ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರುಕಟ್ಟೆಯಲ್ಲಿ ಒಣಮೆಣಸಿನ ಘಾಟು

ಬೆಳೆಗಾರರಿಗೂ, ಗ್ರಾಹಕರಿಗೂ ನಷ್ಟ; ವ್ಯಾಪಾರಿಗಳಿಗೆ ಲಾಭ!
Last Updated 20 ಡಿಸೆಂಬರ್ 2018, 19:40 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಮೆಣಸಿನಕಾಯಿ ಕಟಾವು ಆರಂಭವಾಗಿದ್ದು,ಇಳುವರಿ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.ಇನ್ನೊಂದೆಡೆ ಆವಕ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದ್ದು,ಗ್ರಾಹಕರಿಗೂ ಒಣಮೆಣಸಿನಕಾಯಿ ಘಾಟು ತಟ್ಟಿದೆ.

ಮೆಣಸಿನಕಾಯಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಈ ಬಾರಿ ಮಳೆ ಕೊರತೆಯಿಂದ ಇಳುವರಿ ಗಣನೀಯವಾಗಿ ಕುಸಿದಿದೆ. ಉತ್ತಮ ಮಳೆ ಲಭಿಸಿದರೆ ಎಕರೆಗೆ 4 ರಿಂದ 5 ಕ್ವಿಂಟಲ್‌ ಇಳುವರಿ ಬರುತ್ತದೆ. ಆದರೆ, ಈ ಬಾರಿ ಎಕರೆಗೆ 50 ಕೆ.ಜಿ ಇಳುವರಿ ಬಂದರೆ ಅದೇ ಹೆಚ್ಚು ಎನ್ನುತ್ತಿದ್ದಾರೆ ರೈತರು.

ಮಳೆ ಕೊರತೆಯ ಜತೆಗೆ ಬೆಳೆಗೆ ಬೂದಿ ರೋಗ, ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು ಕಾಯಿಯ ಗುಣಮಟ್ಟವೂ ಗಣನೀಯವಾಗಿ ತಗ್ಗಿದೆ. ‘ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟ ಕಾರಣ ಎಕರೆಗೆ ಸರಾಸರಿ 75 ಕೆ.ಜಿ ಇಳುವರಿಯೂ ಬಂದಿಲ್ಲ. ಹಾಕಿದ ಬಂಡವಾಳವೂ ಕೈಗೆ ಬಾರದಂತಾಗಿದೆ’ ಎಂದು ಲಕ್ಷ್ಮೇಶ್ವರದ ತಾಲ್ಲೂಕಿನ ರೈತ ಮಲ್ಲಿಕಾರ್ಜುನ ಶಿರಸಂಗಿ ಹೇಳಿದರು.

‘ಕೆಂಪು ಬಂಗಾರ’ ಎಂದೇ ಹೆಸರಾದ ಮೆಣಸಿನಕಾಯಿ ರೈತರಿಗೆ ಹೆಚ್ಚಿನ ಆದಾಯ ತಂದು ಕೊಡುವ ಬೆಳೆ. ಹೀಗಾಗಿ ಹೆಚ್ಚಿನ ರೈತರು ಮೆಣಸಿನಕಾಯಿ ಬೆಳೆಯಲು ಆಸಕ್ತಿ ತೋರಿಸುತ್ತಾರೆ. ಮುಂಗಾರಿನಲ್ಲಿ ಹೆಸರು ಬೆಳೆ ಕೈಕೊಟ್ಟರೆ, ಅದನ್ನು ಮೆಣಸಿನಕಾಯಿ ಮತ್ತು ಕಡಲೆ ಬೆಳೆದು ಸರಿದೂಗಿಸಿಕೊಳ್ಳುತ್ತಾರೆ. ಉತ್ತಮ ಮಳೆ ಲಭಿಸಿದರೆ ಮೆಣಸಿನಕಾಯಿಯಿಂದ ಬಂಪರ್‌ ಲಾಭ ಲಭಿಸುತ್ತದೆ. ಈ ಬೆಳೆಯನ್ನೇ ನೆಚ್ಚಿಕೊಂಡು ಉತ್ತರ ಕರ್ನಾಟಕ ಭಾಗದ ರೈತರು ಮಕ್ಕಳ ಮದುವೆ, ಮನೆ ಕಟ್ಟುವ ಯೋಜನೆ ಇಟ್ಟುಕೊಂಡಿರುತ್ತಾರೆ. ಆದರೆ, ಈ ಬಾರಿ ವರುಣನ ಅವಕೃಪೆ ರೈತರ ಆಸೆಯನ್ನು ನುಚ್ಚುನೂರು ಮಾಡಿದೆ.

*ಡಿಸೆಂಬರ್‌ ಮೊದಲ ವಾರದಲ್ಲಿ ಗದಗ ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ಕ್ವಿಂಟಲ್‌ಗೆ ₹ 16 ಸಾವಿರದವರೆಗೆ ದರ ಬಂದಿತ್ತು. ಇಳುವರಿ ಕಡಿಮೆ ಇರುವುದರಿಂದ ಈ ಬಾರಿ ದಾಖಲೆ ಬೆಲೆ ಬರಲಿದೆ
-ಅನ್ವರ್ ಶಿರಹಟ್ಟಿ, ವ್ಯಾಪಾರಿ

*ಈ ವರ್ಷ ಮಳಿ ಇಲ್ರೀ, ಹಿಂಗಾಗಿ ಮೆಣಸಿನಕಾಯಿನ ಭಾಳ ಮಂದಿ ಬೆಳದಿಲ್ರೀ. ರೇಟ್‌ ಚಲೋ ಐತಿ. ಆದ್ರೆ ಬೆಳಿ ಇಲ್ರೀ, ಈಗ ಕಾಯಿ ಬಿಡಿಸೇವಿ. ಮಾರ್ಕೆಟ್ಟಿಗೆ ಒಯ್ಯೋದು ಇನ್ನೂ ಎರಡು ವಾರ ಆಕ್ಕೈತಿ
-ಪರಶುರಾಮ ಕಾಳೆ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT