ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ

ಗದಗ: ‘ಗದಗ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 12 ಗ್ರಾಮ ಪಂಚಾಯ್ತಿಗಳ ಪೈಕಿ 11ರಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದು, ಉಳಿಕೆ ಒಂದು ಗ್ರಾಮ ಪಂಚಾಯ್ತಿಯಲ್ಲಿ ಸಮಬಲ ಸಾಧಿಸಿದ್ದೇವೆ’ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ, ಶಾಸಕ ಎಚ್.ಕೆ.ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯ ಜನರು ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸುವ ಮೂಲಕ ಗ್ರಾಮೀಣ ಭಾಗದ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಹೊರಗಿನ ಪ್ರಚೋದನೆಗಳನ್ನು ಮೆಟ್ಟಿ ನಿಂತು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ನೈಜ ಗ್ರಾಮೀಣಾಭಿವೃದ್ಧಿಯ ಬೀಜ ಬಿತ್ತಿತ್ತು. ಹಳ್ಳಿಯ ಜನರ ಬದುಕು ಸುಧಾರಿಸಬೇಕು, ಸ್ವಾವಲಂಬಿ ಜೀವನ ನಡೆಸುವ ಮೂಲಕ ಅವರು ಖುಷಿಯಿಂದ ಜೀವನ ನಡೆಸಬೇಕು ಎಂಬ ಆಶಯದಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ತರಲಾಗಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸು ನನಸಾಗಿಸುವ ಕಳಕಳಿ ಇರುವ ಕಾಂಗ್ರೆಸ್‍ಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ’ ಎಂದು ಹೇಳಿದರು.
‘ಗದಗ ವಿಧಾನಸಭಾ ಕ್ಷೇತ್ರದ 12 ಗ್ರಾಮ ಪಂಚಾಯ್ತಿಗಳ 74 ವಾರ್ಡ್‍ಗಳ 219 ಸ್ಥಾನಗಳಲ್ಲಿ 161 ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದಾರೆ. ಬರುವ ದಿನಗಳಲ್ಲಿ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
‘ಜಿಲ್ಲಾ ಚುನಾವಣಾಧಿಕಾರಿಗಳ ಲೋಪದೋಷದ ಮಧ್ಯೆಯೂ ಜನ ಶಾಂತಿಯುತ ಚುನಾವಣೆಗೆ ಸಹಕರಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಗ್ರಾಮೀಣ ಭಾಗದ ಜನರನ್ನು ಗೌರವಯುತವಾಗಿ ಕಾಣಬೇಕು. ನನ್ನ ಕ್ಷೇತ್ರದ ಜನತೆಯನ್ನು ಹಗುರವಾಗಿ ನೋಡಿದರೆ ಸಹಿಸುವುದಿಲ್ಲ’ ಎಂದು ಕಿಡಿಕಾರಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ‘ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸು ಅನುಷ್ಠಾನಗೊಳಿಸಲು ಸರ್ಕಾರ ಗದಗ ಹಾಗೂ ಮೈಸೂರು ಜಿಲ್ಲೆಯಲ್ಲಿ ಪ್ರಯೋಗಾತ್ಮಕವಾಗಿ ‘ಜನ ಯೋಜನೆ’ ಜಾರಿಗೊಳಿಸಿದ್ದು, ಗ್ರಾಮ ಪಂಚಾಯ್ತಿಗಳ ನೂತನ ಸದಸ್ಯರು 2021-22ರಲ್ಲಿ 2022-23ರ ಯೋಜನೆ ಸಿದ್ಧಪಡಿಸಲಿದ್ದಾರೆ. ಈ ಮೂಲಕ ಜನರ ಬೇಡಿಕೆಗಳಿಗೆ ಮನ್ನಣೆ ಸಿಗಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.
ಗ್ರಾಮೀಣ ಮಾದರಿಯಲ್ಲೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ವಾರ್ಡ್‍ಸಭೆ ನಡೆಸಿ, (ಸದ್ಯಕ್ಕೆ ಮಹಾನಗರ ಪಾಲಿಕೆಗೆ ಸೀಮಿತವಿದೆ) ಯೋಜನೆ ರೂಪಿಸಲು ಸರ್ಕಾರ ಆದೇಶಿಸಿದ್ದು ಸ್ವಾಗತಾರ್ಹ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ, ಗದಗ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರಣ್ಣ ಬಳಗಾನೂರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಮುಖಂಡ ಪ್ರಭು ಬುರಬುರೆ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ ಸೇರಿ ಅನೇಕರು ಇದ್ದರು.
‘ತಪ್ಪು ನಡೆದರೂ ಜನ ಸಹಿಸಿಕೊಂಡರು’
‘ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಯಶಸ್ವಿಯಾಗಿ ನಡೆಯಬೇಕು ಎಂಬ ಕಾರಣಕ್ಕೆ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಾಕಷ್ಟು ತಪ್ಪುಗಳನ್ನು ಮಾಡಿದ್ದರೂ ಜನ ಸಹಿಸಿಕೊಂಡಿದ್ದಾರೆ’ ಎಂದು ಶಾಸಕ ಎಚ್.ಕೆ.ಪಾಟೀಲ ಆರೋಪ ಮಾಡಿದರು.
ಶಿರಹಟ್ಟಿ ಮತಕ್ಷೇತ್ರದಲ್ಲಿ ಒಬ್ಬ ಹೆಣ್ಣುಮಗಳ ಮೀಸಲಾತಿಯನ್ನು ಮಹಿಳಾ ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ತಂದಿಟ್ಟರು. ಆದರೂ, ಜನ ಅದನ್ನು ಸಹಿಸಿಕೊಂಡರು. ಕೆಲವೆಡೆ ಮರು ಎಣಿಕೆ ಮಾಡಬೇಕಿತ್ತು. ಆದರೆ, ಅಧಿಕಾರಿಗಳು ಅರ್ಜಿ ಕೊಡುತ್ತೀರಾ? ಇಲ್ಲವೇ? ಎಂದು ಮಾತಿಗೆ ಸಹ ಕೇಳಲಿಲ್ಲ. ಎಲ್ಲವನ್ನೂ ತರಾತುರಿಯಲ್ಲಿ ಮುಗಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ನ್ಯಾಯೋಚಿತವಾಗಿ ಮಾಡಬೇಕಿತ್ತು. ಆದರೆ, ಅದರಲ್ಲಿ ವಿಫಲರಾಗಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.