ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ದುರ್ಗಾದೇವಿ ಜಾತ್ರೆ: ಪ್ರಾಣಿ ಬಲಿ ತಡೆಗೆ ಆಗ್ರಹ

Published 18 ಫೆಬ್ರುವರಿ 2024, 16:24 IST
Last Updated 18 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಬೊಮ್ಮಸಾಗರ ಗ್ರಾಮದಲ್ಲಿ ಫೆ.20ರಿಂದ 24ರವರೆಗೆ ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಕುರಿ, ಕೋಣ ಬಲಿ ಕೊಡುವುದನ್ನು ಜಿಲ್ಲಾಡಳಿತ ತಡೆಯಬೇಕು’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಶ್ರೀ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದುರ್ಗಾದೇವಿ ಜಾತ್ರೆ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಕೋಣಗಳನ್ನು ಬಲಿ ಕೊಡಲಾಗುತ್ತದೆ. ಪ್ರಾಣಿ ಬಲಿ ತಡೆಯುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಈಗಾಗಲೇ ಹೈಕೋರ್ಟ್‌ ಆದೇಶ ನೀಡಿದೆ. ಹೈಕೋರ್ಟ್‌ ನೀಡಿರುವ ಆದೇಶವನ್ನು ಜಿಲ್ಲಾಡಳಿತ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

‘ಪ್ರಾಣಿ ಬಲಿ ತಡೆಯುವಂತೆ ಮಂಗಳವಾರ ಜಿಲ್ಲಾಡಳಿತ ಭವನದಿಂದ ಬೊಮ್ಮಸಾಗರದವರೆಗೆ ‘ಅಹಿಂಸಾ ಪ್ರಾಣಿದಯಾ ಅಧ್ಯಾತ್ಮ ಸಂದೇಶ ಯಾತ್ರೆ’ ಮೂಲಕ ಜಾಗೃತಿ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಈ ಮೆರವಣಿಗೆ ಮೇಲೆ ದಾಳಿ ನಡೆಯುವ ಸಂಭವ ಇದ್ದು, ಪೊಲೀಸರು ರಕ್ಷಣೆ ನೀಡಬೇಕು’ ಎಂದರು.

‘1959ರಲ್ಲೇ ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಕರ್ನಾಟಕ ಪ್ರಾಣಿಬಲಿ ಮುಕ್ತ ರಾಜ್ಯ ಎಂದು ಘೋಷಣೆ ಆಗಿದೆ. ಆದರೂ, ಜಾತ್ರೆಗಳಲ್ಲಿ ಪ್ರಾಣಿ ಬಲಿ ಕೊಡುವುದು ಮುಂದುವರಿದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಪ್ರಾಣಿಬಲಿ ತಡೆಯಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT