ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ: ಸಮಗ್ರ ಕೃಷಿಯಲ್ಲಿ ರೈತನ ನೆಮ್ಮದಿ

Published 8 ಮಾರ್ಚ್ 2024, 5:47 IST
Last Updated 8 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಗಜೇಂದ್ರಗಡ: ಎಸ್ಸೆಸ್ಸೆಲ್ಸಿ ಬಳಿಕ ಹೊಟ್ಟೆಪಾಡಿಗೆಂದು ಗೋವಾಕ್ಕೆ ದುಡಿಯಲು ಹೋಗಿ ಸಣ್ಣಪುಟ್ಟ ತರಕಾರಿ, ಹಾಲಿನ ವ್ಯಾಪಾರ ಮಾಡಿ ಅದರಿಂದ ಬಂದ ಆದಾಯದಿಂದ ಸ್ವಂತ ಊರಲ್ಲಿ ಜಮೀನು ಖರೀದಿಸಿ ಸಮಗ್ರ ಕೃಷಿಯಲ್ಲಿ ಲಾಭ ಗಳಿಸಿದ ರೈತ ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾನೆ.

ಸಮೀಪದ ರಾಜೂರ ಗ್ರಾಮದ ಸಂಗನಗೌಡ ಶಂಕರಗೌಡ ಪಾಟೀಲ ಈ ಮಾದರಿ ರೈತ. ಎಸ್ಸೆಸ್ಸೆಲ್ಸಿ ಬಳಿಕ ನಾಲ್ಕು ವರ್ಷ ಗೋವಾದಲ್ಲಿ ದುಡಿದು, ನಂತರ 3 ವರ್ಷ ಆಟೋ ಓಡಿಸಿ ಅವುಗಳಿಂದ ಬಂದ ಆದಾಯದಿಂದ ಸ್ವಂತ ಊರಿನ ಸಮೀಪದ ಬೇವಿನಕಟ್ಟಿ ಗ್ರಾಮದ ಹತ್ತಿರ 24 ಎಕರೆ ಜಮೀನು ಖರೀದಿಸಿ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ಸದ್ಯ ಗೋವಾದಲ್ಲಿ ಹಾಲಿನ ವ್ಯಾಪಾರವನ್ನೂ ನಡೆಸುತ್ತಿದ್ದು, ಅಲ್ಲಿ ಹಲವರಿಗೆ ಉದ್ಯೋಗ ನೀಡಿದ್ದಾರೆ.

9 ಎಕರೆ ಜಮೀನಿನಲ್ಲಿ 4,500 ದ್ರಾಕ್ಷಿ, 4 ಎಕರೆಯಲ್ಲಿ 3,000 ಪೇರಲ, 4 ಎಕರೆಯಲ್ಲಿ 2,000 ಮಹಾಗನಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಎಲ್ಲ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಒಂದು ಕುಟುಂಬವನ್ನು ತೋಟ ನಿರ್ವಹಣೆಗೆ ನಿಯೋಜಿಸಿ ಸಂಭಾವನೆ ನೀಡುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಫಸಲು ಬರುತ್ತಿದ್ದು, ಕಳೆದ ವರ್ಷ 100 ಟನ್‌ ದ್ರಾಕ್ಷಿ ಫಸಲು ಬಂದಿದೆ. ಎಲ್ಲ ಖರ್ಚು ಕಳೆದು ಅದರಿಂದ ಸುಮಾರು ₹16 ಲಕ್ಷ ಲಾಭ ಪಡೆದಿದ್ದರು. ಈ ಬಾರಿ ಬದಲಾದ ವಾತಾವರಣ ಹಾಗೂ ಮಳೆ ಕೊರತೆ ನಡುವೆಯೂ ಉತ್ತಮ ಫಸಲು ಬಂದಿದ್ದು, ಅದರಿಂದ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸಂಗನಗೌಡ ಅವರ ಸಮಗ್ರ ಕೃಷಿಗೆ ಅವರ ಸಹೋದರ ಕಳಕನಗೌಡ ಪಾಟೀಲ ಹೆಗಲು ನೀಡಿದ್ದಾರೆ.

ಬೃಹತ್‌ ಕೃಷಿ ಹೊಂಡ: ಸಂಗನಗೌಡ ತಮ್ಮ ತೋಟದಲ್ಲಿ 20 ಗುಂಟೆ ಜಾಗದಲ್ಲಿ ಬೃಹತ್‌ ಕೃಷಿ ಹೊಂಡ ನಿರ್ಮಿಸಿದ್ದಾರೆ. ಜಮೀನಿನಲ್ಲಿರುವ 3 ಕೊಳವೆ ಬಾವಿಗಳಿಂದ ಬರುವ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿ ಹೊಂಡದಿಂದ ತೋಟಕ್ಕೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸುತ್ತಿದ್ದಾರೆ.

‘ಬಡತನ ಕುಟುಂಬದಿಂದ ಬದುಕು ಕಟ್ಟಿಕೊಳ್ಳಲು ಗೋವಾಕ್ಕೆ ಹೋಗಿ ಅಲ್ಲಿ ವ್ಯಾಪಾರದಲ್ಲಿ ಯಶಸ್ಸು ಕಂಡು ಅದರಿಂದ ಬಂದ ಹಣದಲ್ಲಿ ಜಮೀನು ಖರೀದಿಸಿ ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸುವುದರ ಮೂಲಕ ಸಂಗನಗೌಡ ಇತರ ಯುವಕರಿಗೆ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಸಂಗನಗೌಡ ಅವರ ಚಿಕ್ಕಪ್ಪ ಚಂದ್ರಗೌಡ ಪಾಟೀಲ.

ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಸಂಗನಗೌಡ ಪಾಟೀಲ ಅವರ ತೋಟದಲ್ಲಿ ಬಂದಿರುವ ದ್ರಾಕ್ಷಿ ಫಸಲು
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಸಂಗನಗೌಡ ಪಾಟೀಲ ಅವರ ತೋಟದಲ್ಲಿ ಬಂದಿರುವ ದ್ರಾಕ್ಷಿ ಫಸಲು
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಸಂಗನಗೌಡ ಪಾಟೀಲ ಅವರ ತೋಟದಲ್ಲಿ ನಿರ್ಮಿಸಿರುವ ಬೃಹತ್‌ ಕೃಷಿ ಹೊಂಡ
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದ ಸಂಗನಗೌಡ ಪಾಟೀಲ ಅವರ ತೋಟದಲ್ಲಿ ನಿರ್ಮಿಸಿರುವ ಬೃಹತ್‌ ಕೃಷಿ ಹೊಂಡ
ವ್ಯಾಪಾರದಲ್ಲಿ ಒತ್ತಡ ಮತ್ತು ಸಮಸ್ಯೆಗಳು ಹೆಚ್ಚು. ಕೃಷಿಯಲ್ಲಿ ಲಾಭದ ಜೊತೆಗೆ ನೆಮ್ಮದಿ ಇರುತ್ತದೆ. ಹೀಗಾಗಿ ಕೃಷಿ ಕಾಯಕದಲ್ಲಿ ವ್ಯಾಪಾರದಲ್ಲಿನ ಒತ್ತಡ ಮರೆಯುತ್ತಿದ್ದೇನೆ
- ಸಂಗನಗೌಡ ಪಾಟೀಲ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT