ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

412 ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಭಾಗ್ಯ

ಜಿಲ್ಲೆಯ 17 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತರಗತಿ ಆರಂಭ
Last Updated 13 ಜೂನ್ 2019, 16:13 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ 17 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಒಂದನೇ ತರಗತಿ ಪ್ರಾರಂಭಗೊಂಡಿದೆ. ಪ್ರತಿ ಶಾಲೆಗೆ 30 ವಿದ್ಯಾರ್ಥಿಗಳಂತೆ ಒಟ್ಟು 510 ವಿದ್ಯಾರ್ಥಿಗಳ ಪ್ರವೇಶಕ್ಕೆ ಈ ಬಾರಿ ಅವಕಾಶ ಇತ್ತು. ಇದುವರೆಗೆ 412 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ಇಂಗ್ಲಿಷ್‌ ಮಾಧ್ಯಮ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಲು ಪಾಲಕರಿಂದಲೂ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಆದರೆ, ಶೈಕ್ಷಣಿಕ ವರ್ಷದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಸರ್ಕಾರ ಈ ನಿರ್ಧಾರ ಪ್ರಕಟಿಸಿದ್ದರಿಂದ ಮತ್ತು ಗ್ರಾಮೀಣ ಭಾಗದಲ್ಲಿ ಸಮರ್ಪಕ ಮಾಹಿತಿಯ ಕೊರತೆಯಿಂದ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ, ಈ ಬಾರಿ ಉಚಿತ ಇಂಗ್ಲಿಷ್‌ ಮಾಧ್ಯಮ ತರಗತಿಗೆ ಪ್ರವೇಶ ಪಡೆಯುವ ಅವಕಾಶ ಕೈತಪ್ಪಿದೆ. ಈ ಆದೇಶ ಹೊರಬೀಳುವ ಹೊತ್ತಿಗಾಗಲೇ ಸಾಕಷ್ಟು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಿದ್ದರು.

‘ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಏಪ್ರಿಲ್‌ನಲ್ಲೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುತ್ತವೆ. ಸೀಟು ಕೈತಪ್ಪಬಾರದು ಎಂಬ ಕಾರಣಕ್ಕೆ ಮಗನನ್ನು ಏಪ್ರಿಲ್‌ನಲ್ಲೇ ಮನೆಯಿಂದ 5 ಕಿ.ಮೀ ದೂರದಲ್ಲಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಒಂದನೇ ತರಗತಿಗೆ ಸೇರಿಸಿದ್ದೆವು. ಈಗ ನಮ್ಮ ಮನೆಯಿಂದ 200 ಮೀಟರ್‌ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಗೊಂಡಿದೆ. ಆದರೆ, ಅವಕಾಶ ಕೈತಪ್ಪಿದೆ’ ಎಂದು ಗದುಗಿನ ಆಶ್ರಯ ಕಾಲೊನಿ ನಿವಾಸಿ ದೀಪಕ ಮರಡಿ ಹೇಳಿದರು.

ಜಿಲ್ಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿರುವ, ಪ್ರತ್ಯೇಕ ಕೊಠಡಿ ಲಭ್ಯವಿರುವ ಮತ್ತು ಇಂಗ್ಲಿಷ್‌ ಭಾಷಾ ಶಿಕ್ಷಕರಿರುವ ಶಾಲೆಗಳನ್ನು ಗುರುತಿಸಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕರಂತೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಮೇ 29ರಂದು ಅದ್ಧೂರಿ ಪ್ರಾರಂಭೋತ್ಸವವನ್ನೂ ಮಾಡಲಾಗಿದೆ. ಆದರೆ, ಜಿಲ್ಲೆಯ ಯಾವುದೇ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಶೇ 100ರಷ್ಟು ಪ್ರವೇಶ ಆಗಿಲ್ಲ.

ಇಂಗ್ಲಿಷ್ ಮಾಧ್ಯಮ ಶಾಲೆಗಳು ಮತ್ತು ಪ್ರವೇಶ ಪಡೆದ ಮಕ್ಕಳ ಸಂಖ್ಯೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ–12 ಗದಗದಲ್ಲಿ 27, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಾವಿಯಲ್ಲಿ 25, ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮುಳಗುಂದದಲ್ಲಿ 26, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಡಿ.ಪಿ.ಇ.ಪಿ) ಸೊರಟೂರುದಲ್ಲಿ 24, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕವಡ್ಡಟ್ಟಿಯಲ್ಲಿ 23, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಡೋಣಿಯಲ್ಲಿ 20, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಣಸಿಕಟ್ಟಿಯಲ್ಲಿ 21, ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬನಹಟ್ಟಿಯಲ್ಲಿ 19, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕನರಗುಂದದಲ್ಲಿ 25, ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.1 ನರಗುಂದದಲ್ಲಿ 26, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಿಂಡೂರುದಲ್ಲಿ 24, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಶಿಗೇರಿಯಲ್ಲಿ 27, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಆರ್.ಬಿ.ಸಿ. ಕಾಲೊನಿ, ರೋಣದಲ್ಲಿ 26, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಛಬ್ಬಿಯಲ್ಲಿ 25, ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಬೆಳ್ಳಟ್ಟಿಯಲ್ಲಿ 23, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮ್ಯಾಗೇರಿ ಓಣಿ ಶಿರಹಟ್ಟಿಯಲ್ಲಿ 24, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಕೋಳದಲ್ಲಿ 27, ಒಟ್ಟು– 412 ಮಕ್ಕಳು ಪ್ರವೇಶ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT