ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ನೀರಿನ ಹೊಡೆತ; ಕೃಷಿ ಜಮೀನು ಕೊರೆತ

ಸಿಂಗಟಾಲೂರ ಬ್ಯಾರೇಜ್‌ ಹೊರಹೋಗುವ ನೀರಿನಿಂದ ಅವಾಂತರ
Published 6 ಆಗಸ್ಟ್ 2024, 5:18 IST
Last Updated 6 ಆಗಸ್ಟ್ 2024, 5:18 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ಮಳೆಗಾಲದಲ್ಲಿ ಜೋರಾಗಿ ಹೊರಹೋಗುವ ನೀರಿನ ರಭಸಕ್ಕೆ ನದಿ ದಂಡೆಯ ಮೇಲಿರುವ ನೂರಾರು ಎಕರೆ ಜಮೀನು ಪ್ರತಿವರ್ಷ ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದ ಹಮ್ಮಿಗಿ ಗ್ರಾಮದ ಹಲವಾರು ರೈತರು ಪ್ರತಿವರ್ಷ ತಮ್ಮ ಫಲವತ್ತಾದ ಜಮೀನನ್ನು ಕಳೆದುಕೊಳ್ಳುತ್ತಲಿದ್ದಾರೆ.

ಪ್ರತಿವರ್ಷ ಜೂನ್, ಜುಲೈ ತಿಂಗಳಿನಲ್ಲಿ ತುಂಗಾ, ಭದ್ರಾ ಹಾಗೂ ವಿವಿಧ ಜಲಮೂಲಗಳಿಂದ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಹಮ್ಮಿಗಿ ಬ್ಯಾರೇಜಿನಲ್ಲಿ ಸದ್ಯ ಗರಿಷ್ಟ 1.9 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಿಕೊಳ್ಳಬಹುದಾಗಿದೆ.

ಮಳೆಗಾಲದಲ್ಲಿ ಬ್ಯಾರೇಜಿನಲ್ಲಿ ಗರಿಷ್ಟ ಪ್ರಮಾಣದ ನೀರನ್ನು ಸಂಗ್ರಹಿಸಿಕೊಂಡು ಹೆಚ್ಚುವರಿ ಹರಿದು ಬರುವ ನೀರನ್ನು ಬ್ಯಾರೇಜಿನ ಗೇಟುಗಳ ಮೂಲಕ ಬ್ಯಾರೇಜಿನ ಕೆಳಭಾಗದ ತುಂಗಭದ್ರಾ ನದಿಗೆ ಬಿಡಲಾಗುತ್ತದೆ. ಹೀಗೆ ಏಕಕಾಲದಲ್ಲಿ ಅಪಾರ ಪ್ರಮಾಣದ ನೀರನ್ನು ಬ್ಯಾರೇಜಿನಿಂದ ಹೊರಬಿಟ್ಟಾಗ ನದಿಯ ನೀರು ಅಕ್ಕಪಕ್ಕದ ಜಮೀನುಗಳನ್ನು ಕೊರೆದುಕೊಂಡು ಮುನ್ನುಗ್ಗುತ್ತದೆ. ಇದರಿಂದಾಗಿ ಅಕ್ಕಪಕ್ಕದ ಜಮೀನಿಗಳು ಸಂಪೂರ್ಣವಾಗಿ ನಾಶವಾಗುತ್ತಲಿವೆ.

ಬ್ಯಾರೇಜಿನಿಂದ ಸುಮಾರು ಒಂದೂವರೆ ಕೀ.ಮೀ ಉದ್ದಕ್ಕೂ ನದಿ ದಂಡೆಯ ಜಮೀನುಗಳು ಆಳವಾಗಿ ಕೊರೆದುಕೊಂಡು ಹೋಗುವುದರಿಂದ ಜಮೀನಿಗಳಲ್ಲಿ ಆಳವಾದ ಮತ್ತು ಅಗಲವಾದ ಬೃಹತ್ ಕೊರಕಲುಗಳು ನಿರ್ಮಾಣವಾಗುತ್ತವೆ. ಹೀಗೆ ನೈಸರ್ಗಿಕವಾಗಿ ನಿರ್ಮಾಣವಾಗುವ ಕೊರಕಲುಗಳನ್ನು ದುರಸ್ತಿಗೊಳಿಸುವುದು ರೈತರಿಗೆ ಅಸಾದ್ಯವಾಗಿದೆ.

ಹಮ್ಮಿಗಿ ಗ್ರಾಮದ ಸುಮಾರು 20 ಜನ ರೈತರ ನೂರಾರು ಎಕರೆ ಫಲವತ್ತಾದ ನೀರಾವರಿ ಜಮೀನು ಪ್ರತಿವರ್ಷ ನಿಧಾನವಾಗಿ ನೀರಿನಲ್ಲಿ ಕೊಚ್ಚಿಕೊಂಡು ಸಂಪೂರ್ಣವಾಗಿ ಕಣ್ಮರೆಯಾಗುತ್ತಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬ್ಯಾರೇಜಿನಿಂದ ಸುಮಾರು 2ಕೀ.ಮೀ.ದೂರದವರೆಗಿನ ನದಿ ದಂಡೆಯ ಜಮೀನುಗಳೆಲ್ಲ ಸಂಪೂರ್ಣವಾಗಿ ನಾಶವಾಗಲಿವೆ.

ಭೂಸ್ವಾಧೀನಕ್ಕೆ ಬಾಧಿತ ರೈತರ ಮನವಿ

ನಿಧಾನವಾಗಿ ನಾಶವಾಗುತ್ತಿರುವ ಜಮೀನುಗಳನ್ನು ಸರ್ಕಾರ ಭೂಸ್ವಾಧೀನ ಪಡಿಸಿಕೊಂಡು ರೈತರಿಗೆ ಪರಿಹಾರ ವಿತರಿಸಬೇಕು ಅಥವಾ ನದಿ ದಂಡೆಗೆ ಸಮುದ್ರ ಕೊರೆತ ತಡೆಗಟ್ಟುವ ಮಾದರಿಯಲ್ಲಿ ನಿರ್ಮಿಸುವ ತಡೆಗೋಡೆ ರೀತಿ ಇಲ್ಲಿಯ ರೈತರ ಜಮೀನುಗಳಿಗೆ ಶಾಶ್ವತವಾಗಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು 2013ರಲ್ಲಿ ಹಮ್ಮಿಗಿ ಗ್ರಾಮದ ಎಸ್.ವಿ.ಕಲ್ಮಠ ಪ್ರೇಮವ್ವ ಸಾಳೇರ ಹಾಲಪ್ಪ ಹೊಳಲಮ್ಮನವರ ವಿಜಯಲಕ್ಷ್ಮಿ ಪೆನ್ಮತ್ಸಾ ಶಾರದಾ ಬಳ್ಳೊಳ್ಳಿ ಮೊದಲಾದ ರೈತರು ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

'10-15 ವರ್ಷಗಳ ಹಿಂದೆ ಹಮ್ಮಿಗಿ ಗ್ರಾಮದ ನದಿ ದಂಡೆಯ ಮೇಲಿದ್ದ 12 ಎಕರೆ ಜಮೀನು ಪ್ರತಿವರ್ಷ ಬ್ಯಾರೇಜಿನಿಂದ ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡ ಹೋಗಿ ಈಗ ಕೇವಲ 2 ಎಕರೆ ಮಾತ್ರ ಉಳಿದಿದೆ. ಇನ್ನು ಹಲವು ವರ್ಷ ಗತಿಸಿದರೆ ಈಗಿರುವ 2ಎಕರೆ ಜಮೀನು ಕೊಚ್ಚಿಕೊಂಡು ಹೋಗಲಿದೆ' ಎಂದು ಹಮ್ಮಿಗಿ ಗ್ರಾಮದ ರೈತ ಹಾಲಯ್ಯ ಲಕ್ಷ್ಮೇಶ್ವರಮಠ ಅವರು 'ಪ್ರಜಾವಾಣಿ'ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.

ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬ್ಯಾರೇಜಿನಿಂದ ವೇಗವಾಗಿ ಹರಿಯುವ ನೀರಿನ ರಭಸಕ್ಕೆ ಜಮೀನಿನಲ್ಲಿ ನಿರ್ಮಾಣವಾಗಿರುವ ಕೊರಕಲು
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬ್ಯಾರೇಜಿನಿಂದ ವೇಗವಾಗಿ ಹರಿಯುವ ನೀರಿನ ರಭಸಕ್ಕೆ ಜಮೀನಿನಲ್ಲಿ ನಿರ್ಮಾಣವಾಗಿರುವ ಕೊರಕಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT