ಬುಧವಾರ, ಜನವರಿ 20, 2021
21 °C
ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಶಾಸಕ ಎಚ್‌.ಕೆ.ಪಾಟೀಲ ಸಲಹೆ

ಬಯಲು ಶೌಚಮುಕ್ತ ಗ್ರಾಮಕ್ಕೆ ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಗ್ರಾಮ ಪಂಚಾಯ್ತಿಗಳು ಎಷ್ಟೇ ಪುರಸ್ಕಾರ, ಪ್ರಶಸ್ತಿಗಳನ್ನು ಪಡೆದರೂ ಯಾವ ಹಳ್ಳಿಯೂ ಈವರೆಗೆ ಶೇ 100ರಷ್ಟು ಬಯಲು ಶೌಚಮುಕ್ತ ಗ್ರಾಮ ಆಗಿಲ್ಲ. ಹಾಗಾಗಿ, ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ಗ್ರಾಮದ ಜನರಿಗೆ ತಿಳಿವಳಿಕೆ ಮೂಡಿಸಿ ಎಲ್ಲ ಗ್ರಾಮಗಳೂ ಬಯಲು ಬಹಿರ್ದೆಸೆ ಮುಕ್ತ ಆಗುವಂತೆ ಶ್ರಮಿಸಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದ ಕಾಟನ್‌ ಸೊಸೈಟಿ ಆವರಣದಲ್ಲಿ ಮುಳಗುಂದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಸೋಮವಾರ ನಡೆದ ಗದಗ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಲವು ಕಡೆಗಳಲ್ಲಿ ಶೌಚಾಯಲಗಳಿಗೆ ನೀರು, ದೀಪದ ವ್ಯವಸ್ಥೆ ಇರುವುದಿಲ್ಲ. ಅಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ ಈ ಬಗ್ಗೆ ಶಿಕ್ಷಣ ನೀಡಿ ಎಲ್ಲ ಗ್ರಾಮಗಳನ್ನೂ ಬಯಲು ಬಹಿರ್ದೆಸೆ ಮುಕ್ತ ಮಾಡುವುದಕ್ಕೆ ಶ್ರಮಿಸಬೇಕು. ಗ್ರಾಮೀಣ ಜನರ ಆರ್ಥಿಕ ಅಭ್ಯುದಯಕ್ಕೆ ಹಾಗೂ ಹಳ್ಳಿ ಜನರ ಬದುಕಿನ ಗುಣಮಟ್ಟವನ್ನು ಎತ್ತರಿಸುವುದಕ್ಕೆ ಪರ್ಯಾಯ ಆದಾಯ ವ್ಯವಸ್ಥೆಗಳ ಬಗ್ಗೆ ವಿಚಾರ ಮಾಡಿ, ಅನುಷ್ಠಾನಗೊಳಿಸಬೇಕು’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಡಿ.ಆರ್‌.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ಹೊಸದಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯ್ತಿ ಸದಸ್ಯರು ತಮಗಿರುವ ಅಧಿಕಾರ, ಇತಿಮಿತಿಗಳ ಬಗ್ಗೆ ಅರಿತುಕೊಳ್ಳಬೇಕು. ನಿಮ್ಮ ಅಧಿಕಾರವನ್ನು ಮತ್ತೊಬ್ಬರು ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಡಬಾರದು. ಕಾನೂನಿನ ಅಧ್ಯಯನ, ಅರ್ಥೈಸಿಕೊಳ್ಳುವಿಕೆ, ಅನುಷ್ಠಾನ ಮತ್ತು ಅವುಗಳ ಉದ್ದೇಶಗಳ ಈಡೇರುವಿಕೆ ಇವೆಲ್ಲವೂ ಸದಸ್ಯರ ವಿಶೇಷ ಜವಾಬ್ದಾರಿಗಳಾಗಿದ್ದು, ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಬೇಕು’ ಎಂದು ಹೇಳಿದರು.

ಮಾಜಿ ಶಾಸಕ ಬಿ.ಆರ್‌.ಯಾವಗಲ್ಲ ಮಾತನಾಡಿ, ‘ದೇಶದಲ್ಲಿರುವುದು ಪ್ರಜಾತಂತ್ರ ವ್ಯವಸ್ಥೆ. ಆದರೆ, ಇಲ್ಲೀಗ ಇರುವುದು ಚುನಾಯಿತ ಸರ್ವಾಧಿಕಾರ ವ್ಯವಸ್ಥೆ. ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ ಸಂಪೂರ್ಣವಾಗಿ ಸರ್ವಾಧಿಕಾರದಿಂದ ಕೆಲಸ ಮಾಡುತ್ತಿದೆ. ಎಲ್ಲರನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಹಪಹಪಿ ಅವರಲ್ಲಿದೆ. ಬಿಜೆಪಿಗೆ ಸ್ಥಳೀಯ ಸಂಸ್ಥೆಗಳ ಅವಶ್ಯಕತೆಯೂ ಇಲ್ಲವಾಗಿದೆ. ವಿಕೇಂದ್ರೀಕರಣ ವ್ಯವಸ್ಥೆಯನ್ನೂ ಅದು ವಿರೋಧಿಸುತ್ತಿದೆ. ಹಾಗಾಗಿ, ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಜನರಿಗೆ ಅನುಕೂಲವಾಗುವಂತೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ವಾಸಣ್ಣ ಕುರಡಗಿ ಮಾತನಾಡಿ, ‘ಚುನಾವಣೆಗೂ ಮುನ್ನ ಎಲ್ಲರೂ ಜಿಲ್ಲೆಯಲ್ಲಿ ಬಿಜೆಪಿ ಹವಾ ಹಚ್ಚಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಚುನಾವಣೆ ಫಲಿತಾಂಶ ಬಂದ ನಂತರ ಅವರ ಹವಾ ಎಷ್ಟಿದೆ ಎಂಬುದು ಗೊತ್ತಾಗಿದೆ’ ಎಂದು ಹೇಳಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ಮೋದಿ ಸರ್ಕಾರ ಆಶ್ವಾಸನೆಗಳನ್ನಷ್ಟೇ ನೀಡಿ ಅಧಿಕಾರ ಹಿಡಿಯಿತು. ಚುನಾವಣೆ ಗೆಲ್ಲುವುದಕ್ಕೂ ಮುನ್ನ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಣ ಹಾಕುವುದಾಗಿ ಹೇಳಿತ್ತು. ಅಧಿಕಾರ ಸಿಕ್ಕ ನಂತರ ಕೊಟ್ಟ ಮಾತಿಗೆ ತಪ್ಪಿತು. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಅವಕಾಶ ಕೊಟ್ಟಿದ್ದ ಜನರಿಗೆ ಈಗ ಬಿಜೆಪಿ ಸರ್ಕಾರಗಳ ಬಗ್ಗೆ ಭ್ರಮನಿರಸನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಪೂರ್ಣಿಮಾ, ಹನುಮಂತಪ್ಪ ಪೂಜಾರ, ಎಸ್. ವಿ. ಬಿದರೂರ, ಜಿ.ಎಸ್. ಗಡ್ಡದೇವರಮಠ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ ಇದ್ದರು.

‘ಸಂಕಲ್ಪದೊಂದಿಗೆ ಕೆಲಸ ನಿರ್ವಹಿಸಿ’

‘ಜನಸೇವೆ ಮಾಡಲು ಹಣದ ಅವಶ್ಯತೆ ಅಥವಾ ಸರ್ಕಾರದ ಅನುದಾನವೇ ಬೇಕೆಂದಿಲ್ಲ. ಇಚ್ಛಾಶಕ್ತಿ ಇದ್ದರೆ ಹಣ ಇಲ್ಲದೇ ಜನಸೇವೆ ಮಾಡಬಹುದು. ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಕ್ರಾಂತಿಕಾರ ಬದಲಾವಣೆ ತರಲು ಗ್ರಾಮ ಪಂಚಾಯ್ತಿ ಸದಸ್ಯರು ಸಂಕಲ್ಪದೊಂದಿಗೆ ಕೆಲಸ ಮಾಡಬೇಕು’ ಎಂದು ಶಾಸಕ ಎಚ್.ಕೆ.ಪಾಟೀಲ ತಿಳಿಸಿದರು. 

‘ಮಹಿಳಾ ಸದಸ್ಯೆಯರು ಶಾಲೆಯಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಿಸಬೇಕು. ಪಂಚಾಯ್ತಿ ಸದಸ್ಯರು ಮಾಡುವ ಯಾವ ಕೆಲಸ ಕೂಡ ಸಣ್ಣದಲ್ಲ. ಗ್ರಾಮ ಪಂಚಾಯ್ತಿಗಳಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರ ನೀಡಲಾಗಿದ್ದು, ಸ್ಥಾನದ ಅಧಿಕಾರ ವ್ಯಾಪ್ತಿ ಅರಿತು ರಾಷ್ಟ್ರಕಟ್ಟುವ ನೈಜ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.