸೂರ್ಯಸೇನ್‌, ‘ಇದುವರೆಗೂ ಗದಗ ನಗರದಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತಾಗಿ ಖಚಿತತೆ ಇಲ್ಲ. ಆದರೂ, ಜನರ ಆತಂಕ ನಿವಾರಣೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಕಾಣಿಸಿಕೊಂಡಿರಬಹುದು ಎನ್ನಲಾಗಿರುವ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

*
ಪತ್ತೆಗಾಗಿ ಡ್ರೋಣ್ ಕ್ಯಾಮೆರಾ ಬಳಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡ ಸನ್ನದ್ಧ ಸ್ಥಿತಿಯಲ್ಲಿದೆ. ರಾತ್ರಿ ಗಸ್ತಿಗಾಗಿ ಸಿಬ್ಬಂದಿ ನಿಯೋಜಿಸಲಾಗುವುದು.
-ಎ.ವಿ.ಸೂರ್ಯಸೇನ್‌, ಡಿಸಿಎಫ್‌, ಗದಗ

*
ಚಿರತೆ ನೋಡಿದ್ದಾಗಿ ಸ್ಥಳೀಯರೊಬ್ಬರು ಹೇಳುತ್ತಾರೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟು ಹುಡುಕಿದರೂ ಚಿರತೆ ಕಂಡು ಬಂದಿಲ್ಲ. ಸುದ್ದಿ ವದಂತಿಯಂತಾಗಿದೆ.
-ಯೂಸುಫ್‌, ನಾಗರಿಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು